ಬೆಳೆ ಹಾನಿಗೆ ಪರಿಹಾರ ಕೋರಿ ಕೇಂದ್ರಕ್ಕೆ ಮನವಿ: ಸಚಿವ ಜಯಚಂದ್ರ

Update: 2017-10-12 15:01 GMT

ಬೆಂಗಳೂರು, ಅ.12: ಇತ್ತೀಚೆಗೆ ಬಂದ ಧಾರಾಕಾರ ಮಳೆಯಿಂದ ರಾಜ್ಯದಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗೆ ಸಮಸ್ಯೆ ಇಲ್ಲ. ಆದರೆ, ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಹಾನಿಗೆ ಪರಿಹಾರ ನೀಡಲು ಕೋರಿ ಕೇಂದ್ರಕ್ಕೆ ಶೀಘ್ರದಲ್ಲೇ ಮನವಿ ಸಲ್ಲಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ತೀವ್ರ ಸ್ವರೂಪದ ಮಳೆ ಕೊರತೆಯಿಂದ ರಾಜ್ಯದಲ್ಲಿ 61 ತಾಲೂಕುಗಳಲ್ಲಿ ಬರ ಸ್ಥಿತಿ ಇದ್ದರೂ, ಕೇಂದ್ರದ ಹೊಸ ಮಾರ್ಗಸೂಚಿ ಅನ್ವಯ ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲು ಸಾಧ್ಯವಿಲ್ಲ ಎಂದರು.

ರಾಜ್ಯದಲ್ಲಿ ಆಗಸ್ಟ್ ನಂತರ ಉತ್ತಮ ಮಳೆಯಾಗಿದ್ದರೂ ರಾಗಿ, ಜೋಳ ಸೇರಿದಂತೆ ಇನ್ನಿತರ ಬೆಳೆಗಳಿಗೆ ‘ಸೈನಿಕ ಹುಳು’ ಹಾವಳಿ ಹಿನ್ನೆಲೆಯಲ್ಲಿ ಸಂಪೂರ್ಣ ಬೆಳೆ ನಷ್ಟವಾಗಿದೆ. ಇನ್ನು ಹತ್ತು ದಿನಗಳಲ್ಲಿ ಬೆಳೆಹಾನಿ ವರದಿ ಪಡೆದು ಕೇಂದ್ರ ಸರಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಿ, ಬೆಳೆ ಹಾನಿಗೆ ಪರಿಹಾರ ನೀಡಲು ಕೋರಲಾಗುವುದು ಎಂದು ತಿಳಿಸಿದರು.

ರಾಗಿ, ಜೋಳ ಸೇರಿ ಇನ್ನಿತರ ಬೆಳೆಗೆ ತಗುಲಿರುವ ‘ಸೈನಿಕ ಹುಳು’ ಹಾವಳಿ ಹಿನ್ನೆಲೆಯಲ್ಲಿ ಹುಳುಗಳ ಹತೋಟಿಗೆ ಸಿಂಪಡಿಸುವ ಕೀಟನಾಶಕವನ್ನು ಶೇ.50ರ ರಿಯಾಯಿತಿ ದರದಲ್ಲಿ ರೈತರಿಗೆ ಒದಗಿಸಲಾಗುವುದು. ಕೇಂದ್ರ ಸರಕಾರದಿಂದ ರಾಜ್ಯದ ಬರ ಪರಿಹಾರ ನಿಧಿಗೆ ಕೇವಲ 367 ಕೋಟಿ ರೂ. ಅನುದಾನ ಬರುತ್ತದೆ. ಬರ ಪೀಡಿತ ಪ್ರದೇಶಗಳನ್ನು ಘೋಷಣೆ ಮಾಡದಿರುವುದರಿಂದ ಅನುದಾನ ನೀಡಲು ಕಷ್ಟ ಎಂದು ಹೇಳಿದರು.

ಕೇಂದ್ರ ಸರಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಹೆಚ್ಚಿನ ನೆರವು ನೀಡುವ ಮೂಲಕ ಸಂಕಷ್ಟದಲ್ಲಿರುವ ರಾಜ್ಯದ ರೈತರ ನೆರವಿಗೆ ಧಾವಿಸಬೇಕು. ಈ ಸಂಬಂಧ ಶೀಘ್ರದಲ್ಲೆ ಕೇಂದ್ರಕ್ಕೆ ವಿಸ್ತೃತ ವರದಿಯ ಮನವಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

18 ಜಿಲ್ಲೆಗಳ 61 ತಾಲೂಕುಗಳು: ಬೆಂಗಳೂರು ನಗರ-ಆನೇಕಲ್, ಬೆಂಗಳೂರು ಈಸ್ಟ್, ಬೆಂ.ಗ್ರಾಮಾಂತರ-ಹೊಸಕೋಟೆ, ಕೋಲಾರ-ಬಂಗಾರಪೇಟೆ, ಕೋಲಾರ, ಮಾಲೂರು, ಶ್ರೀನಿವಾಸಪುರ, ಚಿಕ್ಕಬಳ್ಳಾಪುರ-ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ, ತುಮಕೂರು ಜಿಲ್ಲೆಯ 9 ತಾಲೂಕುಗಳು ಬರ ಪೀಡಿತ.
ಚಿತ್ರದುರ್ಗ-ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಮೊಳಕಾಲ್ಮೂರು, ದಾವಣಗೆರೆ- ಹರಪ್ಪನಹಳ್ಳಿ, ಹರಿಹರ, ಜಗಲೂರು ಮಂಡ್ಯ- ಮಂಡ್ಯ, ಶ್ರೀರಂಗ ಪಟ್ಟಣ, ಬಳ್ಳಾರಿ-ಬಳ್ಳಾರಿ, ಹೊಸಪೇಟೆ, ಸಂಡೂರು, ಬೆಳಗಾವಿ-ಅಥಣಿ, ಬೈಲಹೊಂಗಲ, ಗೋಕಾಕ್, ರಾಮದುರ್ಗ, ಸವದತ್ತಿ, ಬಾಗಲಕೋಟೆ-ಬಾದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ, ಮುಧೋಳ ಸೇರಿ ಒಟ್ಟು 18 ಜಿಲ್ಲೆಗಳ 61 ಬರ ಪೀಡಿತ ತಾಲೂಕುಗಳನ್ನು ಗುರುತಿಸಲಾಗಿದೆ ಎಂದರು.


ರಾಜ್ಯದಲ್ಲಿ ತೀವ್ರ ಸ್ವರೂಪದ ಅಂತರ್ಜಲ ಕುಸಿತದಿಂದ ಬಹುತೇಕ ಜಿಲ್ಲೆಗಳಲ್ಲಿ ತೆಂಗಿನ ಮರ ನೆಲಕಚ್ಚಿವೆ. ಈ ಸಂಬಂಧ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ, ತೆಂಗು ಮಂಡಳಿಯಿಂದ ತೆಂಗಿನ ಸಸಿ ನೆಡಲು 36 ಕೋಟಿ ರೂ. ನೀಡಲಾಗಿದೆಯೇ ಹೊರತು ಪರಿಹಾರದ ವಿಷಯ ಪ್ರಸ್ತಾಪವೆ ಇಲ್ಲ.
-ಟಿ.ಬಿ.ಜಯಚಂದ್ರ, ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News