ಸಯನೈಡ್ ಕಿಲ್ಲರ್ ಮೋಹನ್‌ಗೆ ಜೀವಾವಧಿ ಶಿಕ್ಷೆ

Update: 2017-10-12 15:16 GMT

ಬೆಂಗಳೂರು, ಅ.12: ಬಂಟ್ವಾಳದ ಅನಿತಾ ಎಂಬಾಕೆಗೆ ಸಯನೈಡ್ ನೀಡಿ ಕೊಲೆಗೈದು ಚಿನ್ನಾಭರಣ ದರೋಡೆ ಮಾಡಿದ ಪ್ರಕರಣದಲ್ಲಿ ಸೀರಿಯಲ್ ಕಿಲ್ಲರ್ ಮೋಹನ್‌ಕುಮಾರ್‌ನನ್ನು ತಪ್ಪಿತಸ್ಥ ಎಂದು ಆದೇಶಿಸಿರುವ ಹೈಕೋರ್ಟ್, ಅಪರಾಧಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಕಡಿತೊಳಿಸಿ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಅನಿತಾ ಕೊಲೆ ಪ್ರಕರಣದಲ್ಲಿ ತನ್ನನ್ನು ಖುಲಾಸೆಗೊಳಿಸಬೇಕು ಮತ್ತು ಪ್ರಕರಣ ಸಂಬಂಧ ಅಧೀನ ನ್ಯಾಯಾಲಯ ತನಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ರದ್ದುಪಡಿಸಬೇಕೆಂದು ಕೋರಿ ಮೋಹನ್‌ಕುಮಾರ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಹಾಗೆಯೇ, ಗಲ್ಲು ಶಿಕ್ಷೆ ಖಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕ್ರಿಮಿನಲ್ ರೆಫರ್ಡ್ ಕೇಸ್ ಅರ್ಜಿ ಸಲ್ಲಿಸಿದ್ದರು.
        
ಈ ಎರಡೂ ಅರ್ಜಿಗಳ ವಿಚಾರಣೆಯನ್ನು ಬುಧವಾರವೇ ಪೂರ್ಣಗೊಳಿಸಿ ತೀರ್ಪನ್ನು ಬರೆಯಿಸಿದ ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಮಧ್ಯಾಹ್ನದ ವೇಳೆ ತೀರ್ಪು ಪ್ರಕಟ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಗಲ್ಲು ಶಿಕ್ಷೆಯನ್ನು ಕಡಿತಗೊಳಿಸಿತು. ಆದರೆ, ಜೀವಿತಾವಧಿಯ ಕೊನೆಯವರೆಗೂ ಮೋಹನನನ್ನು ಕಾರಾಗೃಹದಿಂದ ಬಿಡುಗಡೆ ಮಾಡಬಾರದು. ಕ್ಷಮಾದಾನ ಸಹ ನೀಡಬಾರದು ಎಂದು ತೀರ್ಪು ನೀಡಿತು.

ಇದರೊಂದಿಗೆ ಮೂವರು ಮಹಿಳೆಯರ ಕೊಲೆ ಹಾಗೂ ದರೋಡೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯವು ಮೋಹನ್‌ಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಆ ಪೈಕಿ ಒಂದು ಪ್ರಕರಣವನ್ನು ಹೈಕೋರ್ಟ್ ಗುರುವಾರ ಬಗೆಹರಿಸಿದ್ದು, ಇನ್ನೆರಡು ಪ್ರಕರಣಗಳ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ. ಜತೆಗೆ ವಿಚಾರಣೆಗೆ ಖುದ್ದು ಹಾಜರಾಗಿದ್ದ ಮೋಹನ್‌ನನ್ನು ಜೈಲಿಗೆ ವಾಪಸ್ ಕರೆದುಕೊಂಡು ಹೋಗಿ, ಅ.23ರಂದು ಮತ್ತೆ ವಿಚಾರಣೆಗೆ ಕರೆತರುಂತೆ ಜೈಲಾಧಿಕಾರಿಗಳಿಗೆ ನಿರ್ದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News