‘ಮನೆ ಮನೆಗೆ ಕಾಂಗ್ರೆಸ್’ ಅಭಿಯಾನ ಯಶಸ್ವಿಗೊಳಿಸಲು ‘ಕೈ’ ನಾಯಕರಿಗೆ ರಾಹುಲ್ ಗಾಂಧಿ ಸೂಚನೆ

Update: 2017-10-12 16:45 GMT

ಬೆಂಗಳೂರು, ಅ. 12: ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನವನ್ನು ಎಲ್ಲ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಕೈಗೊಳ್ಳಬೇಕು. ಆ ಮೂಲಕ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ರಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ.

ಗುರುವಾರ ಸಂಜೆ ಹೊಸದಿಲ್ಲಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ, ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸುದೀರ್ಘ ಸಮಾಲೋಚನೆ ನಡೆಸಿದರು.

‘ಕೈ’ ಸಾಧನೆ ಮನೆ ಮನೆಗೆ: ಪಕ್ಷ ಸಂಘಟನೆಗೆ ಒತ್ತು ನೀಡುವ ದೃಷ್ಟಿಯಿಂದ ಹಾಗೂ ರಾಜ್ಯ ಸರಕಾರದ ಸಾಧನೆಗಳ ಕಿರು ಹೊತ್ತಿಗೆಯನ್ನು ಪ್ರಕಟಿಸಿದ್ದು, ಆ ಪುಸಕ್ತವನ್ನು ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಕಾಂಗ್ರೆಸ್ ಅಭಿಯಾನದ ವೇಳೆ ರಾಜ್ಯದ ಜನರಿಗೆ ವಿತರಣೆ ಮಾಡಲಿದ್ದಾರೆಂದು ರಾಹುಲ್ ಗಾಂಧಿ ಭೇಟಿ ಬಳಿಕ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಹೇಳಿದರು.

1.10 ಕೋಟಿ ಕಿರು ಹೊತ್ತಿಗೆಯನ್ನು ರಾಜ್ಯದ ಮನೆ ಮನೆಗೆ ಪಕ್ಷದ ಕಾರ್ಯಕರ್ತರು ತಲುಪಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಸಾಧನೆ ಬಗ್ಗೆ ರಾಜ್ಯದ ಮತದಾರರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಪರಮೇಶ್ವರ್ ಇದೇ ವೇಳೆ ತಿಳಿಸಿದರು.

ಜಿಲ್ಲಾಧ್ಯಕ್ಷರುಗಳ ಬದಲಾವಣೆ ಮತ್ತು ಬೂತ್ ಕಮಿಟಿ ರಚನೆ, ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಮತ್ತೊಂದು ಸಭೆ ನಡೆಸಿ ಅಗತ್ಯ ರಣತಂತ್ರ ರೂಪಿಸಲಾಗುವುದು ಎಂದರು.

ಗೊಂದಲ ಇಲ್ಲ: ನನ್ನ ಹಾಗೂ ಸಿಎಂ ಮಧ್ಯೆ ಯಾವುದೇ ಗೊಂದಲಗಳಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಯಕತ್ವವನ್ನು ಒಪ್ಪಿಕೊಂಡಿದ್ದು, ಅವರ ನೇತೃತ್ವದಲ್ಲೆ ಮುಂದಿನ ಚುನಾವಣೆ ಎದುರಿಸಲಾಗುವುದು ಎಂದ ಅವರು, ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಬಗ್ಗೆಯೂ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮನೆ ಮನೆಗೆ ಹೋಗಿ: ಪಕ್ಷ ಸಂಘಟನೆ ಹಾಗೂ ಮತದಾರರ ನಾಡಿ ಮಿಡಿತ ಅರಿಯುವ ದೃಷ್ಟಿಯಿಂದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ರೂಪಿಸಿದ್ದ ‘ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮಕ್ಕೆ ಶಾಸಕರು, ಮುಖಂಡರು ಸ್ಪಂದಿಸಿಲ್ಲ. ಹೀಗಾಗಿ ರಾಹುಲ್ ಗಾಂಧಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ಯಶಸ್ವಿಗೊಳಿಸಿ ಎಂದು ನಿರ್ದೇಶನ ನೀಡಿದ್ದಾರೆಂದು ಗೊತ್ತಾಗಿದೆ.

ಬೆಂಗಳೂರಿನಲ್ಲಿ ಒಂದು ತಿಂಗಳಿಂದ ಎಡಬಿಡದೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ, ರಸ್ತೆ ಗುಂಡಿಗಳಿಗೆ ಸಿಲುಕಿ ನಾಲ್ಕೈದು ಮಂದಿ ಸಾವನ್ನಪ್ಪಿದ ಘಟನೆಗಳು ಸಂಭವಿಸಿವೆ. ಆದರೂ, ಸಚಿವರು, ಶಾಸಕರು ಗಮನಹರಿಸುತ್ತಿಲ್ಲ. ಹೀಗಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂಚಿತವಾಗಿಯೇ ಟಿಕೆಟ್ ಹಂಚಿಕೆ ರಾಜ್ಯಾದ್ಯಂತ ಡಿಸೆಂಬರ್‌ನಿಂದ ಪ್ರವಾಸ ಮಾಡಲಿದ್ದೇವೆ. ಕಾರ್ಯಕರ್ತರ ಅಭಿಪ್ರಾಯದ ಮೇಲೆ ಟಿಕೆಟ್ ಹಂಚಿಕೆ ಮುಂಚಿತವಾಗಿ ಮಾಡುತ್ತೇವೆ. ಕೆಲ ಜಿಲ್ಲಾಧ್ಯಕ್ಷರ ಬದಲಾವಣೆ ಬಗ್ಗೆ ಯೋಚಿಸಲಾಗಿದ್ದು, ನನ್ನ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ. ಇದರಲ್ಲಿ ಯಾವ ಗೊಂದಲವು ಇಲ್ಲ. ಇನ್ನು ಚುನಾವಣೆ ಬಳಿಕ ಸಿಎಂ ಯಾರು ಎಂದು ನಿರ್ಧಾರವಾಗಲಿದೆ.

-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News