ಕೆ.ಸಿ.ರೆಡ್ಡಿ ಪುತ್ಥಳಿ ವಿಧಾನಸೌಧದ ಆವರಣದಲ್ಲಿ ನಿರ್ಮಾಣವಾಗಲಿ: ಎಂ.ವಿ.ರಾಜಶೇಖರನ್

Update: 2017-10-12 16:22 GMT

ಬೆಂಗಳೂರು, ಅ.12: ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿರವರ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪಿಸುವುದರ ಮೂಲಕ ಅವರ ತತ್ವ ಸಿದ್ಧಾಂತಗಳನ್ನು ಯುವ ಪೀಳಿಗೆಗೆ ತಲುಪಿಸುವಂತಾಗಬೇಕು ಎಂದು ಮಾಜಿ ಕೇಂದ್ರ ಚಿವ ಎಂ.ವಿ.ರಾಜಶೇಖರನ್ ತಿಳಿಸಿದ್ದಾರೆ.

ಗುರುವಾರ ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್‌ಫೇರ್ ಫೌಂಡೇಶನ್ ಹಾಗೂ ಕೆ.ಸಿ.ರೆಡ್ಡಿ ಅಭಿಮಾನಿಗಳ ಸಂಘ ನಗರದ ಮೌರ್ಯ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಹೌ ಮೈಸೂರು ಗಾಟ್ ಇಂಡಿಪೆಂಡೆನ್ಸ್ 12 ಅಕ್ಟೋಬರ್ 1947’ ಕಿರುಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದೇಶಕ್ಕೆ 1947ರಲ್ಲಿ ಸ್ವಾತಂತ್ರ ಬಂದಾಗ ಮೈಸೂರು ಪ್ರಾಂತ್ಯವನ್ನು ಅರಸರೇ ಆಳುತ್ತಿದ್ದರು. ಈ ಸಂದರ್ಭದಲ್ಲಿ ಕೆ.ಸಿ.ರೆಡ್ಡಿ ನೇತೃತ್ವದಲ್ಲಿ ಮೈಸೂರು ಚಲೋ ಪ್ರಾರಂಭಿಸಿ ಮೈಸೂರು ರಾಜರು ಅಧಿಕಾರವನ್ನು ಬಿಟ್ಟುಕೊಡುವವರೆಗೂ ನಿರಂತರವಾಗಿ ಹೋರಾಟ ಮಾಡಿದರು. ಇವರ ಹೋರಾಟದ ಫಲವಾಗಿ ಅಕ್ಟೋಬರ್ 12, 2017ರಲ್ಲಿ ಮೈಸೂರು ಪ್ರಾಂತ ಪ್ರಜಾತಂತ್ರವಾಯಿತು ಎಂದು ಸ್ಮರಿಸಿದರು.

ರಾಜ್ಯದ ಮೊದಲ ಮುಖ್ಯಮಂತ್ರಿಯಾದ ಕೆ.ಸಿ.ರೆಡ್ಡಿಯವರೇ ವಿಧಾನಸೌಧದ ನೀಲ ನಕ್ಷೆಯನ್ನು ರೂಪಿಸಿದ್ದರು ಎಂಬುದು ಹಲವರಿಗೆ ಗೊತ್ತಿಲ್ಲ. ಕೆ.ಸಿ.ರೆಡ್ಡಿ ಹಾಗೂ ಕೆಂಗಲ್ ಹನುಮಂತಯ್ಯರವರ ಮುಂದಾಲೋಚನೆಯ ಫಲವಾಗಿ ವಿಧಾನಸೌಧದ ಭವ್ಯ ಕಟ್ಟಡ ನಿರ್ಮಾಣವಾಯಿತು ಎಂದು ಅವರು ನೆನಪು ಮಾಡಿಕೊಂಡರು.

ಈ ವೇಳೆ ಕೆ.ಸಿ.ರೆಡ್ಡಿ ಸರೋಜಮ್ಮ ಕಲ್ಯಾಣ ಫೌಂಡೇಷನ್‌ನ ಮುಖ್ಯಸ್ಥೆ ವಸಂತ ಕವಿತಾ ರೆಡ್ಡಿ, ಹಿರಿಯ ಪತ್ರಕರ್ತ ರಾಮಚಂದ್ರ ಹಾಗೂ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಸೇರಿದಂತೆ ಕೆ.ಸಿ.ರೆಡ್ಡಿ ಅಭಿಮಾನಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News