ಅಂಧ ನೌಕರರ ಕಾರ್ಯ ನಿರ್ವಹಣೆಗೆ ಪೂರಕ ವಾತಾವರಣ ನಿರ್ಮಿಸಲು ಮನವಿ

Update: 2017-10-12 16:24 GMT

ಬೆಂಗಳೂರು, ಅ.12: ರಾಜ್ಯ ಸರಕಾರಿ ಅಂಧ ನೌಕರರ ಸಂಘದ ಪ್ರತಿನಿಧಿಗಳು ಇಂದು 6ನೆ ವೇತನ ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಬೇಡಿಕೆಗಳನ್ನು ಸಲ್ಲಿಸಿದರು.

ವಿಶೇಷವಾಗಿ ಅಂಧ ನೌಕರರು ಹಣಕಾಸಿನ ಬೇಡಿಕೆಗಳಿಗಿಂತ ಸಮರ್ಪಕವಾಗಿ ಕೆಲಸ ನಿರ್ವಹಿಸಲು ಪೂರಕವಾದ ವಾತಾವರಣ ಹಾಗೂ ಅಗತ್ಯ ಉಪಕರಣಗಳನ್ನು ಒದಗಿಸಬೇಕು ಎಂದು ಮನವಿ ಸಲ್ಲಿಸಿದ್ದು ವಿಶೇಷವಾಗಿತ್ತು.

ಅಂಧರು ಕೆಲಸ ನಿರ್ವಹಿಸಲು ಬಳಸುವ ಸ್ಕ್ರೀನ್ ರೀಡರ್‌ನಂತಹ ಸಹಾಯಕ ತಂತ್ರಾಂಶಗಳ ಮೂಲಕ ರಾಜ್ಯ ಸರಕಾರದಲ್ಲಿ ಸೇವೆ ಸಲ್ಲಿಸಲು ವ್ಯವಸ್ಥೆಗೊಳಿಸುವಂತೆ ಈ ಸಂದರ್ಭದಲ್ಲಿ ಕೋರಲಾಯಿತು.

2016ರ ಅಂಗವಿಕಲರ ಹಕ್ಕುಗಳ ಅಧಿನಿಯಮದ ಅನುಸಾರ ಅಂಧ ಮತ್ತು ಅಂಗವಿಕಲ ನೌಕರರನ್ನು ಕೆಲಸ ಮಾಡುವ ಸ್ಥಳಗಳಲ್ಲಿ ಗೌರವಾನ್ವಿತವಾಗಿ ನಡೆಸಿಕೊಳ್ಳುವಂತೆ ಹಾಗೂ ದೃಷ್ಟಿಯುಳ್ಳ ನೌಕರರು ಮಾಡಬಹುದಾದಂತಹ ಎಲ್ಲ ಕೆಲಸಗಳನ್ನು ಅಂಧ ನೌಕರರು ಹೇಗೆ ಮಾಡಬಹುದು ಎಂಬ ಕೆಲವೊಂದು ಅಂಶಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ಪ್ರದರ್ಶಿಸಿ ಆಯೋಗದ ಅಧ್ಯಕ್ಷರ ಗಮನ ಸೆಳೆಯಲಾಯಿತು.

ಅಂಧ ನೌಕರರ ಸಂಘದ ಬೇಡಿಕೆಯ ಕುರಿತು ಈ ಹಿಂದೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಅಧ್ಯಕ್ಷರು, ಇಂದು ಸಂಘದ ಪದಾಧಿಕಾರಿಗಳನ್ನು ತಮ್ಮ ಕಚೇರಿಯಲ್ಲಿ ಭೇಟಿಯಾಗಿ, ಚರ್ಚಿಸಿ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ವೇಳೆ 6ನೆ ವೇತನ ಆಯೋಗದ ಸದಸ್ಯರುಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News