'ಮಂಡಳಿ ನಿಧಿ ಇತರ ಉದ್ದೇಶಗಳಿಗೆ ಬಳಸಬೇಡಿ'

Update: 2017-10-12 16:37 GMT

ಬೆಂಗಳೂರು, ಅ.12: ಕಾರ್ಮಿಕ ಕಲ್ಯಾಣ ಮಂಡಳಿ ನಿಧಿಯನ್ನು ಇತರ ಉದ್ದೇಶಗಳಿಗೆ ಬಳಕೆ ಮಾಡಬಾರದು ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಒತ್ತಾಯ ಮಾಡಿದೆ.

ಗುರುವಾರ ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾರ್ಮಿಕ ಭವನದ ಮುಂಭಾಗ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್, ಸಿಐಟಿಯು ಹಾಗೂ ಸಿಡಬ್ಲ್ಯುಎಫ್‌ಐ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಮಿಕರು ಪಾಲ್ಗೊಂಡು ಕಾರ್ಮಿಕರ ನೋಂದಣಿ, ನವೀಕರಣ ಮತ್ತು ಪರಿಹಾರ ಅರ್ಜಿಗಳು ಸಮಯಕ್ಕೆ ಸರಿಯಾಗಿ ವಿಲೇವಾರಿ ಆಗುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಎನ್.ವೀರಸ್ವಾಮಿ, ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನವನ್ನು ಸ್ಮಾರ್ಟ್‌ಫೋನ್, ಬಸ್‌ಪಾಸ್ ಮತ್ತಿತರೆ ಉದ್ದೇಶಗಳಿಗೆ ಬಳಸಲು ಯೋಜನೆ ರೂಪಿಸಲಾಗಿದೆ. ಈ ಪ್ರಯತ್ನವನ್ನು ಕೂಡಲೇ ಕೈಬಿಟ್ಟು ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕು. ನೋಟು ಅಮಾನ್ಯೀಕರಣ, ಜಿಎಸ್‌ಟಿ ಜಾರಿಯಿಂದ ಕಟ್ಟಡ ಕಾರ್ಮಿಕರಿಗೆ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕರ ನೋಂದಣಿ, ನವೀಕರಣ ಮತ್ತು ಪರಿಹಾರ ಅರ್ಜಿಗಳು ಸಮಯಕ್ಕೆ ಸರಿಯಾಗಿ ವಿಲೇವಾರಿ ಆಗುತ್ತಿಲ್ಲ. ಅಧಿಕಾರಿಗಳಲ್ಲಿ ವಿಚಾರಿಸಿದರೆ ಸಿಬ್ಬಂದಿ ಕೊರತೆ ಇದೆ ಎಂದು ಸಬೂಬು ಹೇಳುತ್ತಾರೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮಾತ್ರ ಮುಂದಾಗುತ್ತಿಲ್ಲ. ಕಾರ್ಮಿಕರಿಗೆ ನೀಡಲಾಗುತ್ತಿರುವ ಪಿಂಚಣಿಯನ್ನು ಮೂರು ಸಾವಿರಕ್ಕೆ ಹೆಚ್ಚಿಸಬೇಕು. ಕಾರ್ಮಿಕರ ಮಕ್ಕಳಿಗೆ 1ನೆ ತರಗತಿಯಿಂದಲೇ ವಿದ್ಯಾರ್ಥಿ ವೇತನ ಕಲ್ಪಿಸಬೇಕು. ಕಾರ್ಮಿಕರಿಗೆ ನೀಡುತ್ತಿರುವ ಮರಣ ಪರಿಹಾರವನ್ನು 54 ಸಾವಿರದಿಂದ 5 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಂ.ರಾಮಕೃಷ್ಣ , ಒಕ್ಕೂಟದ ಸಿಐಟಿಯು, ಸಿಡಬ್ಲ್ಯುಎಫ್‌ಐನ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿ ಮುಖಂಡರಾದ ಪಿ. ನಾಗರಾಜು, ನವೀನ್‌ಕುಮಾರ್, ಬಿ.ಎನ್. ರಘು, ಹನುಮಂತ ಹವಾಲ್ದಾರ್, ಸಿ. ಜಗದೀಶ್ ಸೇರಿ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News