ಪೆಟ್ರೋಲ್, ಡೀಸೆಲ್ ವಾಹನಗಳಿಗೆ ನಿಷೇಧ ಹೇರಿದೆ ಈ ನಗರ!

Update: 2017-10-12 16:52 GMT

ಲಂಡನ್, ಅ. 12: ವಾಯುಮಾಲಿನ್ಯವನ್ನು ನಿವಾರಿಸುವ ಕ್ರಾಂತಿಕಾರಕ ಉಪಕ್ರಮದ ಭಾಗವಾಗಿ, ಬ್ರಿಟನ್‌ನ ಆಕ್ಸ್‌ಫರ್ಡ್ ನಗರವು ತನ್ನ ಕೇಂದ್ರ ಸ್ಥಳದಿಂದ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ನಿಷೇಧಿಸಿದೆ.

2020ರಿಂದ ಲಂಡನ್ ನಗರದ ಕೇಂದ್ರ ಭಾಗವನ್ನು ಪ್ರವೇಶಿಸಲು ಬಯಸುವ ಅನಿಲ ಚಾಲಿತ ವಾಹನಗಳು ಪ್ರತಿ ದಿನ ಶುಲ್ಕ ನೀಡುವ ಯೋಜನೆಯೊಂದನ್ನು ಈಗಾಗಲೇ ರೂಪಿಸಲಾಗಿದೆ.

ಆದರೆ, ಆಕ್ಸ್‌ಫರ್ಡ್ ನಗರವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಶೂನ್ಯ ಮಾಲಿನ್ಯ ವಲಯ’ವನ್ನು ಸ್ಥಾಪಿಸಿದೆ. 2020ರ ಬಳಿಕ, ಆಕ್ಸ್‌ಫರ್ಡ್‌ನ ಕೇಂದ್ರ ಸ್ಥಳಕ್ಕೆ ಹೋಗಲು ಹೊಗೆ ಸೂಸುವ ವಾಹನಗಳಿಗೆ ಅವಕಾಶವಿರುವುದಿಲ್ಲ.

ಅಮೆರಿಕದ ಮಾಲಿನ್ಯ ಪರೀಕ್ಷೆಗೆ ವಂಚಿಸಿದ ಬಗ್ಗೆ 2015ರಲ್ಲಿ ಜರ್ಮನ್ ಕಾರು ನಿರ್ಮಾಣಕಾರ ಫೋಕ್ಸ್ ವ್ಯಾಗನ್ ಒಪ್ಪಿಕೊಂಡ ಬಳಿಕ ವಾಯು ಗುಣಮಟ್ಟ ಸುಧಾರಿಸುವ ಕ್ರಮವಾಗಿ ಹಾಗೂ ಕಠಿಣ ಗುರಿ ತಲುಪುವ ಪ್ರಯತ್ನವಾಗಿ ಡೀಸೆಲ್ ವಾಹನಗಳನ್ನು ತಡೆ ಹಿಡಿಯುವ ಯೋಜನೆ ಯನ್ನು ಜಗತ್ತಿನಾದ್ಯಂತದ ಆರಂಭಿಸಲಾಯಿತು.

 ಆಕ್ಸ್‌ಫರ್ಡ್ ಆವರಣದೊಳಗೆ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳಲ್ಲಿ ಸಂಚರಿಸುವ ನಾವೆಲ್ಲರೂ ನಗರಕ್ಕೆ ವಿಷಾನಿಲದ ಕೊಡುಗೆ ನೀಡುತ್ತಿದ್ದೇವೆ ಎಂದು ನಗರ ಕೌನ್ಸಿಲ್ ಮಂಡಳಿಯ ಸದಸ್ಯ ಜೋನ್ ಟನ್ನರ್ ತಿಳಿಸಿದ್ದಾರೆ.

ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರಕಾರಿ, ಸ್ಥಳೀಯಾಡಳಿತ ಹಾಗೂ ನಿವಾಸಿಗಳು ಕೈಜೋಡಿಸಬೇಕು ಎಂದು ಜೋನ್ ಟನ್ನರ್ ಹೇಳಿದ್ದಾರೆ.

  ಇಲೆಕ್ಟ್ರಿಕಲ್ ವಾಹನ ಹಾಗೂ ಇಲೆಕ್ಟ್ರಿಕ್ ಟ್ಯಾಕ್ಸಿಗೆ ಪಾರ್ಕಿಂಗ್ ಶುಲ್ಕ ಕಡಿತಗೊಳಿಸುವ ಯೋಜನೆಯನ್ನು ಕೂಡ ಆಕ್ಸ್‌ಫರ್ಡ್ ಪರಿಚಯಿಸಲಿದೆ. 2020ರಲ್ಲಿ ಆರಂಭವಾಗುವ ಮೊದಲ ಹಂತದ ಯೋಜನೆಯಲ್ಲಿ ಶೂನ್ಯ ಮಾಲಿನ್ಯ ರಹಿತ ಬಸ್, ಟ್ಯಾಕ್ಸಿ , ಕಾರು, ಲಘು ವಾಣಿಜ್ಯ ವಾಹನಗಳನ್ನು ಆಕ್ಸ್‌ಫರ್ಡ್ ಆವರಣದ ಒಳಗೆ ನಿಷೇಧಿಸಲಾಗುವುದು. ಕ್ರಮೇಣ ಈ ಯೋಜನೆಯಲ್ಲಿ ಒಳಗೊಳ್ಳುವ ರಸ್ತೆಯ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಆಕ್ಸ್‌ಫರ್ಡ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News