ಕ್ಯಾಲಿಫೋರ್ನಿಯ ಕಾಡ್ಗಿಚ್ಚು: 5,000 ಮಂದಿಯ ಸ್ಥಳಾಂತರ; ಮೃತರ ಸಂಖ್ಯೆ 23ಕ್ಕೆ

Update: 2017-10-12 17:02 GMT

ಸೊನೊಮ (ಅಮೆರಿಕ), ಅ. 12: ಉತ್ತರ ಕ್ಯಾಲಿಫೋರ್ನಿಯದಲ್ಲಿ ವೇಗವಾಗಿ ಹಬ್ಬುತ್ತಿರುವ ಕಾಡ್ಗಿಚ್ಚನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಬುಧವಾರ ರಾತ್ರಿಯಿಡೀ ಶ್ರಮಿಸಿದ್ದಾರೆ. ಗಾಳಿಯ ದಿಕ್ಕು ಬದಲಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಅದಕ್ಕಾಗಿ ಸಿದ್ಧತೆಗಳನ್ನು ಮಾಡಿದ್ದಾರೆ.

ಭೀಕರ ಕಾಡ್ಗಿಚ್ಚು ಈವರೆಗೆ 23 ಮಂದಿಯನ್ನು ಬಲಿತೆಗೆದುಕೊಂಡಿದೆ.

ಕಾಡ್ಗಿಚ್ಚಿನ ಒಂದು ತುದಿಯು ಕ್ಯಾಲಿಸ್ಟೊಪ ಪಟ್ಟಣದಿಂದ ಸುಮಾರು 3 ಕಿ.ಮೀ.ಗೂ ಕಡಿಮೆ ದೂರದಲ್ಲಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಪಟ್ಟಣದ 5,000 ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ.

‘‘ವೇಗವಾಗಿ ಗಾಳಿ ಬೀಸುವುದನ್ನು ನಿರೀಕ್ಷಿಸಲಾಗಿದೆ. ಆದರೆ, ಈವರೆಗೆ ಬೀಸಿಲ್ಲ’’ ಎಂದು ಅಗ್ನಿಶಾಮಕ ಘಟಕದ ಮುಖ್ಯಸ್ಥ ಸ್ಟೀವ್ ಕ್ಯಾಂಬೆಲ್ ಗುರುವಾರ ‘ರಾಯ್ಟರ್ಸ್’ಗೆ ತಿಳಿಸಿದರು.

ಬೆಂಕಿಯ ಭೀಕರ ಜ್ವಾಲೆ ಸುಮಾರು 1,70,000 ಎಕರೆ ಭೂಮಿಯನ್ನು ಸುಟ್ಟು ಹಾಕಿದೆ ಹಾಗೂ ಸುಮಾರು 3,500 ಕಟ್ಟಡಗಳನ್ನು ನಾಶಗೊಳಿಸಿದೆ.

ಬೆಂಕಿ ಹೊತ್ತಿಕೊಂಡ ಕಾರಣ ನಿಖರವಾಗಿ ಗೊತ್ತಾಗದಿದ್ದರೂ, ಬಿರುಗಾಳಿಯಿಂದಾಗಿ ಮರಗಳು ಉರುಳಿದಾಗ ವಿದ್ಯುತ್ ಸಾಗಾಟ ತಂತಿಗಳು ಕಡಿದು ಬೆಂಕಿ ಹೊತ್ತಿಕೊಂಡಿರಬೇಕೆಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News