ದೀಪಾವಳಿ ಪಟಾಕಿ ನಿಷೇಧ ಆದೇಶಕ್ಕೆ ಕೋಮುಬಣ್ಣ ಹಚ್ಚುತ್ತಿರುವುದು ನೋವನ್ನುಂಟು ಮಾಡಿದೆ: ಸುಪ್ರೀಂ

Update: 2017-10-13 15:07 GMT

ಹೊಸದಿಲ್ಲಿ,ಅ.13: ದಿಲ್ಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶ(ಎನ್‌ಸಿಆರ್)ದಲ್ಲಿ ಪಟಾಕಿಗಳ ಮಾರಾಟವನ್ನು ನಿಷೇಧಿಸಿರುವ ತನ್ನ ಆದೇಶವನ್ನು ಪರಿಷ್ಕರಿಸಲು ಶುಕ್ರವಾರ ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು, ಜನರು ತನ್ನ ತೀರ್ಪಿಗೆ ಕೋಮುಬಣ್ಣ ನೀಡುತ್ತಿರುವದು ತನಗೆ ನೋವನ್ನುಂಟು ಮಾಡಿದೆ ಎಂದು ಹೇಳಿತು.

ಕಳೆದ ವರ್ಷದಂತೆ ರಾಜಧಾನಿ ಪ್ರದೇಶವನ್ನು ವಿಷಯುಕ್ತ ಹೊಗೆಯು ಆವರಿಸಿಕೊಳ್ಳುವುದನ್ನು ತಡೆಯಲು ದೀಪಾವಳಿಗೆ ಮೊದಲು ಮುನ್ನೆಚ್ಚರಿಕೆ ಕ್ರಮವಾಗಿ ಸರ್ವೋಚ್ಚ ನ್ಯಾಯಾಲಯವು ಸೋಮವಾರ ದಿಲ್ಲಿ ಮತ್ತು ಸುತ್ತುಮುತ್ತಲ ಪ್ರದೇಶಗಳಲ್ಲಿ ಪಟಾಕಿಗಳ ಮಾರಾಟವನ್ನು ನಿಷೇಧಿಸಿದ್ದ ತನ್ನ ಹಿಂದಿನ ಆದೇಶವನ್ನು ಪುನಃ ಹೇರಿತ್ತು.

‘ನಾನು ತುಂಬ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದೇನೆ, ಆದರೆ ಇದು ಬೇರೆಯದೇ ಆಗಿದೆ ಎಂದು ನ್ಯಾ.ಎ.ಕೆ.ಸಿಕ್ರಿ ಅವರು ಹೇಳಿದರು.

ಜನರು ದೀಪಾವಳಿಯನ್ನು ಆಚರಿಸುವುದನ್ನು ನಾವು ತಡೆದಿಲ್ಲ. ಇದು ಕೇವಲ ಒಂದು ವರ್ಷದ ಮಟ್ಟಿಗೆ ಪ್ರಯೋಗವಾಗಿದೆ, ಬಳಿಕ ನಾವು ಅದನ್ನು ಪುನರ್‌ಪರಿಶೀಲಿಸುತ್ತೇವೆ ಎಂದು ನ್ಯಾಯಾಲಯವು ತಿಳಿಸಿತು.

 ಪಟಾಕಿಗಳ ಮಾರಾಟ ನಿಷೇಧವನ್ನು ಮರುಸ್ಥಾಪಿಸುವಂತೆ ಕೋರಿ ಮೂವರು ಮಕ್ಕಳು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಪುರಸ್ಕರಿಸಿದ್ದ ನ್ಯಾ.ಸಿಕ್ರಿ ನೇತೃತ್ವದ ಪೀಠವು ನಿರ್ಬಂಧಗಳನ್ನು ಸಡಿಲಿಸಿ ತಾನು ಸೆಪ್ಟೆಂಬರ್‌ನಲ್ಲಿ ಹೊರಡಿಸಿದ್ದ ಆದೇಶದ ಅನುಷ್ಠಾನ ವನ್ನು ನ.1ರವರೆಗೆ ಮುಂದೂಡಿತ್ತು. ಈ ವರ್ಷ ಅ.19ರಂದು ದೀಪಾವಳಿಯನ್ನು ಆಚರಿಸಲಾಗುತ್ತಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ ದೀಪಾವಳಿಯ ಬಳಿಕ ದಿಲ್ಲಿಯ ವಾತಾವರಣದಲ್ಲಿ ವಿಷಯುಕ್ತ ಹೊಗೆ ತುಂಬಿಕೊಂಡಿದ್ದರಿಂದ ಶಾಲೆಗಳನ್ನು ಮುಚ್ಚುವುದು ಅಧಿಕಾರಿಗಳಿಗೆ ಅನಿವಾರ್ಯವಾಗಿತ್ತು ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ನಿಷೇಧಿಸಲಾಗಿತ್ತು. ಆಗ ದಿಲ್ಲಿಯು ಕಳೆದ ಎರಡು ದಶಕಗಳಲ್ಲೇ ಅತ್ಯಂತ ಹೆಚ್ಚಿನ ವಾಯುಮಾಲಿನ್ಯಕ್ಕೆ ಸಾಕ್ಷಿಯಾಗಿತ್ತು. ಪಟಾಕಿಗಳು ಮತ್ತು ಚಳಿಗಾಲಕ್ಕೆ ಮುನ್ನ ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯಗಳ ದಹನ, ವಾಹನಗಳ ಹೊಗೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳ ಧೂಳು ಇವೆಲ್ಲವೂ ದಿಲ್ಲಿಯ ಅಂದಿನ ಸ್ಥಿತಿಗೆ ಕಾರಣವಾಗಿದ್ದವು.

ಆಗ ಪಟಾಕಿಗಳ ಮಾರಾಟವನ್ನು ನಿಷೇಧಿಸಿದ್ದ ಸರ್ವೋಚ್ಚ ನ್ಯಾಯಾಲಯವು ಪಟಾಕಿ ತಯಾರಕರ ಮೊರೆಯ ಮೇರೆಗೆ ಈ ವರ್ಷದ ಸೆ.12ರಂದು ನಿಷೇಧವನ್ನು ಸಡಿಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News