ಇರಾನ್ ಪರಮಾಣು ಒಪ್ಪಂದ ರದ್ದಾದರೆ ಯುದ್ಧದ ಅಪಾಯ: ಜರ್ಮನಿ ಎಚ್ಚರಿಕೆ

Update: 2017-10-14 17:00 GMT

ಬರ್ಲಿನ್, ಅ.14: ಇರಾನ್ ಜೊತೆಗಿನ ಪರಮಾಣು ಒಪ್ಪಂದವನ್ನು ಅಮೆರಿಕ ಅಂತ್ಯಗೊಳಿಸಿದರೆ ಅಥವಾ ಇರಾನ್ ವಿರುದ್ಧ ಆರ್ಥಿಕ ದಿಗ್ಬಂಧನಕ್ಕೆ ಮುಂದಾದರೆ ಈ ನಡೆಯು ಅಣ್ವಸ್ತ್ರ ಅಭಿವೃದ್ಧಿಗೊಳಿಸಲು ಇರಾನ್‌ಗೆ ಪ್ರೇರಣೆ ನೀಡಬಹುದು ಹಾಗೂ ಯುರೋಪ್ ಬಳಿ ಯುದ್ದದ ಅಪಾಯಕ್ಕೆ ಕಾರಣವಾಗಬಹುದು ಎಂದು ಜರ್ಮನಿಯ ವಿದೇಶ ವ್ಯವಹಾರ ಸಚಿವ ಸಿಗ್ಮರ್ ಗ್ಯಾಬ್ರಿಯೆಲ್ ಎಚ್ಚರಿಸಿದ್ದಾರೆ.

  ಅಮೆರಿಕವು ಒಪ್ಪಂದವನ್ನು ರದ್ದುಗೊಳಿಸಿದರೆ ಅಥವಾ ಇರಾನ್ ವಿರುದ್ಧ ದಿಗ್ಭಂಧನ ವಿಧಿಸಿದರೆ ಇದರಿಂದ ಪಾಶ್ಚಿಮಾತ್ಯ ರಾಷ್ಟ್ರಗಳೊಡನೆ ಒಪ್ಪಂದವನ್ನು ವಿರೋಧಿಸುತ್ತಿರುವ ಇರಾನಿನ ತೀವ್ರವಾದಿಗಳಿಗೆ ಮೇಲುಗೈ ಸಾಧಿಸಲು ಅವಕಾಶ ನೀಡಿದಂತಾಗುತ್ತದೆ ಮತ್ತು ಪರಮಾಣು ಅಸ್ತ್ರ ಅಭಿವೃದ್ಧಿಗೊಳಿಸುವ ಪ್ರಕ್ರಿಯೆಯತ್ತ ಅವರು ಮತ್ತೆ ಮರಳಬಹುದು. ಹೀಗಾದರೆ ನಾವು ಮತ್ತೆ 10-12 ವರ್ಷಗಳ ಹಿಂದಿನ ಪರಿಸ್ಥಿತಿಗೆ, ಅಂದರೆ ಯುರೋಪ್ ಬಳಿಯಲ್ಲೇ ಯುದ್ದದ ಅಪಾಯ ಇರುವ ಸ್ಥಿತಿಗೆ ಮರಳುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

   ಇರಾನ್ 2015ರ ಪರಮಾಣು ಒಪ್ಪಂದದ ಷರತ್ತನ್ನು ಪಾಲಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಪರಿವೀಕ್ಷಕರು ತಿಳಿಸಿದ್ದರೂ ಇದನ್ನು ದೃಢೀಕರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ನಿರಾಕರಿಸಿದ್ದರು. ಇರಾನ್ ಜೊತೆಗಿನ ಒಪ್ಪಂದವನ್ನು ಅಂತಿಮವಾಗಿ ಸಮಾಪ್ತಿಗೊಳಿಸುವ ಸಾಧ್ಯತೆಯ ಬಗ್ಗೆ ಟ್ರಂಪ್ ಎಚ್ಚರಿಸಿದ್ದರು.

 ಉತ್ತರ ಕೊರಿಯಾ ಸೃಷ್ಟಿಸಿರುವ ಪರಮಾಣು ಸಂಕಟದ ಪರಿಸ್ಥಿತಿಯನ್ನು ನಿರ್ವಹಿಸಲು ಅಮೆರಿಕ ಆಡಳಿತ ಪ್ರಯತ್ನ ಮುಂದುವರಿಸುತ್ತಿರುವ ಸಂದರ್ಭದಲ್ಲೇ ಟ್ರಂಪ್ ‘ಕಠಿಣ ಹಾಗೂ ಅಪಾಯಕಾರಿ ಸಂಕೇತ’ವನ್ನು ನೀಡಿದ್ದಾರೆ ಎಂದು ‘ಡ್ಯುಷ್‌ಲ್ಯಾಂಡ್‌ಫಂಕ್’ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಗ್ಯಾಬ್ರಿಯೆಲ್ ಹೇಳಿದರು.

  

 ಇರಾನ್‌ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅಮೆರಿಕದ ದೃಷ್ಟಿಯಿಂದ ಗಮನಿಸುವುದನ್ನು ಇರಾನ್ ಸಮಸ್ಯೆ ಎಂದು ಹೇಳಲಾಗದು. ಈ ರೀತಿಯ ಒಪ್ಪಂದವನ್ನು ಸಮಾಪ್ತಿಗೊಳಿಸಬಹುದು ಎಂದಾದರೆ ನಾವೇಕೆ ಅಣ್ವಸ್ತ್ರಗಳನ್ನು ಪಡೆಯಬಾರದು ಎಂದು ವಿಶ್ವದ ಇತರ ರಾಷ್ಟ್ರಗಳೂ ಭಾವಿಸಬಹುದು ಎಂಬುದೇ ನಮ್ಮ ಬಹುದೊಡ್ಡ ಕಳವಳವಾಗಿದೆ . ಹೀಗಾದರೆ ನಮ್ಮ ಮಕ್ಕಳು, ಮೊಮ್ಮಕ್ಕಳು ಅತ್ಯಂತ ಅಪಾಯಕರ ವಿಶ್ವದಲ್ಲಿ ಬೆಳೆಯಬೇಕಾಗುತ್ತದೆ ಎಂದು ಗ್ಯಾಬ್ರಿಯೆಲ್ ಹೇಳಿದರು. ತನ್ನ ಆಂತರಿಕ ಕಾರ್ಯನೀತಿಯ ಕಾರಣಕ್ಕಾಗಿ ತನ್ನ ಮಿತ್ರರಾಷ್ಟ್ರಗಳ ಅಥವಾ ತನ್ನದೇ ಪ್ರಜೆಗಳ ಭದ್ರತೆಗೆ ಅಪಾಯ ತಂದೊಡ್ಡದಿರಿ ಎಂದವರು ಅಮೆರಿಕವನ್ನು ಆಗ್ರಹಿಸಿದರು.

  ಇರಾನ್ ಪರಮಾಣು ಬಾಂಬನ್ನು ತಯಾರಿಸುವುದನ್ನು ತಡೆಗಟ್ಟುವ ಉದ್ದೇಶದಿಂದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಪರಮಾಣು ಒಪ್ಪಂದವನ್ನು ರೂಪಿಸಿದ್ದು ಇರಾನ್ ಚೀನಾ, ಫ್ರಾನ್ಸ್, ರಶ್ಯ, ಬ್ರಿಟನ್, ಜರ್ಮನಿ ಹಾಗೂ ಯುರೋಪಿಯನ್ ಒಕ್ಕೂಟ ಇದಕ್ಕೆ ಸಹಿ ಹಾಕಿದ್ದವು. ಪರಮಾಣು ಒಪ್ಪಂದ ಕುರಿತ ಅಮೆರಿಕದ ನಿಲುವಿನಿಂದ ದೂರ ಸರಿದಿರುವ ಯುರೋಪಿಯನ್ ಮಿತ್ರರಾಷ್ಟ್ರಗಳು ಒಪ್ಪಂದವನ್ನು ಅತಂತ್ರ ಸ್ಥಿತಿಗೆ ತಂದರೆ ಅದರಿಂದ ವಿದೇಶದಲ್ಲಿ ಅಮೆರಿಕದ ವಿಶ್ವಾಸಾರ್ಹತೆಗೆ ಘಾಸಿಯಾದೀತು ಎಂದು ಅಮೆರಿಕ ಎಚ್ಚರಿಕೆ ನೀಡಿವೆ.

ಇರಾನ್ ವಿರುದ್ಧ ಆರ್ಥಿಕ ದಿಗ್ಭಂದನೆ ವಿಧಿಸಬೇಕೇ ಎಂಬ ಬಗ್ಗೆ 60 ದಿನದೊಳಗೆ ನಿರ್ಧರಿಸುವಂತೆ ಟ್ರಂಪ್ ಅಮೆರಿಕ ಸಂಸತ್ತಿಗೆ ಸೂಚಿಸಿದ್ದಾರೆ. ಇರಾನ್ ವಿರುದ್ಧದ ಆರ್ಥಿಕ ದಿಗ್ಭಂದನೆಯನ್ನು 2016ರಲ್ಲಿ ಅಮೆರಿಕ ತೆರವುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News