ದತ್ತಿ ಪ್ರಶಸ್ತಿಗಳ ಮೊತ್ತ ಹೆಚ್ಚಳಕ್ಕೆ ಡಾ.ಸಿ.ಎನ್ ರಾಮಚಂದ್ರನ್ ಸಲಹೆ

Update: 2017-10-15 16:16 GMT

ಬೆಂಗಳೂರು, ಅ. 15: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಶಕಗಳ ಹಿಂದೆ ಆರಂಭಿಸಿರುವ ದತ್ತಿ ಪ್ರಶಸ್ತಿಗಳ ಮೊತ್ತವನ್ನು ಇಂದಿನ ಕಾಲಕ್ಕೆ ಅನುಗುಣವಾಗಿ ಹೆಚ್ಚಳ ಮಾಡಬೇಕು ಎಂದು ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ತಿಳಿಸಿದ್ದಾರೆ.

ರವಿವಾರ ಕಸಾಪದಲ್ಲಿ ಆಯೋಜಿಸಿದ್ದ ವಿವಿಧ 42 ದತ್ತಿ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ 40-50 ವರ್ಷಗಳ ಹಿಂದೆ ಅಂದಿನ ಸಾಹಿತ್ಯ ಆಸಕ್ತರು, ಉತ್ಸಾಹಿ ಸಾಹಿತಿಗಳನ್ನು ಉತ್ತೇಜಿಸುವ ಸಲುವಾಗಿ, ಅಂದಿನ ಕಾಲಕ್ಕೆ ತಕ್ಕಂತೆ ಹಣ ನಿಗಧಿಪಡಿಸಿ ದತ್ತಿ ಪ್ರಶಸ್ತಿಗಳನ್ನು ಸ್ಥಾಪಿಸಿದ್ದರು. ಆ ಹಣದಿಂದ ಬರುವ ಬಡ್ಡಿ ಮೊತ್ತದಲ್ಲಿ ಉತ್ತಮ ಸಾಹಿತಿಯನ್ನು ಆಯ್ಕೆ ಮಾಡಿ, ಪ್ರಶಸ್ತಿ ನೀಡುವ ಪರಿಪಾಟವಿದೆ ಎಂದು ಹೇಳಿದರು.

ಈಗ ಕಾಲಘಟ್ಟ ಸಾಕಷ್ಟು ಪ್ರಮಾಣದಲ್ಲಿ ಬದಲಾಗಿದೆ. ಎಲ್ಲದರಲ್ಲಿಯೂ ಬಹಳಷ್ಟು ಬದಲಾವಣೆಗಳು ಕಂಡಿವೆ. ಆದರೆ, ಈಗಿನ ಕಾಲಘಟ್ಟಕ್ಕೆ ಆ ದತ್ತಿಯಿಂದ ಬರುತ್ತಿರುವ ಬಡ್ಡಿಯ ಪ್ರಮಾಣ ಅತ್ಯಂತ ಕಡಿಮೆಯಿದೆ. ಕೆಲವು ದತ್ತಿ ಪ್ರಶಸ್ತಿಗಳಂತೂ ಬಹುಮಾನದ ಮೊತ್ತವನ್ನು ಹೇಳಿಕೊಳ್ಳಲೂ ಸಂಕೋಚ ಪಡುವಷ್ಟು ಕಡಿಮೆಯಿದೆ. ಹೀಗಾಗಿ, ಈಗಿನ ಸಂದರ್ಭಕ್ಕೆ ತಕ್ಕಂತೆ ದತ್ತಿ ಮೊತ್ತವನ್ನು ಹೆಚ್ಚಿಸಬೇಕು. ಇದಕ್ಕಾಗಿ ದತ್ತಿ ಸ್ಥಾಪಿಸಿದ ಕುಟುಂಬದವರನ್ನು ಸಂಪರ್ಕಿಸಿ, ಮೊತ್ತ ಹೆಚ್ಚಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕಸಾಪ ಅಧ್ಯಕ್ಷರಿಗೆ ಅವರು ಸೂಚಿಸಿದರು. ಪ್ರಶಸ್ತಿಗಳನ್ನು ಪ್ರದಾನ ಮಾಡುವುದು ಎಂದರೆ ಹಣ ನೀಡುವುದು ಎಂದರ್ಥವಲ್ಲ. ಇದು ಲೇಖಕರ ಸಾಮಾಜಿಕ ಮತ್ತು ಸಾಹಿತ್ಯಿಕ ಗುರುತಿಸುವಿಕೆಯ ಸಂಕೇತ. ಉತ್ತಮ ಸಾಹಿತ್ಯ ಕೃಷಿ ಮಾಡಿದವರಿಗೆ ಪ್ರಶಸ್ತಿ ನೀಡುವುದರಿಂದ ಅಂತಹ ಲೇಖಕರಲ್ಲಿ ಆತ್ಮ ಸಂತೋಷ ಮತ್ತು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಹೀಗಾಗಿ ಯಾರಿಗಾದರೂ ಪ್ರಶಸ್ತಿಗಳು ಬಂದರೆ ಅದನ್ನು ಕೇಳಿ, ಪ್ರಶಸ್ತಿಗಳು ಬಾರದವರು ‘ನಾವು ಪ್ರಶಸ್ತಿ ಪ್ರಿಯರಲ್ಲ. ನಾವು ಪ್ರಶಸ್ತಿಗಾಗಿ ಬರೆಯುವವರಲ್ಲ’ ಎಂದು ಕೊಂಕು ಮಾತನಾಡುವುದು ಸರಿಯಲ್ಲ ಎಂದು ನುಡಿದರು.

ಸಾಹಿತಿ ಡಾ.ಗುರುಲಿಂಗ ಕಾಪಸೆ ಮಾತನಾಡಿ, ಪ್ರಶಸ್ತಿ ಪಡೆಯಬೇಕೆಂಬ ಉದ್ದೇಶದಿಂದ ಸಾಹಿತ್ಯ ರಚಿಸಬಾರದು. ಓದುಗರಿಗೆ ಮನ ಮುಟ್ಟುವ ರೀತಿ, ಸಮಾಜ ಅರ್ಥ ಮಾಡಿಸುವ ನಿಟ್ಟಿನಲ್ಲಿ ಬರೆಯಬೇಕು. ವೌಲಿಕವಾಗಿ ಬರೆದಾಗ ತನ್ನಷ್ಟಕ್ಕೆ ತಾನೇ ಪ್ರಶಸ್ತಿಗಳು ಬರುತ್ತವೆ’ ಎಂದರು.

ಕಾರ್ಯಕ್ರಮದಲ್ಲಿ 2016ನೇ ಸಾಲಿನಲ್ಲಿ ಅತ್ಯುತ್ತಮ ಕೃತಿಗಳನ್ನು ರಚಿಸಿದ 42 ಮಂದಿಗೆ ನಾನಾ ದತ್ತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಕಸಾಪದ ಗೌರವ ಕಾರ್ಯದರ್ಶಿಗಳಾದ ವ.ಚ. ಚನ್ನೇಗೌಡ, ಡಾ.ರಾಜಶೇಖರ ಹತಗುಂದಿ, ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ ಮತ್ತಿತರರು ಉಪಸ್ಥಿತರಿದ್ದರು.

 ‘ಕಸಾಪದಲ್ಲಿ ಉತ್ತಮವಾದ ಉದ್ದೇಶವನ್ನಿಟ್ಟುಕೊಂಡು ದತ್ತಿ ಪ್ರಶಸ್ತಿಗಳನ್ನು ಸ್ಥಾಪಿಸಿದ್ದು, ಇಲ್ಲಿ ಯಾವುದೇ ಲಾಬಿ, ಒತ್ತಡಗಳಿಗೆ ಮಣಿಯುವುದಿಲ್ಲ. ನೈಜ ಲೇಖಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ. ಈ ಮೂಲಕ ಹಿರಿಯ ಆಶಯಗಳಿಗೆ ಸದಾ ಬದ್ಧರಾಗಿದ್ದೇವೆ’

-ಡಾ.ಮನು ಬಳಿಗಾರ್ ಕಸಾಪ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News