ಬೆಂಗಳೂರಿನ ದುರಂತ: ಯಾರು ಹೊಣೆ?

Update: 2017-10-16 03:51 GMT

ಹಲವು ವರ್ಷಗಳ ಹಿಂದೆ ಮುಂಬೈಯಲ್ಲಿ ಸುರಿದ ಮಳೆಯಿಂದ ಈ ದೇಶದ ಎಲ್ಲ ಬೃಹತ್ ನಗರಗಳಿಗೂ ಬಹುದೊಡ್ಡ ಪಾಠವಿತ್ತು. ಆವರೆಗೆ ಪಾತಕಿಗಳ, ಭಯೋತ್ಪಾದಕರ ಕೃತ್ಯಗಳಿಗಷ್ಟೇ ಹೆದರಿ ನಡುಗುತ್ತಿದ್ದ ಮುಂಬೈ ಶಹರ, ಸುದೀರ್ಘ ಮಳೆಗೂ ನಡುಗಿ ಬಿಡುವಂತಹ ಸನ್ನಿವೇಶ ನಿರ್ಮಾಣವಾಯಿತು. ಕಾಯಕ ನಗರವೆಂದು ಹೆಸರುವಾಸಿಯಾದ ಮುಂಬಯಿಯು ಒಂದು ದಿನ ಸುರಿದ ಮಳೆಗೆ ಅಕ್ಷರಶಃ ಮುಳುಗಿಯೇ ಬಿಟ್ಟಿತು. ಜನರು ಬೀದಿಗಿಳಿಯದ ಸ್ಥಿತಿ ನಿರ್ಮಾಣವಾಯಿತು. ನೂರಾರು ಜನರು ಕೊಚ್ಚಿ ಹೋದರು. ಮುಂಬೈ ಮೊದಲ ಬಾರಿಗೆ ತನ್ನ ಭ್ರಮೆ ಕಳಚಿಕೊಂಡು ವಾಸ್ತವಕ್ಕಿಳಿಯಿತು. ಅಭಿವೃದ್ಧಿ ತನ್ನ ಪಾದದ ಬುಡದಲ್ಲಿಯೇ ಬಚ್ಚಿಟ್ಟುಕೊಂಡಿರುವ ವಿಕೋಪದ ದರ್ಶನ ಅವರಿಗಾಯಿತು. ಅಕ್ರಮ ಕಟ್ಟಡಗಳ ನಿರ್ಮಾಣ, ಒಳಚರಂಡಿಗಳ ಅವ್ಯವಸ್ಥೆ, ಮುಚ್ಚಿ ಹೋಗಿರುವ ಚರಂಡಿಗಳು ಇವೆಲ್ಲವೂ ಮಳೆಯ ಜೊತೆಗೆ ಕೈ ಜೋಡಿಸಿದ್ದರಿಂದ ಮುಂಬಯಿಯ ಜನರು ಕೆಲ ದಿನಗಳ ಕಾಲ ದಿಗ್ಬಂಧನಕ್ಕೊಳಗಾದರು. ಇಡೀ ಆರ್ಥಿಕ ಚಟುವಟಿಕೆಯೇ ಸ್ತಬ್ಧವಾಯಿತು. ವಿಪರ್ಯಾಸವೆಂದರೆ ಈ ದುರಂತದ ಬಳಿಕವೂ ಮುಂಬೈ ಎಚ್ಚೆತ್ತುಕೊಂಡಿಲ್ಲ. ಅಂತಹದೊಂದು ಮಳೆ ಮತ್ತೆ ಸುರಿಸಿದರೆ ಅದಕ್ಕೆ ಪರಿಹಾರವೇನು ಎನ್ನುವುದನ್ನು ಇನ್ನೂ ಸ್ಪಷ್ಟವಾಗಿ ಕಂಡುಕೊಂಡಿಲ್ಲ. ಪರಿಣಾಮವಾಗಿಯೇ ವಾರದ ಹಿಂದೆ ಮುಂಬೈಯಲ್ಲಿ ನಡೆದ ಭಾರೀ ಕಾಲ್ತುಳಿತ ಪ್ರಕರಣಕ್ಕೂ ಮಳೆಯನ್ನೇ ಹೊಣೆ ಮಾಡಿ ಸಂಬಂಧಪಟ್ಟವರು ಜಾರಿಕೊಂಡರು. ಹೊರಗೆ ಧಾರಾಕಾರವಾಗಿ ಮಳೆ ಸುರಿದ ಕಾರಣದಿಂದ, ರೈಲು ನಿಲ್ದಾಣದಲ್ಲಿ ಜನರ ಒತ್ತಡ ಹೆಚ್ಚಿತು. ಇದರಿಂದ ಕಾಲ್ತುಳಿತ ಸಂಭವಿಸಿತು ಎಂದು ಅಧಿಕಾರಿಗಳು ಹೇಳಿದರು. ಹಾಗಾದರೆ ಮುಂಬೈಯಲ್ಲಿ ಅಂತಹ ಮಳೆ ಸುರಿದಿರುವುದು ಇದೇ ಮೊದಲ ಬಾರಿಯೇ ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿರಲಿಲ್ಲ. ಮಳೆ ಯಾವತ್ತೂ ಸುರಿಯಬಹುದು. ಮಳೆಗಾಲದಲ್ಲಿ ಮಳೆ ಸುರಿಯಬಾರದು ಎಂದು ನಾವು ಆದೇಶ ನೀಡುವಂತಿಲ್ಲ. ಹೀಗಿರುವಾಗ, ಮುಂದೆಯೂ ಇಂತಹ ಕಾಲ್ತುಳಿತ ಸಂಭವಿಸುವ ಸಾಧ್ಯತೆಗಳಿಲ್ಲವೇ? ಇದಕ್ಕೆ ಪರಿಹಾರವೇನು?
 ಮುಂಬೈ ದುರಂತ ದೇಶದ ಎಲ್ಲ್ಲಾ ಮಹಾನಗರಗಳಿಗೆ ಒಂದು ಎಚ್ಚರಿಕೆಯ ಗಂಟೆಯಾಗಿತ್ತು. ಬೆಂಗಳೂರಿನಂತಹ ನಗರಕ್ಕೆ ಅದೊಂದು ಪಾಠವಾಗಿತ್ತು ಮತ್ತು ಆ ಪಾಠದಿಂದ ಬೆಂಗಳೂರು ತನ್ನನ್ನು ತಾನು ಬೇಗನೇ ತಿದ್ದಿಕೊಂಡಿದ್ದರೆ, ಇಂದು ಸುದೀರ್ಘ ಮಳೆಗೆ ಈ ಪರಿ ತತ್ತರಿಸುವ ಅಗತ್ಯವಿದ್ದಿರಲಿಲ್ಲ. ಬೆಂಗಳೂರಿನಲ್ಲಿ ಜನರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ನಗರಗಳೇ ಹಾಗೆ. ಹಳ್ಳಿಗರ ಬದುಕು ದುರ್ಬರವಾಗುತ್ತಿದ್ದಂತೆಯೇ, ನಗರದ ವಿಲಾಸಿ ಬದುಕು ಆಕರ್ಷಿಸತೊಡಗುತ್ತದೆ. ಕೃಷಿ ಸರ್ವನಾಶವಾಗುತ್ತಿರುವ ಈ ದಿನಗಳಲ್ಲಿ ಗ್ರಾಮೀಣ ಜನರು ನಗರಗಳಿಗೆ ಕೆಲಸ ಅರಸುತ್ತಾ ಬರುವುದು ಸಾಮಾನ್ಯವಾಗಿದೆ. ಇದೇ ಸಂದರ್ಭದಲ್ಲಿ ವಿದ್ಯಾವಂತರೂ ಅಂತಿಮವಾಗಿ ನಗರಗಳನ್ನೇ ಗುರಿಯಾಗಿಸಿಕೊಂಡಿರುತ್ತಾರೆ. ಬೆಂಗಳೂರು ಇಂದು ಕೇವಲ ಕರ್ನಾಟಕವನ್ನು ಮಾತ್ರವಲ್ಲ, ದೇಶದ ಮೂಲೆ ಮೂಲೆಗಳಿಂದ ಜನರನ್ನು ಆಕರ್ಷಿಸುತ್ತಿದೆ. ಮುಂಬಯಿ ತನ್ನ ಒತ್ತಡದಿಂದ ನಿಧಾನಕ್ಕೆ ಕುಸಿಯುತ್ತಿರುವಂತೆಯೇ ಜನರ ಗಮನ ಬೆಂಗಳೂರಿನ ಕಡೆಗೆ ಹರಿದಿದೆ. ಈ ಕಾರಣದಿಂದ ಜನಸಂಖ್ಯೆ ಒತ್ತಡವನ್ನು ಬೆಂಗಳೂರಿಗೆ ತಾಳಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಯಾವ ಮಳೆ ಸುರಿಯದೆಯೂ ಬೆಂಗಳೂರಿನ ಟ್ರಾಫಿಕ್ ಜನರ ಪಾಲಿಗೆ ನುಂಗಲಾರದ ತುತ್ತಾಗಿದೆ. ಈ ಟ್ರಾಫಿಕ್ ಒತ್ತಡದಿಂದ ಪಾರಾಗುವ ಕುರಿತಂತೆ ಸದ್ಯಕ್ಕೆ ಯಾವ ಯೋಜನೆಗಳೂ ಸರಕಾರದ ಬಳಿ ಇಲ್ಲ. ಹೀಗಿರುವಾಗ ಏಕಾಏಕಿ ಹಗಲು ರಾತ್ರಿ ಮಳೆ ಸುರಿದರೆ ಬೆಂಗಳೂರಿನಂತಹ ನಗರದ ಸ್ಥಿತಿ ಏನಾಗಬೇಕು? ಇದಕ್ಕೆ ಯಾವ ಸಿದ್ಧತೆಯನ್ನೂ ಮಾಡಿಕೊಂಡಿರದ ಬೆಂಗಳೂರು ಇದೀಗ ಹಾಹಾಕಾರ ಎಬ್ಬಿಸುತ್ತಿದೆ. ಈಗಾಗಲೇ ಐದಕ್ಕೂ ಅಧಿಕ ಮಂದಿ ಮಳೆಗೆ ಕೊಚ್ಚಿ ಹೋಗಿದ್ದಾರೆ. ಕಾಲುವೆ ಮತ್ತು ಹೆದ್ದಾರಿ ಒಂದಾಗಿ ಬಿಟ್ಟಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಸ್ತೆಗಳೆಲ್ಲ ತನ್ನ ಬಣ್ಣವನ್ನು ಹೊರಗಿಟ್ಟಿವೆ. ಮಳೆಗೆ ರಸ್ತೆಗಳೇ ಕರಗಿ ಹೋಗುತ್ತಿವೆ. ವಾಹನಸಂಚಾರ ತೀರಾ ಕಷ್ಟವಾಗಿದೆ. ಬೀದಿ ವ್ಯಾಪಾರಿಗಳ ಬದುಕು ಈ ಮಳೆಯಲ್ಲಿ ಸಂಪೂರ್ಣ ಕೊಚ್ಚಿ ಹೋಗಿದೆ. ಈ ಮಳೆಯ ದುಷ್ಪರಿಣಾಮ ಮುಂದುವರಿಯಲಿದೆ.
  ನಗರಾಭಿವೃದ್ಧಿ ಇಲಾಖೆಯ ಅಕ್ರಮಗಳನ್ನು ಬೆಂಗಳೂರಿನ ಸದ್ಯದ ಸ್ಥಿತಿ ಬಯಲು ಮಾಡಿದೆ. ಕಾಮಗಾರಿಗಳ ಗುಣಮಟ್ಟವನ್ನು ಈ ಮಳೆ ಪರೀಕ್ಷಿಸಿ ಹೇಳುತ್ತಿದೆ. ಹಾಗೆಯೇ ಚರಂಡಿಗಳ ಅವ್ಯವಸ್ಥೆಯೂ ಇಂದು ಬೆಂಗಳೂರು ಮುಳುಗುವುದಕ್ಕೆ ಒಂದು ಕಾರಣವಾಗಿದೆ. ಇದರಲ್ಲಿ ಜನರು ಮತ್ತು ಸರಕಾರದ ಭಾಗೀದಾರಿಕೆಯಿದೆ. ನಗರದ ಅದೆಷ್ಟೋ ಚರಂಡಿಗಳು, ಕಾಲುವೆಗಳು ಒತ್ತುವರಿಯಾಗಿರುವ ಬಗ್ಗೆ ಕೂಗು ಕೇಳಿ ಬರುತ್ತಲೇ ಇತ್ತು. ಈ ಬಗ್ಗೆ ಸರಕಾರ ನಿಷ್ಠುರವಾಗಿ ಕ್ರಮ ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತಿದೆ. ಎಲ್ಲಿ, ಜನರನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆಯೋ ಎನ್ನುವುದು ಸರಕಾರವನ್ನು ಕಾಡುತ್ತಿದೆ. ಮನುಷ್ಯನ ಸ್ವಾರ್ಥ ಹೇಗೆ ಮನುಷ್ಯನನ್ನೇ ನುಂಗಿ ಹಾಕಬಹುದು ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಬೆಂಗಳೂರು ನಗರ ನಿಂತಿರುವುದೇ ಕೆರೆಗಳ ಮೇಲೆ ಎಂಬ ಮಾತಿದೆ. ಈಗ ಅದನ್ನು, ಬೆಂಗಳೂರು ನಿಂತಿರುವುದು ಕಾಲುವೆ, ಚರಂಡಿಗಳ ಮೇಲೆ ಎಂದೂ ಬದಲಿಸಬಹುದು. ಆದುದರಿಂದಲೇ, ಕಾಲುವೆ, ಚರಂಡಿಗಳಲ್ಲಿ ಹರಿಯಬೇಕಾಗಿರುವ ನೀರು ರಸ್ತೆಗಳಲ್ಲಿ ಹರಿಯತೊಡಗಿದೆ. ಯಾರು ಯಾರನ್ನು ದೂರಬೇಕು? ಇದೊಂದು ರೀತಿ, ಆನೆ, ಚಿರತೆಗಳು ನಗರಕ್ಕೆ ಕಾಲಿಟ್ಟಂತೆಯೇ ಆಗಿದೆ. ಅವುಗಳ ನಿವಾಸವಾಗಿರುವ ಕಾಡುಗಳಲ್ಲಿ ಮನುಷ್ಯ ಹಸ್ತಕ್ಷೇಪ ಮಾಡಿದಾಗ ಅನಿವಾರ್ಯವಾಗಿ ಅದು ಆಹಾರ ಹುಡುಕುತ್ತಾ ನಾಡಿಗೆ ಬರಬೇಕಾಗುತ್ತದೆ. ಚರಂಡಿ, ಕಾಲುವೆಗಳನ್ನು ಒತ್ತುವರಿ ಮಾಡಿ ಅಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿದರೆ, ಅನಿವಾರ್ಯವಾಗಿ ರಸ್ತೆಗಳು ಚರಂಡಿಗಳಾಗಿ ಮಾರ್ಪಾಡಾಬೇಕಾಗುತ್ತದೆ. ಇಂದು ಬೆಂಗಳೂರಿನಲ್ಲಿ ಸಂಭವಿಸಿರುವುದು ಇದೇ ಆಗಿದೆ. ಇಲ್ಲಿ ಸರಕಾರವೆಷ್ಟು ಕಾರಣವೋ, ನಗರದ ಜನರ ಸ್ವಾರ್ಥವೂ ಅಷ್ಟೇ ಕಾರಣವಾಗಿದೆ.
ಬೆಂಗಳೂರಿನ ಈ ಮಳೆ ಸರಕಾರಕ್ಕೂ, ಜನರಿಗೂ ಹಲವು ಪಾಠಗಳನ್ನು ಹೇಳಿಕೊಟ್ಟಿದೆ. ನಮ್ಮ ರಸ್ತೆಗಳು ಒಂದು ಮಳೆಗೇ ಛಿದ್ರವಾಗುವುದಕ್ಕೆ ಯಾರು ಕಾರಣ ಎನ್ನುವುದನ್ನು ಸರಕಾರ ತನಿಖೆಯ ಮೂಲಕ ಕಂಡು ಹಿಡಿಯಬೇಕು. ಹಾಗೆಯೇ ಸುದೀರ್ಘ ಮಳೆಯನ್ನು ತಾಳಿಕೊಳ್ಳುವಂತಹ ಚರಂಡಿಗಳು ಬೆಂಗಳೂರಿನಲ್ಲಿ ಯಾಕಿಲ್ಲ? ಹಾಗಾದರೆ ಬೆಂಗಳೂರು ಯಾವುದೇ ದೂರದೃಷ್ಟಿಯಿಲ್ಲದೆಯೇ ನಿರ್ಮಾಣಗೊಂಡಿದೆಯೇ? ಈ ಪ್ರಶ್ನೆಗಳಿಗೂ ನಾವು ಉತ್ತರ ಕಂಡುಕೊಳ್ಳಬೇಕಾಗಿದೆ. ಈ ಮಳೆಯಿಂದ ಪಾಠ ಕಲಿತು ತಕ್ಷಣ ಚರಂಡಿ, ಕಾಲುವೆಗಳನ್ನು ವಿಸ್ತರಿಸುವ ಕೆಲಸ ನಡೆಯಬೇಕಾಗಿದೆ. ಬೃಹತ್ ಕಟ್ಟಡಗಳು ನಗರದ ಹೊರ ಮೈ ಮಾತ್ರ. ಇದೇ ಸಂದರ್ಭದಲ್ಲಿ, ನಗರದ ನರನಾಡಿಗಳಂತಿರುವ ಚರಂಡಿಗಳು, ಕಾಲುವೆಗಳ ಬಗ್ಗೆ ನಿರ್ಲಕ್ಷವಹಿಸಿದರೆ ಕಟ್ಟಿದ ಯಾವ ಕಟ್ಟಡಗಳೂ ಉಳಿಯಲಾರವು ಎನ್ನುವುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು. ಆದುದರಿಂದ ಒತ್ತುವರಿಯಾಗಿರುವ ಚರಂಡಿ, ಕಾಲುವೆಗಳನ್ನು ಗುರುತಿಸಿ ಅಕ್ರಮ ಕಟ್ಟಡಗಳನ್ನು ನಾಶ ಮಾಡಬೇಕಾಗಿದೆ. ಈ ಮಳೆಯಿಂದಲೂ ಬೆಂಗಳೂರು ಪಾಠ ಕಲಿಯದೇ ಇದ್ದರೆ, ಮುಂಬಯಲ್ಲಿ ಸಂಭವಿಸಿದ ದುರಂತ ಬೆಂಗಳೂರಿನಲ್ಲಿ ಸಂಭವಿಸಲು ಹೆಚ್ಚು ದಿನ ಬೇಕಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News