ತಾಜ್ ಮಹಲ್ ಭಾರತೀಯ ಸಂಸ್ಕೃತಿಯ 'ಕಪ್ಪು ಚುಕ್ಕೆ' : ಬಿಜೆಪಿ ಶಾಸಕ ಸಂಗೀತ್ ಸೋಮ್

Update: 2017-10-16 16:30 GMT

ಲಕ್ನೋ,ಅ.16: ಉತ್ತರ ಪ್ರದೇಶ ಸರಕಾರವು ಈ ತಿಂಗಳ ಆರಂಭದಲ್ಲಿ ತಾಜ್‌ಮಹಲ್‌ನ್ನು ತನ್ನ ಪ್ರವಾಸೋದ್ಯಮ ಕೈಪಿಡಿಯಿಂದ ತೆಗೆದು ಹಾಕಿದ ಬಳಿಕ ಈ ವಿಶ್ಯವಿಖ್ಯಾತ ಸ್ಮಾರಕವು ರಾಜಕೀಯ ವಿವಾದದ ಕೆಸರೆರಚಾಟದಲ್ಲಿ ಸಿಕ್ಕಿಕೊಂಡಿದೆ. ಮೊದಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಾಜ್‌ಮಹಲ್ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದ್ದರು. ಇದೀಗ ರಾಜ್ಯದ ಆಡಳಿತ ಬಿಜೆಪಿಯ ವಿವಾದಾಸ್ಪದ ಶಾಸಕ, ತನ್ನ ದ್ವೇಷಭಾಷಣಗಳಿಗೆ ಕುಖ್ಯಾತರಾಗಿರುವ ಸಂಗೀತ್ ಸೋಮ್ ಅವರು, ಈ ಸ್ಮಾರಕವನ್ನು ನಿರ್ಮಿಸಿದ್ದು ದೇಶದ್ರೋಹಿಗಳು ಮತ್ತು ಇದು ಭಾರತೀಯ ಸಂಸ್ಕೃತಿಗೆ ಕಳಂಕವಾಗಿದೆ ಎಂದು ಕಿಡಿಕಾರಿದ್ದಾರೆ.

‘‘ಉ.ಪ್ರದೇಶದ ಪ್ರವಾಸೋದ್ಯಮ ಕೈಪಿಡಿಯಲ್ಲಿನ ಐತಿಹಾಸಿಕ ತಾಣಗಳ ಪಟ್ಟಿಯಿಂದ ತಾಜ್‌ಮಹಲ್‌ನ್ನು ಕೈಬಿಟ್ಟಿರುವುದು ಬಹಳಷ್ಟು ಜನರಿಗೆ ಚಿಂತೆಯನ್ನುಂಟು ಮಾಡಿದೆ. ನಾವು ಯಾವ ಇತಿಹಾಸವನ್ನು ಹೇಳುತ್ತಿದ್ದೇವೆ? ತಾಜ್‌ಮಹಲ್‌ನ್ನು ನಿರ್ಮಿಸಿದ ವ್ಯಕ್ತಿ ತನ್ನ ತಂದೆಯನ್ನೇ ಜೈಲಿನಲ್ಲಿಟ್ಟಿದ್ದ, ಆತ ಹಿಂದುಗಳ ನರಮೇಧವನ್ನು ಬಯಸಿದ್ದ. ಇದು ಇತಿಹಾಸವಾಗಿದ್ದರೆ ಅದು ಅತ್ಯಂತ ದುರದೃಷ್ಟಕರವಾಗಿದೆ ಮತ್ತು ನಾವು ಇತಿಹಾಸವನ್ನು ಬದಲಿಸುತ್ತೇವೆ, ಈ ಬಗ್ಗೆ ನಾನು ನಿಮಗೆ ಖಾತರಿ ನೀಡುತ್ತೇನೆ’’ ಎಂದು ರವಿವಾರ ಮೀರತ್‌ನಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಸೋಮ್ ಹೇಳಿದ್ದಾರೆ.
ದುರಂತವೆಂದರೆ ದ್ವೇಷವನ್ನು ಕಾರುವ ಭರದಲ್ಲಿ ಸೋಮ್ ಓರ್ವ ಶಾಸಕನಾಗಿರುವ ತನಗೆ ಇತಿಹಾಸ ಜ್ಞಾನವಿಲ್ಲ ಎನ್ನುವುದನ್ನು ಢಾಣಾಡಂಗುರವಾಗಿ ಪ್ರದರ್ಶಿಸಿದ್ದಾರೆ. ತಾಜ್‌ಮಹಲ್‌ನ್ನು ಮೊಘಲ್ ದೊರೆ ಶಾಹಜಹಾನ್ ತನ್ನ ಪತ್ನಿ ಮಮ್ತಾಜ್ ಮಹಲ್ ನೆನಪಿನಲ್ಲಿ ನಿರ್ಮಿಸಿದ್ದರೆ, ಪುತ್ರ ಔರಂಗಜೇಬ್ ಇಳಿವಯಸ್ಸಿನ ತಂದೆಯನ್ನೇ ಸೆರೆಮನೆಗೆ ತಳ್ಳಿ ತಾನೇ ದೊರೆಯಾಗಿ ಮೆರೆದಿದ್ದ. ಆದರೆ ಇಲ್ಲಿ ಸೋಮ್ ಶಾಹಜಹಾನ್‌ನ ಮೂಲಕ ಆತನ ತಂದೆ ಜಹಾಂಗೀರ್‌ನನ್ನೇ ಸೆರೆಮನೆಗೆ ಕಳುಹಿಸಿಬಿಟ್ಟಿದ್ದಾರೆ!
ಸೋಮ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಅವರ ಪಕ್ಷದ ಹಿರಿಯ ಸಹೋದ್ಯೋಗಿ ನಳಿನ್ ಕೊಹ್ಲಿ ಅವರು, ‘‘ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ತಾಜ್‌ಮಹಲ್ ನಮ್ಮ ಇತಿಹಾಸದ ಮಹತ್ವದ ಭಾಗವಾಗಿದೆ. ಅದು ಅದ್ಭುತ ಭಾರತದ ಭಾಗವಾಗಿದೆ. ಇತಿಹಾಸದಲ್ಲಿ ನಡೆದಿದ್ದನ್ನು ಅಳಿಸಲು ಸಾಧ್ಯವಿಲ್ಲ’’ ಎಂದು ಹೇಳಿದ್ದಾರೆ.

ಸೋಮ್ ಹೇಳಿಕೆಯನ್ನು ಬಿಜೆಪಿಯು ಖಂಡಿಸಿದೆಯಾದರೂ ಅವರಿಗೆ ಪಕ್ಷದೊಳಗಿ ನಿಂದಲೇ ಬೆಂಬಲ ವ್ಯಕ್ತವಾಗಿದೆ. ತಾಜ್ ಒಂದು ಪ್ರವಾಸಿ ತಾಣವಾಗಿದೆ. ಅದಕ್ಕೂ ಭಾರತೀಯ ಸಂಸ್ಕೃತಿಗೂ ತಳುಕು ಹಾಕುವುದು ಬೇಡ ಎಂದು ಬಿಜೆಪಿ ಸಂಸದ ಅಶುತೋಷ ವರ್ಮಾ ಹೇಳಿದ್ದಾರೆ.
ಸೋಮ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹೈದರಾಬಾದ್ ಸಂಸದ ಅಸಾದುದ್ದೀನ ಉವೈಸಿ ಅವರು, ‘‘ದೇಶದ್ರೋಹಿಗಳು ನಿರ್ಮಿಸಿರುವ ಸ್ಮಾರಕ(ಕೆಂಪುಕೋಟೆ)ದಿಂದ ರಾಷ್ಟ್ರಧ್ವಜಾ ರೋಹಣ ಮಾಡುವುದನ್ನು ಪ್ರಧಾನಿ ನರೇಂದ್ರ ಮೋದಿಯವರು ನಿಲ್ಲಿಸುತ್ತಾರೆಯೇ? ವಿಶ್ವ ಪರಂಪರೆ ತಾಣಗಳ ಪಟ್ಟಿಯಿಂದ ತಾಜ್‌ಮಹಲ್‌ನ್ನು ಕೈಬಿಡುವಂತೆ ಅವರು (ಬಿಜೆಪಿ) ಯುನೆಸ್ಕೋಗೆ ತಿಳಿಸಲಿ ಎಂದು ನಾನು ಸವಾಲು ಹಾಕುತ್ತಿದ್ದೇನೆ’’ ಎಂದು ಹೇಳಿದರು.
 ಹಾಗಿದ್ದರೆ ಇನ್ನು ಮುಂದೆ ಆ.15ರಂದು ಕೆಂಪುಕೋಟೆಯ ಮೇಲಿನಿಂದ ಭಾಷಣಗಳಿ ಲ್ಲವೇ? ಪ್ರಧಾನಿಯವರು ನೆಹರು ಸ್ಟೇಡಿಯಮ್‌ನಿಂದ ರಾಷ್ಟ್ರವನ್ನುದ್ದೇಶಿಸಿ ಮಾಡುವ ಭಾಷಣ ಕೆಲವರಿಗೆ ಎಣೆಯಿಲ್ಲದ ಸಂತಸ ನೀಡಲಿದೆ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಟ್ವೀಟಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News