ಅಮೆರಿಕ ಕಾಂಗ್ರೆಸ್ ನಲ್ಲಿ ಪ್ರತಿಧ್ವನಿಸಿದ ಗೌರಿ ಲಂಕೇಶ್ ಹತ್ಯೆ, ಕಾಂಚ ಐಲಯ್ಯರಿಗೆ ಬೆದರಿಕೆ ವಿಚಾರ

Update: 2017-10-16 10:35 GMT

ವಾಷಿಂಗ್ಟನ್,ಅ.16 :  ಅಮೆರಿಕಾದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಸದಸ್ಯರೊಬ್ಬರು  ಭಾರತದ ಖ್ಯಾತ ಸಮಾಜ ವಿಜ್ಞಾನಿ ಕಾಂಚ ಐಲಯ್ಯ ಅವರಿಗೆ ಬಂದಿರುವ ಬೆದರಿಕೆಗಳು ಹಾಗೂ  ಪತ್ರಕರ್ತೆ ಗೌರಿ ಲಂಕೇಶ್  ಅವರ ಹತ್ಯೆ ಪ್ರಕರಣಗಳನ್ನು  ಎತ್ತುವುದರೊಂದಿಗೆ  ಭಾರತದಲ್ಲಿನ ಮೇಲಿನ ಎರಡು ಘಟನೆಗಳು ಅಲ್ಲಿನ ಕಾಂಗ್ರೆಸ್ ಅನ್ನು ಪ್ರವೇಶಿಸಿದಂತಾಗಿದೆ

ಅರಿಝೋನಾದ ಎಂಟನೇ ಕಾಂಗ್ರೆಶನಲ್ ಜಿಲ್ಲೆಯ ಪ್ರತಿನಿಧಿಯಾಗಿರುವ ಹೆರಾಲ್ಡ್ ಟ್ರೆಂಟ್ ಫ್ರಾಂಕ್ಸ್ ಈ ಎರಡೂ ವಿಚಾರಗಳನ್ನು  ಅಕ್ಟೋಬರ್ 12ರಂದು ಅಮೆರಿಕಾ ಕಾಂಗ್ರೆಸ್ ನಲ್ಲಿ ತಾವು ಮಾಡಿದ 4 ನಿಮಿಷದ ಅವಧಿಯ ಭಾಷಣದಲ್ಲಿ ಎತ್ತಿದ್ದಾರೆ.

``ನಮ್ಮ ಸಂವಿಧಾನದ ಪ್ರಥಮ ತಿದ್ದುಪಡಿಯು ನಮಗೆಲ್ಲರಿಗೂ ಪ್ರಿಯವಾದ ವಾಕ್ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಮಾನ್ಯ ಸ್ಪೀಕರ್ ಅವರೇ,  ವಿಶ್ವದಾದ್ಯಂತ  ಜನರ ವಾಕ್ ಸ್ವಾತಂತ್ರ್ಯವನ್ನು  ಸತತವಾಗಿ ಅತಿಕ್ರಮಿಸಲಾಗಿದೆ.  ಯಾವುದಾದರೂ ವಿಚಾರದಲ್ಲಿ ಟೀಕೆ ಅಥವಾ ಅಂರ್ತಜಾಲದಲ್ಲಿ  ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಶಿಕ್ಷಾರ್ಹವಾಗುತ್ತದೆ, ಕೆಲವೊಮ್ಮೆ ಸಾವಿಗೂ ಕಾರಣವಾಗುತ್ತದೆ,'' ಎಂದು ಹೇಳಿದ ಫ್ರಾಂಕ್ಸ್ ಭಾರತದ ಆಡಳಿತ ಬಿಜೆಪಿಯ ತೀವ್ರ ಟೀಕಾಕಾರ್ತಿಯಾಗಿದ್ದ ಗೌರಿ ಲಂಕೇಶ್ ಅವರನ್ನು ಅವರ ಮನೆಯೆದುರೇ ಹೇಗೆ ಗುಂಡಿಕ್ಕಿ ಸಾಯಿಸಲಾಯಿತೆಂಬುದನ್ನು ವಿವರಿಸಿದರು.

ಕಾಂಚ ಐಲಯ್ಯ ಅವರ ಬಗ್ಗೆಯೂ ಮಾತನಾಡಿದ ಫ್ರಾಂಕ್ಸ್ ``ಕೆಲವು ವಾರಗಳ ಹಿಂದೆ ಇನ್ನೊಬ್ಬ ಖ್ಯಾತ  ವ್ಯಕ್ತಿ ಹಾಗೂ ಭಾರತದ ಜಾತಿ ವ್ಯವಸ್ಥೆಯ ಟೀಕಾಕಾರರಾಗಿರುವ ಪ್ರೊಫೆಸರ್ ಕಾಂಚ ಐಲಯ್ಯ ಅವರನ್ನು ಹಿಂದೂ ಸಂಸದರೊಬ್ಬರು ಬೆದರಿಸಿದ್ದಾರೆ. ಈ ಸಂಸದರು ಈಗಿನ ಬಿಜೆಪಿ ಸರಕಾರದವರಾಗಿದ್ದಾರೆ ಹಾಗೂ ಕಂಚ ಅವರನ್ನು ನೇಣಿಗೇರಿಸಬೇಕೆಂದು ಹೇಳಿದ್ದಾರೆ,'' ಎಂದು ಫ್ರಾಂಕ್ಸ್ ವಿವರಿಸಿದ್ದಾರೆ.

``ಕಾಂಚ ಐಲಯ್ಯ ಅವರ ವಾಕ್ ಸ್ವಾತಂತ್ರ್ಯಹರಣವಾಗಬಾರದು. ಅವರನ್ನು ರಕ್ಷಿಸುವುದು ಭಾರತ ಸರಕಾರದ ದೊಡ್ಡ ಆದ್ಯತೆಯಾಗಬೇಕು,'' ಎಂದೂ ಅವರು ಹೇಳಿದ್ದಾರೆ.

ಕಾಂಚ ಐಲಯ್ಯ ಅವರ ಕೃತಿ `ಸಾಮಾಜಿಕ ಸ್ಮಗ್ಲೆರ್ಲು ಕೊಮಟೊಲ್ಲು (ಸೋಶಿಯಲ್ ಸ್ಮಗ್ಲರ್ಸ್ : ಕೊವಟ್ಟಿಸ್) ಭಾರೀ ವಿವಾದಕ್ಕೆ ಕಾರಣವಾಗಿದ್ದು  ಆರ್ಯ ವೈಶ್ಯ ಸಂಘಟನೆಗಳು ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿವೆ. ಅವರ ಕೃತಿಯನ್ನು ನಿಷೇಧಿಸಬೇಕೆಂದು ಕೋರಿ ಸುಪ್ರೀಂ ಕೋರ್ಟಿನ ಮುಂದೆ ದಾಖಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸ್ವೀಕರಿಸಲು ನ್ಯಾಯಾಲಯ ನಿರಾಕರಿಸಿದೆ.

ಕಾಂಚ ಐಲಯ್ಯ ಅವರು ತಮ್ಮ ಕೃತಿಯನ್ನು ಸಮರ್ಥಿಸಿಕೊಂಡಿದ್ದು ``ಸೋಶಿಯಲ್ ಸ್ಮಗ್ಲಿಂಗ್ ಒಂದು ನುಡಿಗಟ್ಟು. ಶೋಷಣೆಯ ಆರ್ಥಿಕ ಪ್ರಕ್ರಿಯೆ ಅದಾಗಿದೆ ಅಂದರೆ  ವ್ಯಾಪಾರದಲ್ಲಿ ಲಾಭವಾದರೂ ಸಮಾಜಕ್ಕೆ ಮತ್ತೆ ಹಿಂದೆ ನೀಡದಿರುವುದೆಂದು  ಆರ್ಥ'' ಎಂದರು.

ಒಸ್ಮಾನಿಯಾ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿದ್ದ ಕಂಚ ಇಳಯ್ಯ  ಈಗ ಹೈದರಾಬಾದ್ ನಗರದಲ್ಲಿರುವ ಮೌಲಾನ ಆಝಾದ್ ನ್ಯಾಷನಲ್ ಉರ್ದು ಯುನಿವರ್ಸಿಟಿಯ ಸೆಂಟರ್ ಫಾರ್ ದಿ ಸ್ಟಡಿ ಆಫ್ ಸೋಶಿಯಲ್ ಎಕ್ಸ್‍ಕ್ಲೂಶನ್ ಎಂಡ್ ಇನ್‍ಕ್ಲೂಸಿವ್ ಪಾಲಿಸಿ ಇದರ ನಿರ್ದೇಶಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News