ಕಸಾಯಿಖಾನೆಗಳ ಪರಿಶೀಲನೆ: ತಂಡದ ಮೇಲೆ ಹಲ್ಲೆ, ಪೊಲೀಸ್ ವಾಹನ ಜಖಂ

Update: 2017-10-17 16:56 GMT

ಬೆಂಗಳೂರು, ಅ.17: ಅನಧಿಕೃತವಾಗಿ ಕಸಾಯಿ ಖಾನೆಗಳ ಪರಿಶೀಲನೆಗೆ ಹೋಗಿದ್ದ ಕೋರ್ಟ್ ಕಮಿಷನರ್‌ಗಳು, ಹೈಕೋರ್ಟ್‌ನ ವಕೀಲರು ಹಾಗೂ ಯಲಹಂಕ ಉಪನಗರ ಪೊಲೀಸರ ಮೇಲೆ ನೂರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಗುಂಪೊಂದು ಹಲ್ಲೆ ಮಾಡಿ, ಪೊಲೀಸ್ ವಾಹನವನ್ನು ಜಖಂಗೊಳಿಸಿರುವ ಆರೋಪ ಕೇಳಿ ಬಂದಿದೆ.

ನಗರದ ಯಲಹಂಕ ಉಪನಗರದ ಚಿಕ್ಕಬೆಟ್ಟಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಹೈಕೋರ್ಟ್ ನೇಮಿಸಿದ್ದ ಕೋರ್ಟ್ ಕಮಿಷನರ್ ಸಮಿತಿಯಲ್ಲಿದ್ದ ವಕೀಲರಾದ ಎಚ್.ವಿ.ಹರೀಶ್ ಹಾಗೂ ಡಿ.ಪಿ.ಪ್ರಸನ್ನ, ಸರಕಾರಿ ಅಭಿಯೋಜಕ ಎಸ್.ರಾಚಯ್ಯ, ವಕೀಲ ಪವನ್ ಹಾಗೂ ದೂರುದಾರರಾದ ಕವಿತಾ ಜೈನ್, ಜೋಶಿನ್ ಅಂಥೋಣಿ ಹಾಗೂ ಪೊಲೀಸರ ಮೇಲೆ ಕಸಾಯಿಖಾನೆಯವರು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಕರಣ ಸಂಬಂಧ 15ಕ್ಕೂ ಅಧಿಕ ಮಂದಿಯನ್ನು ಯಲಹಂಕ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯಲ್ಲಿ ಪೊಲೀಸ್ ಹೊಯ್ಸಳ ವಾಹನ ಜಖಂ ಆಗಿದೆ ಎಂದು ತಿಳಿದು ಬಂದಿದೆ.

ಬೆಳಗ್ಗೆಯಿಂದ ಅಕ್ರಮ ಕಸಾಯಿಖಾನೆಗಳ ಪರಿಶೀಲನೆಗೆ ನಾಲ್ಕು ಕಡೆ ಹೋಗಿದ್ದೆವು. ಅಲ್ಲೆಲ್ಲ ಪರಿಶೀಲನೆಗೆ ಸಹಕಾರ ಸಿಕ್ಕಿದ್ದು, ಚಿಕ್ಕಬೆಟ್ಟಹಳ್ಳಿಗೆ ನಮ್ಮ ತಂಡ ಹೋಗುತ್ತಿದ್ದಂತೆ ಅಲ್ಲಿಂದ ದುಷ್ಕರ್ಮಿಗಳ ತಂಡವು ನಮ್ಮನ್ನು ತಡೆದು ಹಲ್ಲೆಗೆ ಮುಂದಾಯಿತು ಎಂದು ಎಚ್.ರಾಚಯ್ಯ ಹೇಳಿದರು.

ಸ್ಥಳೀಯ ಕಸಾಯಿಖಾನೆ ಮಾಲಕರ ಪ್ರಕಾರ, ನಾವು ಅಂಗಡಿಗಳನ್ನು ಮುಚ್ಚಿ ಒಂದು ವಾರವಾಗಿದೆ. ಆದರೂ ಅವರು ನಮ್ಮ ಮನೆಗಳಿಗೆ ಬಂದು, ನೋಟಿಸ್ ಕೊಡಲು ಮುಂದಾದರು. ಆಗ ನಾವು ಸಹಜವಾಗಿ, ನೀವು ಯಾರು, ಏಕೆ ಎಂದು ಪ್ರಶ್ನಿಸಿದ್ದಕ್ಕೆ, ಮನೆಯ ಹೆಂಗಸರ ಮೈ ಮುಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈ ಮಾಡಿದರು. ಆಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

 -ಮಾಲಕ, ಕಸಾಯಿಖಾನೆ


ಕಸಾಯಿಖಾನೆ ಮುಚ್ಚುವಂತೆ ನೋಟಿಸ್ ನೀಡಲು ಹೋಗಿದ್ದ ವಕೀಲರು ಹಾಗೂ ಪೊಲೀಸರ ಮೇಲೆ ಯಲಹಂಕ ಸಮೀಪವಿರುವ ಬೆಟ್ಟಹಳ್ಳಿಯ ಸ್ಥಳೀಯರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೊ ವೀಕ್ಷಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆರೋಪಿಗಳು ಏಕಾಏಕಿ ಕಾರಿನ ಗಾಜನ್ನು ಪುಡಿ ಪುಡಿ ಮಾಡುವುದು ಹಾಗೂ ಕಲ್ಲು ತೂರುವುದು ಕಾನೂನು ಬಾಹಿರ.
-ಸೀಮಂತ್‌ ಕುಮಾರ್‌ಸಿಂಗ್, ಬೆಂಗಳೂರು ಪೂರ್ವ ಹೆಚ್ಚುವರಿ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News