ಭಾರತದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ ನಿಷೇಧಿತ ಕೀಟನಾಶಕಗಳು !

Update: 2017-10-19 04:40 GMT

ಹೊಸದಿಲ್ಲಿ, ಅ. 19: ಅತ್ಯಂತ ವಿಷಕಾರಕ ಎಂಬ ಕಾರಣಕ್ಕಾಗಿ ವಿಶ್ವದ ಇತರೆಡೆಗಳಲ್ಲಿ ನಿಷೇಧ ಇರುವ ಅಥವಾ ಬಳಕೆಗೆ ನಿರ್ಬಂಧ ಇರುವ ಕೀಟನಾಶಕಗಳನ್ನು ಭಾರತದಲ್ಲಿ ವ್ಯಾಪಕವಾಗಿ ಬಳಕೆ ಮಾಡುತ್ತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

ಕೀಟನಾಶಕದಿಂದಾಗಿ ಇತ್ತೀಚೆಗೆ ಮಹಾರಾಷ್ಟ್ರದ ಯವತ್ಮಲ್ ಮತ್ತು ಇತರ ಜಿಲ್ಲೆಗಳಲ್ಲಿ ಸಂಭವಿಸಿದ ರೈತರ ಸಾವಿನಿಂದ ಇದು ದೃಢಪಟ್ಟಿದೆ. ದೇಶಾದ್ಯಂತ ವಿವೇಚನಾರಹಿತವಾಗಿ ಕೀಟನಾಶಕ ಬಳಕೆಯಾಗುತ್ತಿರುವ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.

ಮಹಾರಾಷ್ಟ್ರ ಘಟನೆ ಹಿನ್ನೆಲೆಯಲ್ಲಿ, ದೆಹಲಿ ಮೂಲದ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‌ಮೆಂಟ್, ಹಲವು ದೇಶಗಳಲ್ಲಿ ನಿಷೇಧವಿದ್ದರೂ, ಭಾರತದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಏಳು ಕೀಟನಾಶಕಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಐಎಆರ್‌ಐ ವಿಜ್ಞಾನಿ ಅನುಪಮ್ ವರ್ಮಾ ನೇತೃತ್ವದ ಕೇಂದ್ರೀಯ ಸಮಿತಿಯ ನಿರ್ಧಾರವನ್ನು ಪ್ರಶ್ನಿಸಿದ್ದು, 2015ರಲ್ಲಿ ಪಟ್ಟಿಯ ಪರಿಷ್ಕರಣೆ ವೇಳೆ ಈ ಕೀಟನಾಶಕ ಬಳಕೆಗೆ ಅನುಮತಿ ನೀಡಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದರೆ ತಕ್ಷಣಕ್ಕೆ ಅವುಗಳನ್ನು ನಿಷೇಧಿಸದಿರುವಂತೆ ಸಲಹೆ ಮಾಡಿದೆ.

ಈ ಏಳು ಅಪಾಯಕಾರಿ ಕೀಟನಾಶಕಗಳು, ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾದ 18 ಕ್ಲಾಸ್-1 ಕೀಟನಾಶಕಗಳ ಪಟ್ಟಿಯಲ್ಲಿದ್ದು, 2015-16ರಲ್ಲಿ ದೇಶದಲ್ಲಿ ಬಳಸಲಾದ ಒಟ್ಟು ಕೀಟನಾಶಕಗಳ ಪೈಕಿ ಶೇಕಡ 30ರಷ್ಟು ಇಂಥ ಕೀಟನಾಶಕಗಳು ಸೇರಿವೆ. ಕೇಂದ್ರೀಯ ಸಮಿತಿ 66 ಕೀಟನಾಶಕಗಳ ಪಟ್ಟಿಯನ್ನು ಪರಿಷ್ಕರಿಸಿ, 2018ರಿಂದ 13 ಕೀಟನಾಶಕಗಳ ನಿಷೇಧಕ್ಕೆ ಶಿಫಾರಸ್ಸು ಮಾಡಿದ್ದು, ಉಳಿದ ಆರು ಕೀಟನಾಶಕಗಳನ್ನು ಹಂತಹಂತವಾಗಿ 2020ರ ವೇಳೆಗೆ ನಿಷೇಧಿಸುವಂತೆ ಸಲಹೆ ಮಾಡಿದೆ. ಆದರೆ ಈ ಏಳು ಕೀಟನಾಶಕಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಮುಂದಿನ ಪರಿಷ್ಕರಣೆವರೆಗೆ ಅದರ ಬಳಕೆಗೆ ಅವಕಾಶ ನೀಡಿರುವುದು ಸಂಶೋಧಕರು ಮತ್ತು ತಜ್ಞರ ಕಳವಳಕ್ಕೆ ಕಾರಣವಾಗಿದೆ.

"ನಮ್ಮ ನಿರ್ಬಂಧ ವ್ಯವಸ್ಥೆಯಲ್ಲಿರುವ ಅಂತರ ಸರಿಪಡಿಸಿಕೊಂಡು, ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಿದರೆ, ಕೀಟನಾಶಕದಿಂದಾಗುವ ಸಾವು ತಡೆಯಬಹುದು" ಎಂದು ಸಿಎಸ್‌ಇ ಉಪಮಹಾನಿರ್ದೇಶಕ ಚಂದ್ರಭೂಷಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News