ದಾಖಲೆ ಬರೆದ ಅಯೋಧ್ಯೆಯ ವಿಶೇಷ ದೀಪಾವಳಿ

Update: 2017-10-19 11:55 GMT

ಲಕ್ನೋ,  ಅ.19: ಉತ್ತರ ಪ್ರದೇಶ ಸರಕಾರ ಬುಧವಾರ ಅಯೋಧ್ಯೆಯ ಸರಯೂ ನದಿ ತೀರದಲ್ಲಿ 1,87,213 ಮಣ್ಣಿನ ಹಣತೆಗಳನ್ನು ಬೆಳಗಿಸಿ ದೀಪಾವಳಿಯನ್ನು ವಿಶಿಷ್ಠವಾಗಿ ಆಚರಿಸಿದ್ದು, ಈ ಬಾರಿಯ ದೀಪಾವಳಿ ಗಿನ್ನೆಸ್ ದಾಖಲೆ ಸೇರಲು ಸಜ್ಜಾಗಿದೆ.

ಗಿನ್ನೆಸ್  ದಾಖಲೆ ಸಂಸ್ಥೆಯ ಸದಸ್ಯರು ಇಡೀ ಕಾರ್ಯಕ್ರಮವನ್ನು ತಮ್ಮ ಕ್ಯಾಮ್‍ಕಾಪ್ಟರ್ ಮೂಲಕ ಸೆರೆ ಹಿಡಿದಿದ್ದಾರಲ್ಲದೆ ಸರಯೂ ನದಿ ತೀರದ ರಾಮ್ ಕಿ ಪೈದಿ ಎಂಬಲ್ಲಿ 1,87,213 ಹಣತೆಗಳನ್ನು ಯಶಸ್ವಿಯಾಗಿ ಬೆಳಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ಸಿಂಗ್ ಕಳೆದ ವರ್ಷದ ಸೆಪ್ಟೆಂಬರ್ ಒಂದರಂದು 1,50,009 ಹಣತೆಗಳನ್ನು ಬೆಳಗಿಸಿದ್ದ ದಾಖಲೆಯನ್ನು ಮುರಿದಂತಾಗಿದೆ.

ರಾಮ್ ಕಿ ಪೈದಿಯಲ್ಲಿ ಹಣತೆಗಳನ್ನು ಬೆಳಗಿಸುವ ಜವಾಬ್ದಾರಿಯನ್ನು  ಗುಜರಾತ್ ರಾಜ್ಯದ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಇಮ್ಯಾಜಿನೇಶನ್ ಗೆ ವಹಿಸಲಾಗಿತ್ತು. ಕಂಪೆನಿ ತನ್ನ ಇಬ್ಬರುವೀಕ್ಷಕರನ್ನೂ ಸಮಾರಂಭಕ್ಕೆ ಕಳುಹಿಸಿತ್ತು. ಸಂಸ್ಥೆ ಕೂಡ ಸಮಾರಂಭದ ವೀಡಿಯೋ ಚಿತ್ರೀಕರಣ ನಡೆಸಿದೆ. ಗಿನ್ನೆಸ್ ಸಂಸ್ಥೆ ಎಲ್ಲಾ ವಿವರಗಳನ್ನು ಪರಿಶೀಲಿಸಿ  ಪ್ರಮಾಣ ಪತ್ರ ನೀಡಲಿದೆ.

ಫೈಝಾಬಾದ್ ನ ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯ ಕೂಡ ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯೊಂದಿಗೆ ಕೈಜೋಡಿಸಿತ್ತು. ಸಾವಿರಾರುವಿದ್ಯಾರ್ಥಿಗಳು ಹಾಗೂ ಎನ್‍ಸಿಸಿ ಕೆಡೆಟ್ ಗಳೂ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದರು. ರಾಮ್ ಕಿ ಪೈದಿಯ ಮೆಟ್ಟಿಲುಗಳಲ್ಲಿ ಒಟ್ಟು 2 ಲಕ್ಷ ಹಣತೆಗಳನ್ನಿಡಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News