ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಮಗು ಸಂಜನಾ ಮೃತ್ಯು

Update: 2017-10-19 14:31 GMT

ಬೆಂಗಳೂರು, ಅ.19: ನಗರದ ಈಜೀಪುರದ ಗುಂಡಪ್ಪ ಲೇಔಟ್‌ನಲ್ಲಿನ ಮೂರು ಅಂತಸ್ತಿನ ಕಟ್ಟಡ ಕುಸಿದ ಪ್ರಕರಣ ಸಂಬಂಧ ತೀವ್ರವಾಗಿ ಗಾಯಗೊಂಡು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಜನಾ(3) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಸಂಜನಾಳನ್ನು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಶೇಷ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಗುರುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಸಂಜನಾ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಸಂಜನಾಗೆ ಚಿಕಿತ್ಸೆ ನೀಡಲಾಗುತಿತ್ತು. ಆಕೆಯ ದೇಹವೂ ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ, ಬುಧವಾರ ರಾತ್ರಿಯಿಂದ ಗಂಭೀರ ಸ್ಥಿತಿಗೆ ತಲುಪಿದ್ದಳು ಎಂದು ಹಿರಿಯ ವೈದ್ಯರೊಬ್ಬರು ಮಾಹಿತಿ ನೀಡಿದ್ದು, ಇದೇ ದುರಂತದಲ್ಲಿ ಗಾಯಗೊಂಡಿರುವ ಜಾನಕಿ ಮತ್ತು ದಿಲೀಪ್ ಎಂಬವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ: ಈಜಿಪುರದಲ್ಲಿ ಸೆ.16ರಂದು ಮೂರು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದು, ಸಂಜನಾ ತಂದೆ ಶರವಣ ಹಾಗೂ ತಾಯಿ ಅಶ್ವಿನಿ ಸೇರಿದಂತೆ ಏಳು ಜನರು ಮೃತಪಟ್ಟಿದರು. ಸಂಜನಾ ಸೇರಿದಂತೆ ಮೂರು ಜನರಿಗೆ ತೀವ್ರ ಗಾಯಗಳಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ದುರದೃಷ್ಟ ಕಟ್ಟಡದ ಅವಶೇಷಗಳಡಿ ಸಿಲುಕಿ ಬದುಕು ಉಳಿದಿದ್ದ ಮೂರು ವರ್ಷದ ಮಗು ಸಂಜನಾ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾಳೆ.

5 ಲಕ್ಷ ರೂ. ಪರಿಹಾರ: ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಸಂಜನಾ ಕುಟುಂಬಸ್ಥರಿಗೆ 5 ಲಕ್ಷ ರೂ.ಪರಿಹಾರ ನೀಡುವುದಾಗಿ ಬಿಬಿಎಂಪಿ ಮೇಯರ್ ಸಂಪತ್‌ರಾಜ್ ಘೋಷಣೆ ಮಾಡಿದ್ದಾರೆ.

ಗುರುವಾರ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದ ಸಚಿವ ಕೆ.ಜೆ.ಜಾರ್ಜ್, ಈಜಿಪುರ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಸಂಜನಾ ಮತ್ತು ಇನ್ನಿತರೆ ಇಬ್ಬರು ಗಾಯಾಳುಗಳಿಗೆ ಚಿಕಿತ್ಸೆಗೆ ಖರ್ಚಿಗಾಗಿ ತಲಾ 10 ಸಾವಿರ ರೂ. ವೈಯಕ್ತಿಕವಾಗಿ ವಿತರಿಸಿದರು. ಅನಂತರ ಸಂಜನಾ ಆಸ್ಪತ್ರೆಯಿಂದ ಗುಣಮುಖರಾಗಿ ಹೊರ ಬಂದ ನಂತರ ವೈಯಕ್ತಿಕವಾಗಿ ಅವರ ಹೆಸರಿನಲ್ಲಿ ಐದು ಲಕ್ಷ ಠೇವಣಿ ಇಡಲಿದ್ದೇವೆ ಎಂದು ಭರವಸೆ ನೀಡಿದ್ದರು.

ನನ್ನನ್ನು ನೋಡಿಕೊಳ್ಳುತ್ತಿದ್ದ ಮಗ ಮತ್ತು ಸೊಸೆ ನನ್ನಿಂದ ದೂರವಾಗಿದ್ದಾರೆ. ಮುಂದೆ ಏನು ಎಂಬುದು ದಾರಿ ಗೊತ್ತಾಗುತ್ತಿಲ್ಲ. ಮಗ ಮತ್ತು ಸೊಸೆ ಹೋದರೂ, ಮೊಮ್ಮಗಳು ಬದುಕಿದ್ದಾಳೆ ಎಂಬ ಸಮಾಧಾನವಿತ್ತು. ಆದರೆ, ಈಗ ಅದೊಂದು ನಂಬಿಕೆಯೂ ಸತ್ತೋಯಿತು. ಮಗು ಸಂಜನಾ ಚಿಕಿತ್ಸೆ ವೇಳೆ ನನ್ನೊಂದಿಗೆ ಮಾತನಾಡುತ್ತಿದ್ದಳು. ಎಲ್ಲರನ್ನೂ ಕೇಳುತ್ತಿದ್ದಳು. ತುಂಬಾ ನೋವಾಗುತ್ತಿದೆ.
- ಶಾಂತಮ್ಮ, ಸಂಜನಾಳ ಅಜ್ಜಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News