ರಸ್ತೆ ಅಪಘಾತದಲ್ಲಿ ಬಾಲಕಿ ಮೃತಪಟ್ಟ ಪ್ರಕರಣ: ಬೈಕ್ ಸವಾರ ಬಂಧನ

Update: 2017-10-20 14:14 GMT

ಬೆಂಗಳೂರು, ಅ.20: ನಗರದ ಮಾರನಾಯಕನಹಳ್ಳಿ ಕಾಲನಿಯಲ್ಲಿ ನಡೆದ ರಸ್ತೆ ಅಪಘಾತ ಪ್ರಕರಣದಲ್ಲಿ ಏಳು ವರ್ಷದ ಬಾಲಕಿ ಸಹನಾ ಮೃತಪಟ್ಟ ಪ್ರಕರಣ ಸಂಬಂಧ ಬೈಕ್ ಸವಾರ ರಾಜು(18) ಎಂಬಾತನನ್ನು ಇಲ್ಲಿನ ಚಿಕ್ಕಜಾಲ ಠಾಣಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ರಾಜು ವಿರುದ್ಧ ಬಾಲಕಿಯ ಪೋಷಕರು ಠಾಣೆಗೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿದ್ದು, ಮಾರನಾಯಕನಹಳ್ಳಿಯ ತನ್ನ ಅತ್ತೆ ಮನೆಯಲ್ಲಿ ಅಡಗಿದ್ದ ಆತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಆರೋಪಿ ರಾಜು ವಾಹನ ಚಾಲನಾ ಪರವಾನಿಗೆ(ಡಿಎಲ್) ಹೊಂದಿರಲಿಲ್ಲ. ತಂದೆಗೆ ಮಾಹಿತಿ ನೀಡದೆಯೇ ಸುತ್ತಾಡಲೆಂದು ಬೈಕ್ ಓಡಿಸಿಕೊಂಡು ಬಂದಿದ್ದ. ಆಗ ಅಪಘಾತ ಸಂಭವಿಸಿದೆ. ಆರೋಪಿಯ ತಂದೆಯ ಹೆಸರಿನಲ್ಲಿ ಬೈಕ್ ನೋಂದಣಿಯಾಗಿದ್ದು, ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣ ಹಿನ್ನಲೆ: ಮಾರನಾಯಕನಹಳ್ಳಿ ಕಾಲನಿಯ ನಿವಾಸಿ ವೆಂಕಟೇಶ್ ಎಂಬವರ ಮಗಳಾದ ಸಹನಾ ಗುರುವಾರ ಸಂಜೆ ಮನೆ ಮುಂದೆ ನಿಂತು ಬಾಲಕರು ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದಳು. ಈ ವೇಳೆ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸಿಕೊಂಡು ಬಂದ ರಾಜು ಆಕೆಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಏಳು ವರ್ಷದ ಬಾಲಕಿ ಮೃತಪಟ್ಟಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News