ಆಧಾರ್ ರಹಿತರಿಗೆ ಬದುಕುವ ಹಕ್ಕಿಲ್ಲವೇ?

Update: 2017-10-20 18:45 GMT

ಸರಕಾರ ಹೊಸ ಹೊಸ ಗುರುತು ಕಾರ್ಡ್‌ಗಳನ್ನು ಯಾಕಾಗಿ ಜಾರಿಗೊಳಿಸುತ್ತಿವೆ? ಅದರ ಹಿಂದೆ ಇರುವುದು ನಿಜಕ್ಕೂ ಜನರ ಹಿತಾಸಕ್ತಿಯೇ? ಅಥವಾ ಸರಕಾರದ ಮೂಲಕ ಯಾವು ಯಾವುದೋ ಹಿತಾಸಕ್ತಿಗಳು ಜನಸಾಮಾನ್ಯರ ಬದುಕನ್ನು ನಿಯಂತ್ರಿಸುವುದಕ್ಕೆ ನಡೆಸುತ್ತಿರುವ ಸಂಚೇ? ಕಳೆದ ಒಂದೆರಡು ವರ್ಷಗಳಿಂದ ಆಧಾರ್ ಕಾರ್ಡ್ ದೇಶದ ಜನಸಾಮಾನ್ಯರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ಒಂದೆಡೆ ಸುಪ್ರೀಂಕೋರ್ಟ್ ಆಧಾರ್ ಕಾರ್ಡ್‌ನ ವಿರುದ್ಧ ಆದೇಶಗಳನ್ನು ನೀಡುತ್ತಿರುವಾಗಲೇ, ಇನ್ನೊಂದೆಡೆ ಸರಕಾರ ತನ್ನ ಅಧಿಕಾರಿ ವರ್ಗದ ಮೂಲಕ ಜನರಿಗೆ ಆಧಾರ್ ಕಾರ್ಡ್‌ನ್ನು ಕಡ್ಡಾಯಗೊಳಿಸಲು ಪ್ರಯತ್ನಿಸುತ್ತಿದೆ.

ಆಧಾರ್ ಕಾರ್ಡ್ ಜನ ಸಾಮಾನ್ಯರ ಖಾಸಗಿತನವನ್ನು ಕಿತ್ತುಕೊಂಡಿದೆ ಎನ್ನುವುದು ಇದೀಗ ಗಂಭೀರ ಚರ್ಚೆಯಲ್ಲಿರುವ ವಿಷಯ. ಆಧಾರ್ ಕಾರ್ಡ್ ಮೂಲಕ ಜನರ ಖಾಸಗಿ ಮಾಹಿತಿಗಳನ್ನು ಕೆಲವು ಹಿತಾಸಕ್ತಿಗಳು ಸೋರಿಕೆ ಮಾಡುತ್ತಿರುವುದೂ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಇತ್ತೀಚಿನ ನೋಟು ನಿಷೇಧ, ಡಿಜಿಟಲೀಕರಣ, ಜಿಎಸ್‌ಟಿ ಇತ್ಯಾದಿಗಳ ನಡುವೆ ಕುಗ್ಗಿ ಹೋಗಿರುವ ಜನಸಾಮಾನ್ಯರು ಈ ಆಧಾರ್ ಕಾರ್ಡ್‌ನ ಕುರಿತಂತೆ ಇನ್ನೂ ಸಾಕ್ಷರರಾಗಿಲ್ಲ. ನಗರ ಪ್ರದೇಶದ ಜನರೇ ಈ ಆಧಾರ್‌ಕಾರ್ಡ್‌ನಿಂದ ಗೊಂದಲಕ್ಕೀಡಾಗಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರು ಈ ಬಗ್ಗೆ ಆತಂಕಿತರಾಗುವುದು ಸಹಜವೇ ಆಗಿದೆ. ಬ್ಯಾಂಕ್‌ಗಳಂತಹ ಸಂಸ್ಥೆಗಳು ಆಧಾರ್‌ ಕಾರ್ಡ್ ಬೇಡುತ್ತಿರುವುದು ಪಕ್ಕಕ್ಕಿರಲಿ. ಬಿಪಿಎಲ್ ಕಾರ್ಡ್‌ನಲ್ಲಿ ಅಕ್ಕಿ ತಂದು ಮನೆ ನಡೆಸುವ ಕುಟುಂಬಗಳಿಗೆ, ಆಧಾರ್ ಕಾರ್ಡ್ ಇಲ್ಲ ಎಂದು ರೇಷನ್ ನೀಡುವುದನ್ನು ನಿಲ್ಲಿಸಿದರೆ ಏನಾಗಬಹುದು?

ಆಧಾರ್‌ಕಾರ್ಡ್‌ನ ಅತ್ಯಂತ ಕ್ರೂರ ಮುಖವೊಂದು ಗೋಕರ್ಣ ಸಮೀಪ ಬಯಲಾಗಿದೆ. ಆಧಾರ್ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕೆ ಪಡಿತರ ನಿರಾಕರಣೆ ಮಾಡಿದುದರಿಂದ ಮೂವರು ದಲಿತ ಸೋದರರು ಹಸಿವಿನಿಂದ ಸತ್ತಿದ್ದಾರೆ. ಆರಂಭದಲ್ಲಿ, ವಿಪರೀತ ಮದ್ಯಪಾನದ ಚಟದಿಂದ ಅವರು ಸತ್ತಿದಾರೆ ಎಂದು ಜಿಲ್ಲಾಡಳಿತ ಹೇಳಿತು. ಆದರೆ ಈ ಕುಟುಂಬಕ್ಕೆ ಕಳೆದ ಆರು ತಿಂಗಳಿಂದ ಪಡಿತರ ಆಹಾರ ದೊರೆಯುತ್ತಿರಲಿಲ್ಲ. ಕಾರಣ, ಇವರ ಬಿಪಿಎಲ್ ಕಾರ್ಡ್‌ನ ಜೊತೆಗೆ ಆಧಾರ್ ಕಾರ್ಡ್ ಇರಲಿಲ್ಲ. ಪಿಯುಸಿಎಲ್ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಿದೆ. ಬಹುಶಃ ಇಡೀ ನಾಗರಿಕ ಸಮಾಜವೇ ಅವಮಾನದಿಂದ ತಲೆತಗ್ಗಿಸಬೇಕಾಗಿದೆ. ಇದು ಕೇವಲ ಗೋಕರ್ಣದಲ್ಲಿ ನಡೆದಿರುವ ಒಂದು ಆಕಸ್ಮಿಕ ಅಥವಾ ಅಚಾತುರ್ಯದ ಘಟನೆಯಲ್ಲ ಎನ್ನುವ ಅಂಶವನ್ನು ಗಮನಿಸಬೇಕು. ಯಾಕೆಂದರೆ, ಇತ್ತೀಚೆಗೆ ಜಾರ್ಖಂಡ್‌ನಲ್ಲ್ಲಿ ಒಂದು ಕುಟುಂಬಕ್ಕೆ ಆಧಾರ್ ಕಾರ್ಡ್ ಇಲ್ಲವೆಂದು ಇಲಾಖೆ ರೇಷನ್ ನಿಲ್ಲಿಸಿತ್ತು. ಪರಿಣಾಮವಾಗಿ 11 ವರ್ಷದ ಬಾಲಕಿಯೊಬ್ಬಳು ಹಸಿವಿನಿಂದ ಸಾಯಬೇಕಾಯಿತು. ರಾಂಚಿ, ದಿಲ್ಲಿಯಲ್ಲೂ ಆಧಾರ್ ರಹಿತ ಬಡವರು ಪಡಿತರ ವಂಚಿತರಾಗಿ ಹಸಿವಿನಿಂದ ನರಳುವಂತಹ ಸ್ಥಿತಿ ನಿರ್ಮಾಣವಾಗಿದೆ.

ಬಹುಶಃ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ, ಇಂತಹದೊಂದು ಕೃತಕ ಹಸಿವನ್ನು ಸೃಷ್ಟಿಸಿ ಬಡವರನ್ನು ಕೊಂದು ಹಾಕುವ ಯತ್ನ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವ ಮೂಲಕ ಕೇಂದ್ರ ಸರಕಾರವು ನಕಲಿ ಕಾರ್ಡ್‌ಗಳನ್ನು ತೆಗೆದು ಹಾಕಿದೆ ಹಾಗೂ ಆ ಮೂಲಕ ಬೊಕ್ಕಸಕ್ಕೆ 14 ಸಾವಿರ ಕೋಟಿಗೂ ಅಧಿಕ ಹಣವನ್ನು ಉಳಿಸಿದೆ ಎಂದು ಆಹಾರ ಪೂರೈಕೆ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಹೇಳಿಕೆ ನೀಡಿದ್ದಾರೆ. ಅವರ ಉಳಿತಾಯದ ಹಣದ ಹಿಂದೆ ಗೋಕರ್ಣದಲ್ಲಿ ಅಕ್ಕಿಯಿಲ್ಲದೆ ಸತ್ತ ದಲಿತರ ಹೆಣಗಳಿವೆ ಎನ್ನುವುದನ್ನು ದಲಿತ ಸಮುದಾಯದಿಂದ ಬಂದ ರಾಮ್‌ವಿಲಾಸ್ ಪಾಸ್ವಾನ್‌ರಂತಹ ನಾಯಕರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ ಇರುವುದು ಇಂದಿನ ಅತೀ ದೊಡ್ಡ ದುರಂತವಾಗಿದೆ.

ಈ ದೇಶದಲ್ಲಿ ತನ್ನ ಗುರುತನ್ನು ಸರಕಾರಕ್ಕೆ ‘ಆಧಾರ್ ಕಾರ್ಡ್’ ಮೂಲಕ ಸಾಬೀತು ಪಡಿಸುವುದು ಅನಕ್ಷರಸ್ಥ ಬಡವರಿಗೆ ಅಷ್ಟು ಸುಲಭವಲ್ಲ. ತಲೆಗೆ ಸರಿಯಾದ ಸೂರೇ ಇಲ್ಲದ, ಎಂದೂ ಬ್ಯಾಂಕ್ ಅಥವಾ ಇನ್ನಿತರ ವ್ಯವಸ್ಥೆಯ ಹತ್ತಿರ ಸುಳಿದೂ ಇರದ ಲಕ್ಷಾಂತರ ಮಂದಿ ಈ ದೇಶದಲ್ಲಿದ್ದಾರೆ. ಬಿಪಿಎಲ್‌ನಂತಹ ರೇಷನ್‌ಗಳಿಂದಲೇ ಬದುಕನ್ನು ನಡೆಸುವ ಈ ಜನರು ದೇಶದ ತಳಸ್ತರದಲ್ಲಿರುವವರು. ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ಜಿಎಸ್‌ಟಿ, ಡಿಜಿಟಲೀಕರಣ ಇತ್ಯಾದಿಗಳ ಬಗ್ಗೆ ಯಾವ ಅರಿವೂ ಅವರಿಗಿಲ್ಲ. ಹೀಗಿರುವಾಗ ಏಕಾಏಕಿ ಆಧಾರ್ ಕಾರ್ಡ್ ಇಲ್ಲದವರಿಗೆ ರೇಷನ್ ಕೊಡುವುದಿಲ್ಲ ಎಂದು ಹೇಳಿದರೆ ಹೇಗೆ? ಒಂದು ವೇಳೆ ಬಿಪಿಎಲ್ ಕಾರ್ಡ್‌ದಾರರಿಗೆ ಆಧಾರ್ ಕಾರ್ಡ್ ಅನಿವಾರ್ಯ ಎಂದಾದರೆ, ಅದನ್ನು ಆಯಾ ಇಲಾಖೆಯೇ ಅವರಿಗೆ ಒದಗಿಸಿಕೊಡುವ ವ್ಯವಸ್ಥೆ ಮಾಡಬೇಕು.

ಬಿಪಿಎಲ್ ಕಾರ್ಡ್‌ದಾರರು ಎಲ್ಲರಂತೆ ಆಧಾರ್ ಕಾರ್ಡ್‌ನ್ನು ಸುಲಭವಾಗಿ ಮಾಡಿಕೊಳ್ಳುವಷ್ಟು ಶಕ್ತರಲ್ಲ. ಕಚೇರಿಗಳಿಗೆ ಪದೇ ಪದೇ ಅಲೆದಾಡುವ ಆರ್ಥಿಕ ಶಕ್ತಿ ಹಾಗೂ ಅಕ್ಷರ ಶಕ್ತಿ ಅವರಿಗಿಲ್ಲ. ಆದುದರಿಂದ, ಒಂದು ವೇಳೆ ಆಧಾರ್ ಅವರಿಗೆ ಕಡ್ಡಾಯವೇ ಆಗಿದ್ದರೆ, ಅವರ ಮನೆ ಮನೆಗೆ ತೆರಳಿ ಆಧಾರ್‌ಗೆ ಬೇಕಾದ ವ್ಯವಸ್ಥೆ ಮಾಡುವುದು ಇಲಾಖೆಯ ಹೊಣೆಗಾರಿಕೆ. ಇದೇ ಸಂದರ್ಭದಲ್ಲಿ ಆಧಾರ್ ಕಾರ್ಡ್ ಇಲ್ಲ ಎಂದು ರೇಷನ್ ನಿಲ್ಲಿಸುವುದಕ್ಕೂ, ಗೋರಖ್‌ಪುರದಲ್ಲಿ ದುಡ್ಡು ಕಟ್ಟಿಲ್ಲ ಎಂದು ಅನಾರೋಗ್ಯ ಪೀಡಿತ ಮಕ್ಕಳ ಆಕ್ಸಿಜನ್ ಕಡಿತಗೊಳಿಸಿರುವುದಕ್ಕೂ ವ್ಯತ್ಯಾಸವಿಲ್ಲ. ಆಕ್ಸಿಜನ್ ಕಡಿತ ಮಾಡಿದರೆ ಮಕ್ಕಳು ಸಾಯುತ್ತಾರೆ ಎನ್ನುವುದು ಸಂಬಂಧಪಟ್ಟವರಿಗೆ ಗೊತ್ತು. ಬಿಪಿಎಲ್ ಕಾರ್ಡ್‌ದಾರರಿಗೆ ರೇಷನ್ ಪೂರೈಸದೇ ಇದ್ದರೆ ಅವರು ಹಸಿವಿನಿಂದ ಸಾಯುತ್ತಾರೆ ಎನ್ನುವುದು ಅಧಿಕಾರಿಗಳಿಗೆ ಗೊತ್ತು. ಹೀಗಿರುವಾಗ, ಆಧಾರ್ ಕಾರ್ಡ್ ಇಲ್ಲದ ನಾಗರಿಕರಿಗೆ ಬದುಕುವ ಹಕ್ಕು ಇಲ್ಲ ಎಂದು ಸರಕಾರವೇ ಘೋಷಿಸಿದಂತಾಗಲಿಲ್ಲವೇ?

 ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದೇನೋ ಸರಿ. ಆದರೆ, ಯಾರೆಲ್ಲ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲವೋ ಅವರಿಗೆ ರೇಷನ್ ಒದಗಿಸದೇ ಇರುವುದು ಅಮಾನವೀಯ. ಅಂತಹ ಘಟನೆಗಳು ನಡೆದಿದ್ದರೆ ಆ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು. ಹಾಗೆಯೇ, ಆಧಾರ್ ಕಾರ್ಡ್ ಇಲ್ಲದ ಪಡಿತರ ಚೀಟಿದಾರರಿಗೂ ರೇಷನ್ ಕಡ್ಡಾಯವಾಗಿ ಪೂರೈಸಲು ತಕ್ಷಣ ಆದೇಶ ನೀಡಬೇಕು. ಅಷ್ಟೇ ಅಲ್ಲ, ರೇಷನ್ ಪೂರೈಕೆಯಿಲ್ಲದೆ ಯಾರಾದರೂ ಹಸಿವಿನಿಂದ ಸತ್ತಿರುವ ಘಟನೆ ವರದಿಯಾದರೆ, ತಕ್ಷಣ ರೇಷನ್ ಪೂರೈಸದ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಈಗಾಗಲೇ ದೇಶಾದ್ಯಂತ ಹಸಿವಿನ ಭೂತ ವಿಸ್ತಾರಗೊಳ್ಳುತ್ತಿದೆ. ಪಡಿತರ ವ್ಯವಸ್ಥೆ, ಅಂತಹ ಸಮಸ್ಯೆಯಲ್ಲಿ ಬಳಲುತ್ತಿರುವವರಿಗೆ ಸಣ್ಣದೊಂದು ಸಾಂತ್ವನವಾಗಿದೆ. ಇದೀಗ ಆ ಸಾಂತ್ವನವನ್ನು ಕಿತ್ತು, ಕೃತಕ ಹಸಿವನ್ನು ಸೃಷ್ಟಿಸಿ ಅವರನ್ನು ಕೊಲ್ಲುವುದು ಭಾರತದ ಪ್ರಜಾಸತ್ತೆಗೆ ಅತ್ಯಂತ ಅವಮಾನಕರ ವಿಷಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News