ಶ್ರೇಷ್ಠತೆಯ ಅಹಂಕಾರ ಜಾತಿ ವ್ಯವಸ್ಥೆಗೆ ಕಾರಣ: ವೀರಪ್ಪ ಮೊಯ್ಲಿ

Update: 2017-10-21 16:14 GMT

ಬೆಂಗಳೂರು, ಅ.21: ನಮ್ಮ ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ಬೀಡು ಬಿಟ್ಟಿರುವ ಶ್ರೇಷ್ಠತೆಯ ಅಹಂಕಾರವೇ ಜಾತಿ ವ್ಯವಸ್ಥೆ ಜೀವಂತವಾಗಿಡಲು ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅಭಿಪ್ರಾಯಿಸಿದ್ದಾರೆ.

ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಆಯೋಜಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ, ಬಾಲ್ಯದಲ್ಲಿ ತುತ್ತು ಅನ್ನಕ್ಕಾಗಿ ಪರದಾಡಿದ್ದು, ಕಠಿಣ ವಿದ್ಯಾಭ್ಯಾಸದಿಂದ ವಕೀಲಿ ವೃತ್ತಿ, ತದನಂತರ ರಾಜಕೀಯ ಕ್ಷೇತ್ರದಲ್ಲಿ ಮುಖ್ಯಮಂತ್ರಿಯಾಗಿ ಹುದ್ದೆಗೇರಿದ ಪರಿಯನ್ನು ವೀಕ್ಷಕರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟರು.

ದಕ್ಷಿಣ ಕನ್ನಡದ ಮೂಡುಬಿದಿರೆಯ ಕುಗ್ರಾಮದಲ್ಲಿ ಹುಟ್ಟಿದ ನನಗೆ, ತಿಂಗಳು ಗಟ್ಟಲೆ ಅನ್ನದ ಮುಖವನ್ನೇ ನೋಡಲಾಗುತ್ತಿರಲಿಲ್ಲ. ಜೈನರು ಹಬ್ಬ ಹರಿದಿನಗಳಲ್ಲಿ ಹಾಕುತ್ತಿದ್ದ ಊಟವೇ ನಮಗೆ ಹಬ್ಬದ ಊಟವಾಗಿತ್ತು. ಶಾಲೆಗೆ ಸೇರುವಾಗ ಗಿರಿಯಪ್ಪನಾಗಿದ್ದ ನನಗೆ ಶಿಕ್ಷಕರೇ ವೀರಪ್ಪ ಮೊಯ್ಲಿ ಎಂದು ನಾಮಕರಣ ಮಾಡಿ, ನನ್ನ ಜನ್ಮದಿನಾಂಕವನ್ನು ಅವರೇ ನಮೂದಿಸಿದರು. ಅಷ್ಟರ ಮಟ್ಟಿಗೆ ನಮ್ಮ ಮನೆಯ ಹಿನ್ನೆಲೆ ಅನಕ್ಷರತೆ, ಅಜ್ಞಾನದಿಂದ ಕೂಡಿತ್ತು ಎಂದು ವಿವರಿಸಿದರು.

ನಾನು ಮೂರು ವರ್ಷದವನಾಗಿದ್ದಾಗ ಜಮೀನ್ದಾರರ ವಿರುದ್ಧ ಸೆಟೆದು ನಿಂತಿದ್ದೆ. ಇದರ ಜೊತೆಗೆ ಬಾಲ್ಯದಲ್ಲಿಯೇ ದೇವಸ್ಥಾನಕ್ಕೆ ಹೋಗಿ ಶಿವಲಿಂಗವನ್ನು ಅಪ್ಪಿಕೊಂಡು ಮೌಢ್ಯಕ್ಕೆ ಸವಾಲು ಹಾಕಿದ್ದೆ. ಆದರೆ, ಈ ವಿಷಯ ದೇವಸ್ಥಾನದ ಅರ್ಚಕರಿಗೆ ತಿಳಿದು ಇಡೀ ದೇವಸ್ಥಾನವನ್ನು ಶುಚಿಗೊಳಿಸಿದರು. ಹೀಗೆ ನನ್ನ ಬಾಲ್ಯದ ಆದ ಶೋಷಣೆ, ಅವಮಾನಗಳು ನನ್ನನ್ನು ಪ್ರಬುದ್ಧ ನಾಯಕನನ್ನಾಗಿ ರೂಪಿಸಿದವು ಎಂದರು.

ಸ್ವಾಭಿಮಾನವೇ ಹಕ್ಕಾಗಲಿ: ನಮ್ಮ ವ್ಯವಸ್ಥೆಯಲ್ಲಿ ದಲಿತ ಹಾಗೂ ಹಿಂದುಳಿದವರು ಸಾವಿರಾರು ವರ್ಷಗಳಿಂದ ಶೋಷಣೆ ಹಾಗೂ ಅವಮಾನಕ್ಕೆ ಒಳಗಾಗಿ ಅದನ್ನೇ ಜೀವನವನ್ನಾಗಿ ಒಪ್ಪಿಕೊಳ್ಳುವ ಮಟ್ಟಕ್ಕೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರದ ಯೋಜನೆಗಳು, ಕಾರ್ಯಕ್ರಮಗಳು ಈ ಜನತೆಯನ್ನು ಸ್ವಾಭಿಮಾನಿಗಳನ್ನಾಗಿ ರೂಪಿಸಬೇಕು. ಅಷ್ಟು ಮಾಡಿದರೆ ಉಳಿದ ಬದುಕನ್ನು ಕಟ್ಟಿಕೊಳ್ಳಲು ಶಕ್ತರಾಗುತ್ತಾರೆ ಎಂದು ಹೇಳಿದರು.

ನನ್ನ ‘ತಂಬರಿ’, ‘ಕೊಟ್ಟ’, ‘ಸಾಗರದೀ’ ಕಾದಂಬರಿಗಳಲ್ಲಿರುವ ಕತೆಗಳು ತಳಸಮುದಾಯ ಅನುಭವಿಸುತ್ತಿರುವ ತವಕ, ತಲ್ಲಣಗಳೇ ಆಗಿವೆ. ‘ಕೊಟ್ಟ’ ಕಾದಂಬರಿಯಲ್ಲಿ ಕೊರಗ ಸಮುದಾಯ ಅನುಭವಿಸುತ್ತಿರುವ ‘ಅಜಲು’ ಶೋಷಣೆಯನ್ನು ಕಟ್ಟಿಕೊಟ್ಟಿದ್ದೇನೆ. ಅದೇ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಳ ಸಮುದಾಯದ ಶೋಷಣೆ ಹಾಗೂ ಶೋಷಣೆ ವಿರುದ್ಧ ವ್ಯಕ್ತವಾಗುವ ಪ್ರತಿರೋಧವನ್ನು ಬಿಂಬಿಸಿದ್ದೇನೆ ಎಂದು ಅವರು ಹೇಳಿದರು.

 -ಕಾರ್ಕಳದಲ್ಲಿ ಮಹಾತ್ಮ ಗಾಂಧೀಜಿ ಶ್ರೀನಿವಾಸ್ ಶಾಲೆಯನ್ನು ಸ್ಥಾಪಿಸಿ ಶೇ.35ರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ದಾಖಲಿಸಿಕೊಂಡು ಎಸೆಸೆಲ್ಸಿಯಲ್ಲಿ ಪ್ರಥಮ ದರ್ಜೆ ಬರುವಂತೆ ತರಬೇತಿ ಕೊಡಲಾಗುತ್ತಿತ್ತು. ಆ ಮೂಲಕ ಪ್ರತಿಭೆ ಕೇವಲ ಒಂದು ವರ್ಗದ ಸ್ವತ್ತಲ್ಲ. ಸರಿಯಾದ ಕಲಿಕಾ ವಿಧಾನದಿಂದ ಪ್ರತಿಯೊಬ್ಬರು ಪ್ರತಿಭಾವಂತರಾಗಬಹುದು ಎಂದು ತೋರಿಸಿಕೊಡಲಾಯಿತು.

-ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದ ರಾಮಾನುಜಾಚಾರ್ಯರನ್ನು ತಮಿಳುನಾಡಿನಿಂದ ಓಡಿಸಿದಂತೆ ಹಲವು ಕಾರಣಗಳಿಂದ ನನ್ನನ್ನು ದಕ್ಷಿಣ ಕನ್ನಡದಿಂದ ಓಡಿಸಲಾಯಿತು. ಆಗ ನನಗೆ ಆಶ್ರಯ ಕೊಟ್ಟವರು ಚಿಕ್ಕಬಳ್ಳಾಪುರದ ಕ್ಷೇತ್ರದ ಜನತೆ.

-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೇಣಿದಾರರ ಮೇಲೆ ಭೂ ಮಾಲಕರ ಅಟ್ಟಹಾಸ ಮಿತಿ ಮೀರಿತ್ತು. ಮಹಿಳೆಯರ ಸ್ತನಗಳನ್ನು ಕತ್ತರಿಸುವ ಹಂತಕ್ಕೆ ಹೋಯಿತು. ಇಂತಹ ಸಂದರ್ಭದಲ್ಲಿ ವಕೀಲನಾಗಿದ್ದ ನಾನು ಗೇಣಿದಾರರು ಪರವಾಗಿ ಉಚಿತವಾಗಿ ನ್ಯಾಯಾಲಯದಲ್ಲಿ ವಾದ ಮಾಡುತ್ತಿದ್ದೆ. ನಾನು ಮಾಡಿದ ಈ ಕಾರ್ಯದಿಂದ ಚುನಾವಣೆಯಲ್ಲಿ ಬಡವರು, ಹಿಂದುಳಿದವರು ಒಟ್ಟುಗೂಡಿ ನನ್ನನ್ನು ಗೆಲ್ಲಿಸಿದರು.

-ಒಂದು ವೇಳೆ ನಾನು ಈಗ ರಾಜಕೀಯ ಕ್ಷೇತ್ರದಲ್ಲಿದ್ದರೆ ಖಂಡಿತವಾಗಿಯೂ ಶಾಸಕನಾಗುತ್ತಿರಲಿಲ್ಲ. ಕನಿಷ್ಠ ಚುನಾವಣೆಯಲ್ಲಿ ಸ್ಪರ್ಧಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ. 60-70ರ ದಶಕದಲ್ಲಿ ಹೋರಾಟದ ಮನೋಭಾವವಿದ್ದರೆ ಚುನಾವಣೆ ಸ್ಪರ್ಧೆಗೆ ಅರ್ಹತೆ ಹೊಂದಿರುತ್ತಿದ್ದರು. ಈಗ ಹಣವೊಂದೇ ಎಲ್ಲ ಅರ್ಹತೆಯೂ ಆಗಿದೆ.

-ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ

-

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News