​ದಲೈ ಲಾಮ ಅವರನ್ನು ಭೇಟಿಯಾಗುವುದು ದೊಡ್ಡ ಅಪರಾಧ : ಜಾಗತಿಕ ನಾಯಕರಿಗೆ ಚೀನಾ ಎಚ್ಚರಿಕೆ

Update: 2017-10-21 10:38 GMT

ಬೀಜಿಂಗ್,ಅ.21 : ಯಾವುದೇ ದೇಶ ಅಥವಾ ವಿದೇಶಿ ನಾಯಕರು ದಲೈ ಲಾಮ ಅವರನ್ನು ತಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ಅಥವಾ ಅವರನ್ನು ಭೇಟಿಯಾದರೆ ಅದನ್ನೊಂದು ಗಂಭೀರ ಅಪರಾಧವೆಂದು ಪರಿಗಣಿಸಲಾಗುವುದು ಎಂದು ಚೀನಾ ಎಚ್ಚರಿಸಿದೆ. ಟಿಬೆಟಿನ ಆಧ್ಯಾತ್ಮಿಕ ಗುರು ದಲೈ ಲಾಮ ಅವರು ಟಿಬೆಟ್ ಅನ್ನು ಚೀನಾದಿಂದ  ಬೇರ್ಪಡಿಸಲು ಯತ್ನಿಸುತ್ತಿರುವ ಪ್ರತ್ಯೇಕವಾದಿಯೆಂದೇ ಚೀನಾ ತಿಳಿದುಕೊಂಡಿದೆ.

ದಲೈ ಲಾಮ ಒಬ್ಬರು ಧಾರ್ಮಿಕ ನಾಯಕರೆಂಬ ನೆಲೆಯಲ್ಲಿ ಅವರನ್ನು ಭೇಟಿಯಾಗುತ್ತಿದ್ದೇವೆ ಎಂದು ಹೊರದೇಶಗಳು ಹಾಗೂ ವಿದೇಶಿ ನಾಯಕರು ವಾದಿಸಿದರೆ ಚೀನಾ ಅದನ್ನು ಒಪ್ಪುವುದಿಲ್ಲ ಎಂದು  ಆಡಳಿತ ಕಮ್ಯುನಿಸ್ಟ್ ಪಕ್ಷದ ಯುನೈಟೆಡ್ ವರ್ಕ್ ಡಿಪಾರ್ಟ್ ಮೆಂಟ್ ಇದರ ಎಕ್ಸಿಕ್ಯುಟಿವ್ ವೈಸ್ ಮಿನಿಸ್ಟರ್ ಆಗಿರುವ ಝಾಂಗ್ ಯಿಜೊಂಗ್ ಹೇಳಿದ್ದಾರೆ.

"ದಲೈ ಲಾಮ ಅವರು ಧರ್ಮದ ಸೋಗಿನಲ್ಲಿರುವ ಒಬ್ಬ ರಾಜಕೀಯ ವ್ಯಕ್ತಿ'' ಎಂದೂ  ಯಿಜೊಂಗ್ ತಿಳಿಸಿದ್ದಾರೆ. ಭಾರತದ ಹೆಸರನ್ನು ಉಲ್ಲೇಖಿಸದೆಯೇ, ದಲೈ ಲಾಮ ಇನ್ನೊಂದು ದೇಶಕ್ಕೆ 1959ರಲ್ಲಿ ಪಲಾಯನಗೈದು ತಮ್ಮ ತಾಯ್ನಾಡಿಗೆ ದ್ರೋಹವೆಸಗಿದ್ದಾರೆ,'' ಎಂದು ಯಿಜೊಂಗ್ ವಿವರಿಸಿದ್ದಾರೆ. ಟಿಬೆಟಿನ ಬೌದ್ಧಧರ್ಮದ ಮೂಲ ಚೀನಾದಲ್ಲಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.

ಜಾಗತಿಕ ನಾಯಕರು ದಲೈ ಲಾಮ ಅವರನ್ನು ಭೇಟಿಯಾಗುವುದನ್ನು ಚೀನಾ ಆಗಾಗ ವಿರೋಧಿಸುತ್ತಿರುತ್ತದೆಯಲ್ಲದೆ ಎಲ್ಲಾ ವಿದೇಶಿ ಸರಕಾರಗಳು ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧ  ಹೊಂದಬೇಕಿದ್ದರೆ ಟಿಬೆಟ್ ಅನ್ನು ಚೀನಾದ ಭಾಗವೆಂದೇ ಮಾನ್ಯ ಮಾಡಬೇಕೆಂಬ ಕಟ್ಟಳೆಯನ್ನೂ ವಿಧಿಸುತ್ತಿದೆ.

ಇತ್ತೀಚೆಗೆ ಭಾರತವು ದಲೈ ಲಾಮ ಅವರಿಗೆ ಈಶಾನ್ಯ ರಾಜ್ಯಗಳು ಹಾಗೂ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಅನುಮತಿ ನೀಡಿದಾಗಲೂ  ಚೀನಾ ವಿರೋಧ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News