ರಾಜಧಾನಿ ಎಕ್ಸ್‌ಪ್ರೆಸ್ ರೈಲು ಟಿಕೆಟ್ ಖಚಿತವಾಗದಿದ್ದರೆ ವಿಮಾನಯಾನ ಯೋಗ!

Update: 2017-10-23 04:14 GMT

ಹೊಸದಿಲ್ಲಿ, ಅ. 23: ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಸಿ-1 ಮತ್ತು ಎಸಿ-2 ಟಿಕೆಟ್ ಕಾಯ್ದಿರಿಸಿ, ಅದು ಖಾತ್ರಿಯಾಗದಿದ್ದರೆ, ತಕ್ಷಣ ಅವರಿಗೆ ವಿಮಾನಯಾನಕ್ಕೆ ವ್ಯವಸ್ಥೆ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಆದರೆ ರೈಲು ಟಿಕೆಟ್ ಮತ್ತು ವಿಮಾನ ಟಿಕೆಟ್ ದರದ ವ್ಯತ್ಯಾಸವನ್ನು ಪ್ರಯಾಣಿಕ ಭರಿಸಬೇಕಾಗುತ್ತದೆ.

ಅಶ್ವನಿ ಲೊಹಾನಿ, ಏರ್‌ಇಂಡಿಯಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಳೆದ ಬೇಸಿಗೆಯಲ್ಲಿ ಈ ಯೋಜನೆ ರೂಪಿಸಿದ್ದರು. ಆದರೆ ರೈಲ್ವೆ ಇಲಾಖೆ ಇದಕ್ಕೆ ಧನಾತ್ಮಕವಾಗಿ ಸ್ಪಂದಿಸಿರಲಿಲ್ಲ. ಇದೀಗ ಲೊಹಾನಿ ರೈಲ್ವೆ ಮಂಡಳಿಯ ಅಧ್ಯಕ್ಷರಾಗಿದ್ದು, ಇದೀಗ ಪ್ರಸ್ತಾವನೆಯನ್ನು ಮತ್ತೆ ಏರ್‌ಇಂಡಿಯಾ ಸಲ್ಲಿಸಿದರೆ ಅದಕ್ಕೆ ಒಪ್ಪಿಗೆ ನೀಡುವುದಾಗಿ ಹೇಳಿದ್ದಾರೆ.

"ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಹಳಷ್ಟು ಮಂದಿಗೆ ಅತ್ಯಧಿಕ ಬೇಡಿಕೆಯಿಂದಾಗಿ ಎಸಿ-2 ಟಿಕೆಟ್‌ಗಳು ಖಾತ್ರಿಯಾಗುವುದಿಲ್ಲ. ಆದರೆ ತಕ್ಷಣ ರೈಲ್ವೆ ಇಲಾಖೆ ಇಂಥ ಪ್ರಯಾಣಿಕರ ಮಾಹಿತಿಯನ್ನು ಏರ್‌ಇಂಡಿಯಾ ಜತೆ ಹಂಚಿಕೊಂಡರೆ, ಸ್ಪರ್ಧಾತ್ಮಕ ದರದಲ್ಲಿ, ವಿಮಾನಯಾನಕ್ಕೆ ವ್ಯವಸ್ಥೆ ಮಾಡುವ ಪ್ರಸ್ತಾವನೆ ರೂಪಿಸಲಾಗುವುದು" ಎಂದು ಲೊಹಾನಿ ವಿವರಿಸಿದ್ದಾರೆ.

ರೈಲ್ವೆ ಹಾಗೂ ಏರ್‌ಇಂಡಿಯಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಿರುವುದರಿಂದ ಮಾಹಿತಿ ಹಂಚಿಕೆ ದೊಡ್ಡ ಸಮಸ್ಯೆಯಾಗದು. ಆದರೆ ಖಾಸಗಿ ವಿಮಾನಯಾನ ಕಂಪನಿಗಳ ಜತೆ ಈ ಮಾಹಿತಿ ಹಂಚಿಕೊಳ್ಳಬಹುದೇ ಎನ್ನುವುದು ಪ್ರಶ್ನೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಿರಿಯ ಐಎಎಸ್ ಅಧಿಕಾರಿ ರಾಜೀವ್ ಬನ್ಸಲ್ ಅವರಿಗೆ ಏರ್‌ಇಂಡಿಯಾ ಅಧ್ಯಕ್ಷ ಹೊಣೆಯನ್ನು ಹೆಚ್ಚುವರಿಯಾಗಿ ಆಗಸ್ಟ್ ಕೊನೆಗೆ ನೀಡಲಾಗಿತ್ತು. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, "ಇಂಥ ಪ್ರಸ್ತಾವನೆ ಮೊದಲ ಬಾರಿಗೆ ನನ್ನ ಗಮನಕ್ಕೆ ಬಂದಿದ್ದು, ರೈಲು ಹಾಗೂ ವಿಮಾನ ದರದಲ್ಲಿ ಬದಲಾವಣೆ ಇದೆ. ಈ ಬಗ್ಗೆ ಪರಿಶೀಲಿಸಲಾಗುವುದು" ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News