ರೋಹಿಂಗ್ಯ ಮುಸ್ಲಿಮರನ್ನು ಮ್ಯಾನ್ಮಾರ್ ಹಿಂದಕ್ಕೆ ಕರೆಸಿಕೊಳ್ಳಬೇಕು : ಸುಷ್ಮಾ ಸ್ವರಾಜ್

Update: 2017-10-23 06:42 GMT

ಢಾಕಾ,ಅ.23 : ಮ್ಯಾನ್ಮಾರ್ ನಿಂದ ಪಲಾಯನಗೈದಿರುವ  ರೋಹಿಂಗ್ಯ ನಿರಾಶ್ರಿತರಿಂದಾಗಿ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿ ದಿನೇ ದಿನೇ  ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ  ಮ್ಯಾನ್ಮಾರ್ ರೋಹಿಂಗ್ಯ ಮುಸ್ಲಿಮರನ್ನು ಮತ್ತೆ ತನ್ನ ದೇಶಕ್ಕೆ ಸೇರಿಸಿಕೊಳ್ಳಬೇಕೆಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್  ಹೇಳಿದ್ದಾರೆ.

ರವಿವಾರ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಜತೆಗೆ ನಡೆದ ಸಭೆಯಲ್ಲಿ ಸುಷ್ಮಾ ಈ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ರೋಹಿಂಗ್ಯನ್ನರಿಗೆ ಗಡಿ ದಾಟಿ ಬಾಂಗ್ಲಾದೇಶದ ಗಡಿ ಜಿಲ್ಲೆಯಾದ ಕೋಕ್ಸ್ ಬಜಾರ್ ನಲ್ಲಿನ ತಾತ್ಕಾಲಿಕ ಶಿಬಿರಗಳಲ್ಲಿ ನೆಲೆಸಲು ಬಾಂಗ್ಲಾದೇಶ ಸರಕಾರ ಈ ಹಿಂದೆ ಅನುಮತಿ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

"ಮ್ಯಾನ್ಮಾರ್ ತನ್ನ ರಾಷ್ಟ್ರೀಯರನ್ನು ಹಿಂದಕ್ಕೆ ಪಡೆದುಕೊಳ್ಳಬೇಕು. ಅವರು ಬಾಂಗ್ಲಾದೇಶಕ್ಕೆ ದೊಡ್ಡ   ಹೊರೆಯಾಗಿದ್ದಾರೆ. ಎಷ್ಟು ಸಮಯ ಅದು ಈ ಹೊರೆಯನ್ನು ತಾಳಬಹುದು ? ಸಮಸ್ಯೆಗೆ  ಖಾಯಂ ಪರಿಹಾರದ ಅಗತ್ಯವಿದೆ,'' ಎಂದು ಸುಷ್ಮಾ ಹೇಳಿದ್ದಾರೆನ್ನಲಾಗಿದೆ.

ಹಸೀನಾರನ್ನು ಭೇಟಿಯಾಗುವ ಮೊದಲು ಸುಷ್ಮಾ  ಅವರು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ ಎಚ್ ಮೆಹಮೂದ್ ಆಲಿ ಅವರನ್ನು ಭೇಟಿಯಾಗಿ ಮ್ಯಾನ್ಮಾರ್ ಹಿಂಸಾಚಾರದ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸಿದರು. ``ಪರಿಸ್ಥಿತಿಯನ್ನು  ಸಮಾಧಾನದಿಂದ ನಿಭಾಯಿಸಬೇಕು. ರಾಖೀನ್ ರಾಜ್ಯದಲ್ಲಿ ಆರ್ಥಿಕ ಹಾಗೂ ಮೂಲಭೂತಸೌಕರ್ಯ ಅಭಿವೃದ್ಧಿ ಪಡಿಸಿದಲ್ಲಿ ಸಮಸ್ಯೆಗೆ ಪರಿಹಾರ ದೊರೆಯಬಹುದು,'' ಎಂದು ಸುಷ್ಮಾ ಹೇಳಿದ್ದಾರೆ.

ಮ್ಯಾನ್ಮಾರ್ ಮೇಲೆ ಒತ್ತಡ ಹೇರುವುದನ್ನು ಭಾರತ ಮುಂದುವರಿಸಬೇಕೆಂದು ಬಾಂಗ್ಲಾದೇಶದ ವಿದೇಶಾಂಗ ಸಚಿವರು ಸುಷ್ಮಾ ಅವರಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News