12.15 ಕೋಟಿ ರೂ. ಬ್ಯಾಂಕ್ ಹಣ ದುರ್ಬಳಕೆ ಪ್ರಕರಣ: ಇಬ್ಬರ ಬಂಧನ

Update: 2017-10-23 12:35 GMT

ಬೆಂಗಳೂರು, ಅ.23: ಬ್ಯಾಂಕಿಂಗ್ ಹೊರ ಗುತ್ತಿಗೆ ಸೇವೆ ಒದಗಿಸುತ್ತಿದ್ದ ಕಂಪೆನಿಯೊಂದರ ನೌಕರರಿಬ್ಬರು ದೇಶಿ ಮೂಲದ ವ್ಯಕಿಯೊಬ್ಬರ ಖಾತೆಗೆ ವರ್ಗಾವಣೆಯಾಗಬೇಕಿದ್ದ 12.15 ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಇಲ್ಲಿನ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ದೊಡ್ಡಗುಬ್ಬಿ ಗ್ರಾಮದ ಮಾರುತಿ ಯಾನೆ ರಾಮುಚಂದಪ್ಪ(22) ಹಾಗೂ ಬೆಳ್ಳಂದೂರು ಗ್ರಾಮದ ಸುರೇಶ್‌ಬಾಬು(28) ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್, ಅಮೆರಿಕ ಮೂಲದ ಜೆ.ಪಿ.ಮೋರ್ದನ್ ಬ್ಯಾಂಕ್ ಮೂಲಕ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದ್ದು, ಈ ಬ್ಯಾಂಕ್‌ನ ಕೆಲಸಗಳನ್ನು ನಿರ್ವಹಿಸಲು ಬೆಂಗಳೂರಿನ ಕಂಪೆನಿಯೊಂದಕ್ಕೆ ಹೊರ ಗುತ್ತಿಗೆ ನೀಡಲಾಗಿತ್ತು. ಮಾರತ್‌ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕಚೇರಿ ಇದ್ದು, ಸುರೇಶ್‌ಬಾಬು ಕೆಲಸ ಮಾಡುತ್ತಿದ್ದರು.

 2017ರ ಆ.24ರಂದು ಬ್ಯಾಂಕ್ ಗ್ರಾಹಕರ ಆದೇಶದ ಮೇರೆಗೆ 12.15 ಕೋಟಿ ಹಣ ಮತ್ತೊಬ್ಬ ಗ್ರಾಹಕರ ಖಾತೆಗೆ ವರ್ಗಾವಣೆ ಆಗಬೇಕಿತ್ತು. ಆದರೆ, ಆರೋಪಿಗಳಾದ ಮಾರುತಿ ಮತ್ತು ಸುರೇಶ್‌ಬಾಬು ಅವರು ಒಳಸಂಚು ರೂಪಿಸಿ ಅಮೆರಿಕ ಮೂಲದ ವ್ಯಕ್ತಿಗೆ ವರ್ಗಾವಣೆಯಾಗಬೇಕಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

 ಈ ವಹಿವಾಟು ಮೂರು ತಿಂಗಳ ನಂತರ ಗ್ರಾಹಕರು ಮತ್ತು ಬ್ಯಾಂಕಿನ ಗಮನಕ್ಕೆ ಬಂದಿದೆ. ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಿದಾಗ ಮಾರುತಿ ಮತ್ತು ಸುರೇಶ್‌ಬಾಬು ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಹಣ ವರ್ಗಾವಣೆ ಮಾಡಿಕೊಂಡ ನಂತರ ಮಾರುತಿ ಬ್ಯಾಂಕಿನ ಕೆಲಸವನ್ನು ಬಿಟ್ಟಿದ್ದಾನೆ.

 ದೊಡ್ಡಬಳ್ಳಾಪುರದಲ್ಲಿ ಮೂರು ಎಕರೆ ಜಮೀನು, ಕೊತ್ತನೂರಿನಲ್ಲಿ 4ಅಂತಸ್ತಿನ ಕಟ್ಟಡ ಖರೀದಿಸಿದ್ದಾನೆ. ಜತೆಗೆ 470 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿಯನ್ನೂ ಖರೀದಿಸಿದ್ದಾನೆ. ಒಟ್ಟು ಇದಕ್ಕಾಗಿ 4 ಕೋಟಿ ರೂ. ಖರ್ಚು ಮಾಡಿದ್ದು, ಬಾಕಿ 8,14,90,448 ಹಣವನ್ನು ಆರೋಪಿಗಳ ಖಾತೆಯಲ್ಲಿ ಉಳಿದಿತ್ತು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣ ಪತ್ತೆಹಚ್ಚಿದ ಪೊಲೀಸರು ಬ್ಯಾಂಕಿನಲ್ಲಿದ್ದ ಹಣವನ್ನು ಜಪ್ತಿ ಮಾಡಿದ್ದು, ಖರೀದಿ ಮಾಡಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಜಮೀನು ಮತ್ತು ಮನೆ ಖರೀದಿಸಿದ್ದ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಮಾರತ್‌ಹಳ್ಳಿಯ ಸಬ್‌ಇನ್ಸ್‌ಪೆಕ್ಟರ್ ಎಂ.ನಾಗರಾಜ್, ಸಿಬ್ಬಂದಿಗಳಾದ ರಾಮಚಂದ್ರಪ್ಪ, ಮುನಿರಾಜು, ತಿಪ್ಪರಾಜು ಮತ್ತು ಮಂಜುನಾಥ್ ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ್ದಾರೆ ಎಂದು ಡಿಸಿಪಿ ಅಬ್ದುಲ್ ಅಹದ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News