ಒಂದೊಮ್ಮೆ ಇದು ತಾಜ್‌ಮಹಲ್ ಅಲ್ಲದಿದ್ದರೆ..!?

Update: 2017-10-23 18:49 GMT

ಮಾನ್ಯರೆ,

‘‘ತಾಜ್ ಮಹಲ್ ಭಾರತದ ಇತಿಹಾಸದ ಒಂದು ಕಪ್ಪುಚುಕ್ಕೆ’’ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್ ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ಹೆಚ್ಚಿನ ಎಲ್ಲಾ ಪ್ರಜ್ಞಾವಂತರ ಬೆಂಬಲ ಇದೆ. ಯಾಕೆಂದರೆ, ಮನಮೆಚ್ಚಿದ ಹುಡುಗನನ್ನು ಪ್ರೀತಿಸುವ ತಮ್ಮದೇ ಮಗಳನ್ನು ‘ಮರ್ಯಾದಾ ಹತ್ಯೆ’ ಎಂದು ಹೊಡೆದು ಸಾಯಿಸುವ ಅಪ್ಪ, ಸಹೋದರ ಇರುವ ಈ ದೇಶದಲ್ಲಿ, ಜಾತಿ ಬೇರೆ ಬೇರೆ ಎಂದು ಪ್ರೀತಿಸುವ ಜೋಡಿಯನ್ನು ಕೊಲೆ ಮಾಡಲು ಆದೇಶಿಸುವ ಖಾಪ್ ಪಂಚಾಯತ್ ಇರುವ ಈ ದೇಶದಲ್ಲಿ, ಏನೂ ತಪ್ಪುಮಾಡದ ನಿಸ್ಸಹಾಯಕ ಹೆಂಡತಿಯನ್ನು ವಿನಾಕಾರಣ ಬಿಟ್ಟಿರುವ ವ್ಯಕ್ತಿ ರಾಷ್ಟ್ರದ ಚುಕ್ಕಾಣಿ ಹಿಡಿದಿರುವ ಈ ದೇಶದಲ್ಲಿ, ಅಮರ ಪ್ರೇಮದ ಕುರುಹು ತಾಜ್ ಮಹಲ್ ಇರುವುದು ನಿಜಕ್ಕೂ ಕಪ್ಪುಚುಕ್ಕೆಯೇ ಸರಿ. ಈ ತಾಜ್ ಮಹಲನ್ನು ತ್ಯಾಜ್ಯ ಮಾಲ್ ಎಂದು ಘೋಷಿಸಿ ಅದಕ್ಕೆ ಕಪ್ಪುಚುಕ್ಕೆ ಇಡುವ ಬದಲು ಇಡೀ ತಾಜ್ ಮಹಲಿಗೆ ಕಪ್ಪುಬಣ್ಣ ಬಳಿಯಬೇಕು, ಅಮರ ಪ್ರೇಮದ ಕುರುಹು ಅಳಿಸಿ ಹಾಕಲೇಬೇಕು. ‘‘ತಾಜ್ ಮಹಲ್ ಮೂಲತಃ ಹಿಂದೂ ಶಿವ ದೇವಾಲಯವಾಗಿತ್ತು ಹಾಗೂ ಅದರ ಹೆಸರು ತೇಜೋ ಮಹಾಲಯವಾಗಿತ್ತು’’ ಎಂದು ಬಿಜೆಪಿ ಸಂಸದ ವಿನಯ ಕಟಿಯಾರ್ ಹೇಳಿದ್ದಾರೆ. ಆದರೆ ತಾಜ್ ಮಹಲ್ ಕಟ್ಟಿದ್ದು ಇಲ್ಲಿಯ ಬಡ ಹಿಂದುಳಿದ ಜಾತಿಯ ಹಿಂದೂ ಕಾರ್ಮಿಕರು ಎಂದು ಉ.ಪ್ರ.ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೇ ಹೇಳಿದ್ದಾರೆ. ಹಾಗಾದರೆ ಶಿವ ದೇವಾಲಯ ಬದಲಿಸಿ ತಾಜ್ ಮಹಲ್ ಕಟ್ಟಲು ಹಿಂದೂಗಳ ಪೂರ್ಣ ಒಪ್ಪಿಗೆ ಇತ್ತು ಎಂದು ಯೋಗಿ ಪರೋಕ್ಷವಾಗಿ ಹೇಳಿದಂತಾಯಿತು ಬಿಡಿ. ಈಗ ಕಡೇ ಪಕ್ಷ ಆ ತಾಜ್ ಮಹಲ್ ಒಳಗೆ ಹೋಗಲು ದಲಿತ ಶೂದ್ರರಿಗೆಲ್ಲಾ ಅಧಿಕಾರವಿದೆ. ಆದರೆ ಒಂದು ವೇಳೆ ಅದು (ಕಾಲ್ಪನಿಕ) ಶಿವ ದೇವಾಲಯವಾಗಿಯೇ ಮುಂದುವರಿದಿದ್ದರೆ ಅಲ್ಲಿ ಕೇವಲ ಬ್ರಾಹ್ಮಣರ ಹೊರತು ಬೇರೆ ಯಾರಿಗೂ ಪ್ರವೇಶ ಇರುತ್ತಿರಲಿಲ್ಲ. ಈಗ ಉತ್ತರ ಪ್ರದೇಶದ ಯಾವುದೇ ಹಿಂದೂ ದೇವಸ್ಥಾನದಲ್ಲಿ ನಮ್ಮಂತಹ ಶೂದ್ರರಿಗೆ ಮತ್ತು ದಲಿತರಿಗೆ ಪ್ರವೇಶವಿದೆಯೇ ಹೇಳಿ? ಹಾಗಾದರೆ ಶಿವ ದೇವಾಲಯಕ್ಕಿಂತ ತಾಜ್ ಮಹಲ್ ಸಾಮಾಜಿಕ ನ್ಯಾಯದ ಪ್ರತೀಕ ಎಂದು ಹೇಳಬಹುದು ಅಲ್ಲವೇ! -ಏಕಲವ್ಯ ಮುಂಡಾಲ,

ಅತ್ತಾವರ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News