ಜಾನ್ಸನ್ & ಜಾನ್ಸನ್ ಕಂಪೆನಿಗೆ ವಿಧಿಸಿದ್ದ 417 ಮಿಲಿಯನ್ ಡಾಲರ್ ದಂಡ ರದ್ದು

Update: 2017-10-24 07:26 GMT

ಕ್ಯಾಲಿಫೋರ್ನಿಯ,ಅ.24 :  ಜಾನ್ಸನ್ & ಜಾನ್ಸನ್ ಕಂಪೆನಿಯ ಬೇಬಿ ಪೌಡರ್ ಸಹಿತ ಇತರ ಉತ್ಪನ್ನಗಳನ್ನು  ಬಳಸಿದ ಮಹಿಳೆಯೊಬ್ಬರು ಅದರಿಂದ ತನಗೆ ಅಂಡಾಶಯದ ಕ್ಯಾನ್ಸರ್ ಉಂಟಾಗಿದೆ ಎಂದು ಆರೋಪಿಸಿ ಕಂಪೆನಿಯಿಂದ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದ ಪ್ರಕರಣದಲ್ಲಿ ಮಹಿಳೆಯ ಪರವಾಗಿ ಆಗಸ್ಟ್ ತಿಂಗಳಲ್ಲಿ ನ್ಯಾಯಾಧೀಶರೊಬ್ಬರು ತೀರ್ಪು ನೀಡಿ ಕಂಪೆನಿಗೆ 417 ಮಿಲಿಯನ್ ಡಾಲರ್ ದಂಡ ವಿಧಿಸಿದ್ದರೆ ಇದೀಗ ಈ  ತೀರ್ಪನ್ನು ಲಾಸ್ ಏಂಜಲಿಸ್ ಸುಪೀರಿಯರ್ ಕೋರ್ಟಿನ ನ್ಯಾಯಾಧೀಶ ಮಾರೆನ್ ನೆಲ್ಸನ್ ರದ್ದುಪಡಿಸಿದ್ದಾರೆ. ಕಂಪೆನಿಯ ವಿರುದ್ಧ ಹೋರಾಟ ನಡೆಸುತ್ತಿರುವ ಹಲವಾರು ಮಹಿಳೆಯರಿಗೆ ಇದು ದೊಡ್ಡ ಹಿನ್ನೆಡೆಯೆಂದೇ ಭಾವಿಸಲಾಗಿದೆ.

ಕ್ಯಾಲಿಫೋರ್ನಿಯಾ ನಿವಾಸಿ ಎವಾ ಎಚೆವೆರ್ರಿಯಾ ಎಂಬಾಕೆ  ದಾಖಲಿಸಿದ್ದ ಅಪೀಲಿನ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಆಕೆಗೆ  417 ಮಿಲಿಯನ್ ಡಾಲರ್ ಪರಿಹಾರ ನೀಡಬೇಕೆಂದು ಆದೇಶಿಸಿ ತೀರ್ಪು ಬಂದಿತ್ತು, ಆದರೆ ಇದೀಗ  ನ್ಯಾಯಾಲಯವು  ಕಂಪೆನಿಯ ಮನವಿಯನ್ನು ಪುರಸ್ಕರಿಸಿ ಪ್ರಕರಣದ ಮರು ವಿಚಾರಣೆಗೆ ನಿರ್ಧರಿಸಿದೆ. ಆಗಸ್ಟ್ ತಿಂಗಳಲ್ಲಿ ನಡೆಸಲಾದ ವಿಚಾರಣೆ  ಹಲವಾರು ಪ್ರಮಾದಗಳಿಂದ ಕೂಡಿತ್ತು ಎಂದು  ಅದನ್ನು ರದ್ದು ಪಡಿಸಿ ತೀರ್ಪು ನೀಡಿರುವ ನೆಲ್ಸನ್ ಹೇಳಿದ್ದಾರೆ.

ಈ ಬೆಳವಣಿಗೆಯ  ಬಗ್ಗೆ  ಪ್ರತಿಕ್ರಿಯಿಸಿದ ಸಂತ್ರಸ್ತೆಯ ಪರ ವಕೀಲ ಮಾರ್ಕ್ ರಾಬಿನ್ಸನ್ ತಾನು ಕೂಡಲೇ  ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಇಂತಹ ಉತ್ಪನ್ನಗಳಿಂದ ಕಷ್ಟಕ್ಕೀಡಾಗಿರುವ ಮಹಿಳೆಯರ ಪರವಾಗಿ ತಾವು ಹೋರಾಡುವುದಾಗಿ ಅವರು ತಿಳಿಸಿದರೆ, ಕಂಪೆನಿ ತನಗೆ ತೀರ್ಪಿನಿಂದ ಖುಷಿಯಾಗಿದೆ ಎಂದು ಹೇಳಿದೆ.ಕಂಪೆನಿ ಇಂತಹ ಒಟ್ಟು 4,800 ಪ್ರಕರಣಗಳನ್ನು ಎದುರಿಸುತ್ತಿದೆಯೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News