ಸಣ್ಣವ್ಯಾಪಾರಿಗಳಿಗೆ ಜಿಎಸ್‌ಟಿ ಇಳಿಸಿ: ಸಂಪುಟ ಸಮಿತಿ

Update: 2017-10-30 03:57 GMT

ಹೊಸದಿಲ್ಲಿ, ಅ. 30: ಸಣ್ಣ ವ್ಯಾಪಾರಿಗಳಿಗೆ ವಿಧಿಸುತ್ತಿರುವ ಜಿಎಸ್‌ಟಿ ತೆರಿಗೆ ದರವನ್ನು ಕಡಿಮೆ ಮಾಡುವಂತೆ ಸಂಪುಟ ಸಮಿತಿ ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿದೆ. ತೆರಿಗೆ ಹೊರೆಯನ್ನು ಕಡಿಮೆ ಮಾಡಿ, ಬದ್ಧತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಸಮಿತಿ ಪ್ರತಿಪಾದಿಸಿದೆ.

ಈ ಶಿಫಾರಸ್ಸನ್ನು ಜಿಎಸ್‌ಟಿ ಮಂಡಳಿ ನವೆಂಬರ್ 9-10ರಂದು ನಡೆಯುವ ಸಭೆಯಲ್ಲಿ ಆಂಗೀಕರಿಸಿದರೆ, ಲಕ್ಷಾಂತರ ಸಣ್ಣ ಉದ್ದಿಮೆದಾರರಿಗೆ, ಹೊಟೆಲ್‌ಗಳು ಮತ್ತು ವ್ಯಾಪಾರಿಗಳಿಗೆ ವರದಾನವಾಗಲಿದೆ.

ಈ ಬದಲಾವಣೆಗಳು ಜಿಎಸ್‌ಟಿ ಬಗೆಗಿನ ಆಕ್ರೋಶವನ್ನು ಕಡಿಮೆ ಮಾಡಲಿದ್ದು, ಬಿಜೆಪಿ ಎದುರಿಸುತ್ತಿರುವ ರಾಜಕೀಯ ದಾಳಿಯನ್ನು ನಿಲ್ಲಿಸಲು ಸಮರ್ಥವಾಗಲಿದೆ. ದೇಶದಲ್ಲಿ ನಗದು ವರ್ಗಾವಣೆಯನ್ನೇ ಅವಲಂಬಿಸಿರುವ ಅನೌಪಚಾರಿಕ ಅರ್ಥವ್ಯವಸ್ಥೆಯನ್ನು ಉತ್ತೇಜಿಸಲು ಜಿಎಸ್‌ಟಿ ಮಂಡಳಿ ಮುಂದಾಗಿದೆ. ಆದರೆ ಇವರನ್ನು ಹೆಚ್ಚಿನ ಹೊರೆ ಇಲ್ಲದೇ ತೆರಿಗೆ ಜಾಲಕ್ಕೆ ತರುವುದು ಮಂಡಳಿಯ ಉದ್ದೇಶವಾಗಿದೆ.

ರವಿವಾರ ನಡೆದ ಸಂಪುಟ ಸಮಿತಿ ಸಭೆಯಲ್ಲಿ, ತೆರಿಗೆ ದರ ವ್ಯಾಪಾರಿಗಳು, ಉತ್ಪಾದಕರು ಹಾಗೂ ರೆಸ್ಟೋರೆಂಟ್‌ಗಳಿಗೆ ಶೇಕಡ ಒಂದಕ್ಕೆ ಸೀಮಿತವಾಗಿರಬೇಕು ಎಂದು ಶಿಫಾರಸ್ಸು ಮಾಡಲಾಗಿದೆ ಎಂದು ಸಮಿತಿಯ ಸಂಚಾಲಕ ವಿಶ್ವಾಸ್ ಶರ್ಮಾ ವಿವರಿಸಿದರು. ಈ ಮುನ್ನ ಈ ದರ ಕ್ರಮವಾಗಿ ಶೇಕಡ 1, 2 ಮತ್ತು 5ರಷ್ಟಾಗಿತ್ತು. ಯೋಜನೆಯ ಲಾಭ ಪಡೆಯಲು ಇರುವ ವಹಿವಾಟು ಮಿತಿಯನ್ನು ಹಾಲಿ ಇರುವ ಒಂದು ಕೋಟಿ ರೂಪಾಯಿಗಳಿಂದ ಒಂದೂವರೆ ಕೋಟಿಗೆ ವಿಸ್ತರಿಸಲು ಕೂಡಾ ಸಮಿತಿ ಶಿಫಾರಸ್ಸು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News