ಖಾದಿ ಉದ್ಯಮಕ್ಕೆ ಖುಲಾಯಿಸಿದ ಅದೃಷ್ಟ

Update: 2017-10-30 04:54 GMT

ಹೊಸದಿಲ್ಲಿ, ಅ. 30: ದೇಶದಲ್ಲಿ ಖಾದಿ ಉದ್ಯಮಕ್ಕೆ ಅದೃಷ್ಟ ಮತ್ತೆ ಖುಲಾಯಿಸಿದೆ. 2017-18ನೆ ಹಣಕಾಸು ವರ್ಷದ ಮೊದಲ ಅರ್ಧವಾರ್ಷಿಕ ಅವಧಿಯಲ್ಲಿ ಖಾದಿ ಉತ್ಪನ್ನಗಳ ಮಾರಾಟ ಶೇಕಡ 89ರಷ್ಟು ಹೆಚ್ಚಿದೆ. ಕಳೆದ ವರ್ಷ ಇದೇ ಅವಧಿಗೆ 430 ಕೋಟಿ ರೂಪಾಯಿ ಮೌಲ್ಯದ ಖಾದಿ ಉತ್ಪನ್ನ ಮಾರಾಟವಾಗಿದ್ದರೆ, ಈ ಬಾರಿ ಆ ಪ್ರಮಾಣ 814 ಕೋಟಿ ರೂಪಾಯಿಗೆ ಹೆಚ್ಚಿದೆ. ಈ ಗಣನೀಯ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ರೇಡಿಯೊ ಸಂದೇಶ 'ಮನ್ ಕಿ ಬಾತ್‌'ನಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

"ಎಷ್ಟು ನೇಕಾರ ಕುಟುಂಬಗಳು, ಬಡಕುಟುಂಬಗಳು, ಕೈಮಗ್ಗದಲ್ಲಿ ದುಡಿಯುವ ಕುಟುಂಬಗಳು ಇದರಿಂದ ಲಾಭ ಪಡೆದಿರಬಹುದು ಎಂದು ನಾನು ಊಹಿಸಿಕೊಳ್ಳಬಲ್ಲೆ. ನಾವು ಖಾದಿ ಫ್ಯಾಷನ್ ಬಗ್ಗೆ ಮಾತನಾಡುತ್ತೇವೆ. ಆದರೆ ನನ್ನ ಇತ್ತೀಚಿನ ಅನುಭವದ ಪ್ರಕಾರ, ಖಾದಿ ಫಾರ್ ನೇಷನ್ ಎನ್ನುವ ಘೋಷಣೆ ಈಗ ಖಾದಿ ಫಾರ್ ಫ್ಯಾಷನ್" ಆಗಿದೆ. ಇದು ಖಾದಿ ಫಾರ್ ಟ್ರಾನ್ಸ್‌ಫಾರ್ಮೇಷನ್ ಆಗುತ್ತಿದೆ" ಎಂದು ಬಣ್ಣಿಸಿದರು.

ಖಾದಿ ಹಾಗೂ ಕೈಮಗ್ಗ ಬಡವರ ಜೀವನವನ್ನು ಬದಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅವರ ಸಬಲೀಕರಣದ ಪ್ರಬಲ ಅಸ್ತ್ರವಾಗಿ ಇದು ರೂಪುಗೊಂಡಿದೆ. ಗ್ರಾಮೋದಯದಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತಿದೆ ಎಂದು ವಿವರಿಸಿದರು.

ದೀಪಾವಳಿ ಅವಧಿಯಲ್ಲಿ ಕೂಡಾ ಮಾರಾಟ ಹೆಚ್ಚಿದೆ. ಲಕ್ಷುರಿ ಬ್ರಾಂಡ್, ಆಭರಣ ಹಾಗೂ ಆಟೊ ಕಂಪನಿಗಳಿಂದ ವಹಿವಾಟು ಹಿನ್ನೆಡೆಯ ಸೂಚನೆ ಬರುತ್ತಿದ್ದರೆ, ಅಕ್ಟೋಬರ್ 17ರಂದು ಧನತ್ರಯೋದಶಿ ದಿನ, ರಾಜಧಾನಿಯ ಕನ್ನೌತ್ ಪ್ಲೇಸ್ ಖಾದಿ ಮಳಿಗೆಯಲ್ಲಿ ದಾಖಲೆ 1.2 ಕೋಟಿ ರೂಪಾಯಿ ಮಾರಾಟವಾಗಿದೆ. ಕಳೆದ ವರ್ಷ ಗರಿಷ್ಠ 1.11 ಕೊಟಿ ರೂಪಾಯಿ ವಹಿವಾಟು ನಡೆಸಿತ್ತು ಎಂದು ಅಂಕಿ ಅಂಶ ನೀಡಿದರು.

ಖಾದಿ ಉತ್ಪನ್ನಗಳ ಬ್ರಾಂಡ್ ರಾಯಭಾರಿಯಾಗಿ ಮೋದಿ ರೂಪುಗೊಳ್ಳುತ್ತಿದ್ದು, ಉದ್ಯಮದ ಗಣನೀಯ ಪ್ರಗತಿಗೆ ನೆರವಾಗುತ್ತಿದ್ದಾರೆ. ಖಾದಿ ಹಾಗೂ ಗ್ರಾಮೋದ್ಯೋಗ ಉತ್ಪನ್ನಗಳ ಒಟ್ಟು ವಹಿವಾಟು ಈ ಹಣಕಾಸು ವರ್ಷದಲ್ಲಿ ಗರಿಷ್ಠ ಅಂದರೆ 50 ಸಾವಿರ ಕೋಟಿ ರೂಪಾಯಿ ತಲುಪುವ ನಿರೀಕ್ಷೆ ಇದೆ. ಗಿಫ್ಟ್ ಕೂಪನ್ ಮತ್ತು ಪರಸ್ಪರ ಒಡಂಬಡಿಕೆಗಳ ಮೂಲಕ ಸಾಂಸ್ಥಿಕ ಮಾರಾಟವನ್ನು ಹೆಚ್ಚಿಸಲು ಸಾಧ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News