ಸ್ವಿಸ್ ದಂಪತಿಯ ಮೇಲಿನ ದಾಳಿಯನ್ನು ಮುಸ್ಲಿಮರ ತಲೆಗೆ ಕಟ್ಟಲು ಹೊರಟ ಟ್ವಿಟರ್ ವಿಕೃತರು!

Update: 2017-10-31 13:37 GMT

ಹೊಸದಿಲ್ಲಿ, ಅ. 31: ‘‘ಆಗ್ರಾದ ಫತೇಪುರ ಸಿಕ್ರಿಯಲ್ಲಿ ಸ್ವಿಸ್ ದಂಪತಿ ಮೇಲಿನ ದಾಳಿ ಘಟನೆಯಲ್ಲಿ ಭಾಗಿಯಾಗಿದ್ದ 5 ‘ಶಾಂತಿಯುತ’ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಅವರು ಶೇಖ್ ಚಿಸ್ತಿ ಟ್ರಸ್ಟ್‌ನ ಗೂಂಡಾಗಳಾಗಿದ್ದಾರೆ’’ ಇದು ಪ್ರಶಾಂತ ಪಟೇಲ ಉಮರಾವೊ ಎಂಬಾತನ ಟ್ವೀಟ್.

ದೇಶದಲ್ಲಿ ನಡೆಯುವ ಕೆಲವು ಘಟನೆಗಳು ಸರಕಾರಕ್ಕೆ ಮುಜುಗರವನ್ನುಂಟು ಮಾಡುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ದುರಾಡಳಿತದ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ಪ್ರಶಾಂತ ಪಟೇಲನಂತಹ ಜನರು ಮಾಮೂಲಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಕಟ್ಟುಕಥೆಗಳನ್ನು ಹೆಣೆಯುತ್ತಿರುತ್ತಾರೆ. ಇಂತಹ ತಪ್ಪು ಘಟನೆಗಳಿಗೆಲ್ಲ ಅಲ್ಪಸಂಖ್ಯಾತ ಸಮುದಾಯದವರೇ ಕಾರಣವೆಂದು ಬಿಂಬಿಸುವುದು ಈ ಕಾರ್ಯತಂತ್ರದ ಭಾಗವಾಗಿದೆ. ಫತೇಪುರ ಸಿಕ್ರಿಯಲ್ಲಿ ಸ್ವಿಸ್ ದಂಪತಿಯ ಮೇಲಿನ ದಾಳಿ ಸರಕಾರಕ್ಕೆ ತುಂಬ ಮುಜುಗರವನ್ನುಂಟು ಮಾಡಿದೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳನ್ನು ಹರಿಯಬಿಡುವವರ ಕಾರ್ಯತಂತ್ರ ಗಳು ಸಿದ್ಧ ಮಾದರಿಯೊಂದನ್ನು ಅನುಸರಿಸುತ್ತಿವೆ.

ಪ್ರಶಾಂತ ಪಟೇಲ ಸರಣಿ ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಿರುವ ವ್ಯಕ್ತಿ ಎಂದು ಬೆಟ್ಟು ಮಾಡಿರುವ ಸುದ್ದಿ ಜಾಲತಾಣ ‘altnews.in’ ಆತನ ಹಿಂದಿನ ಇಂತಹ ದುಸ್ಸಾಹಸಗಳ ದಾಖಲೆಗಳನ್ನು ಹೊಂದಿದೆ.

 ಇನ್ನೊಂದು ಅನಾಮಿಕ ಟ್ರೋಲ್ ಅಕೌಂಟ್ ಕೂಡ ಪ್ರಶಾಂತ ಪಟೇಲನ ಧ್ವನಿಯಲ್ಲಿಯೇ ದಾಳಿಗೆ ಮುಸ್ಲಿಮರನ್ನು ಹೊಣೆಯಾಗಿಸಿ ಟ್ವೀಟ್ ಮಾಡಿದ್ದು, ಇದು ಕೆಲವು ಬಾರಿ ರಿಟ್ವೀಟ್ ಆಗಿದೆ.

   ಪ್ರಶಾಂತ ಪಟೇಲನ ಟ್ವೀಟ್‌ನ್ನು ಇಟ್ಟಕೊಂಡು ಸುಳ್ಳುಸುದ್ದಿಗಳ ವೆಬ್‌ಸೈಟ್ ‘ದೈನಿಕ ಭಾರತಿಯು ‘ಯೋಗಿ(ಉ.ಪ್ರ.ಮುಖ್ಯಮಂತ್ರಿ)ಗೆ ಕೆಟ್ಟ ಹೆಸರು ತರಲು ಸ್ವಿಸ್ ದಂಪತಿಯ ಮೇಲೆ ದಾಳಿ ನಡೆದಿತ್ತು. ಜಿಹಾದಿ ಸಂಘಟನೆಯ ಮೇಲೆ ಶಂಕೆ’ಎಂಬ ಶೀರ್ಷಿಕೆಯಡಿ ವರದಿಯನ್ನೂ ಪ್ರಕಟಿಸಿತ್ತು.

 ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳ ಹರಿದಾಟದ ಬಳಿಕ ಕೇಸರಿಪಡೆಯ ಕಮೆಂಟೇಟರ್‌ಗಳು ಆರೋಪಿಗಳ ಹೆಸರುಗಳು ಏನಿರಬಹುದೆಂದು ಕುತೂಹಲ ವ್ಯಕ್ತಪಡಿಸಿದ್ದರು. ಇವರ ಪೈಕಿ ತ್ರಿಪುರಾದ ರಾಜ್ಯಪಾಲ ತಥಾಗತ ರಾಯ್ ಕೂಡ ಸೇರಿದ್ದರು.

ಸ್ವಿಸ್ ದಂಪತಿಯ ಮೇಲೆ ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯವು ದಾಳಿ ನಡೆಸಿತ್ತು ಎಂದು ಬಿಂಬಿಸಲು ಪ್ರಶಾಂತ ಪಟೇಲನಂತಹ ವದಂತಿಗಳ ಸೃಷ್ಟಿಕರ್ತರು ಪ್ರಯತ್ನಿಸು ತ್ತಿದ್ದರೆ, ಇತ್ತ ದಾಳಿ ಪ್ರಕರಣದಲ್ಲಿ ಬಂಧಿಸಲ್ಪಟ್ಟವರ ಹೆಸರುಗಳು ದಾಳಿಗೆ ನಿರ್ದಿಷ್ಟ ಸಮುದಾಯವನ್ನು ಬೆಟ್ಟು ಮಾಡುವಂತಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿವೆ.

ಬಂಧಿತರ ಪೈಕಿ ಮೂವರು ಬಾಲಾರೋಪಿಗಳನ್ನು ರಿಮಾಂಡ್ ಹೋಮ್‌ಗೆ ಕಳುಹಿಸಲಾಗಿದೆ. ಪಂಕಜ್ ಮತ್ತು ರಾಹುಲ್ ಎಂಬ ವಯಸ್ಕ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ ಎಂದು ರಾಷ್ಟ್ರಮಟ್ಟದ ಆಂಗ್ಲ ದೈನಿಕವೊಂದು ವರದಿ ಮಾಡಿದೆ. ಸ್ಥಳೀಯ ವೃತ್ತಪತ್ರಿಕೆಗಳು ಮತ್ತು ಟಿವಿ ವಾಹಿನಿಗಳು ಎಲ್ಲ ಐದೂ ಆರೋಪಿಗಳ ಹೆಸರುಗಳು ಮತ್ತು ಚಿತ್ರಗಳನ್ನು ಪ್ರಕಟಿಸಿವೆ.

ಇಂತಹ ಅಪರಾಧ ಪ್ರಕರಣಗಳಲ್ಲಿ ಯಾವುದೇ ನಿರ್ದಿಷ್ಟ ಧಾರ್ಮಿಕ ಸಮುದಾಯ ವನ್ನು ಬೆಟ್ಟು ಮಾಡುವುದು ಕಾನೂನು ಮತ್ತು ನ್ಯಾಯ ವ್ಯವಸ್ಥೆಗೆ ಅಪಾಯಕಾರಿಯಾಗಿದೆ. ಯಾವುದೇ ಧಾರ್ಮಿಕ ಸಿದ್ಧಾಂತಗಳು ಇಂತಹ ಅಪರಾಧಗಳಿಗೆ ಇಂಬು ನೀಡುವುದಿಲ್ಲ. ಪ್ರಶಾಂತ ಪಟೇಲನಂತಹ ವಿವೇಚನಾರಹಿತ ವದಂತಿಗಳ ಸೃಷ್ಟಿಕರ್ತರು ವೃತ್ತಿಯಲ್ಲಿ ನ್ಯಾಯವಾದಿಗಳು ಮತ್ತು ಈ ದೇಶದ ನ್ಯಾಯಾಂಗ ವ್ಯವಸ್ಥೆಯ ಭಾಗವಾಗಿದ್ದಾರೆ ಎನ್ನುವುದು ನಿಜಕ್ಕೂ ಆಘಾತಕಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News