ಭಾರತದಲ್ಲಿ ಕಳೆದ ವರ್ಷ ಲಂಚ ನೀಡಿದವರೆಷ್ಟು ಮಂದಿ ಗೊತ್ತೇ?

Update: 2017-11-01 04:14 GMT

ಹೊಸದಿಲ್ಲಿ, ನ.1: ಭಾರತದಲ್ಲಿ ಕಳೆದ ವರ್ಷ ವಿವಿಧ ಮೂಲಭೂತ ಸರ್ಕಾರಿ ಸೇವೆಗಳನ್ನು ಪಡೆಯಲು ಶೇಕಡ 50ರಷ್ಟು ಮಂದಿ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂಬ ಅಂಶ ಸಮೀಕ್ಷೆಯೊಂದರಿಂದ ಬೆಳಕಿಗೆ ಬಂದಿದೆ.

ಸ್ಥಳೀಯ ಮಟ್ಟದಲ್ಲಿ ಪೊಲೀಸ್ ಇಲಾಖೆಯಿಂದ ಕೆಲಸ ಮಾಡಿಸಿಕೊಳ್ಳಲು, ಸ್ಥಳೀಯ ಸಂಸ್ಥೆ ಅಧಿಕಾರಿಗಳಿಂದ ಆಸ್ತಿ ಸಂಬಂಧಿ ದಾಖಲೆಗಳನ್ನು ಮಾಡಿಸಿಕೊಳ್ಳು ಹಾಗೂ ಮೌಲ್ಯವರ್ಧಿತ ತೆರಿಗೆ ಸಂಬಂಧ 10 ಮಂದಿಯ ಪೈಕಿ 8 ಮಂದಿ ಲಂಚ ನೀಡಿದ್ದಾರೆ ಎನ್ನುವುದೂ ಆನ್‌ಲೈನ್ ಪೋರ್ಟೆಲ್ ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿದೆ.

ಲೋಕಲ್ ಸರ್ಕಲ್ ಎಂಬ ಪೋರ್ಟೆಲ್ ಭಾರತದ ಭ್ರಷ್ಟಾಚಾರದ ಸಮೀಕ್ಷೆ ನಡೆಸಿದ್ದು, ಒಂದು ಲಕ್ಷ ಮಂದಿಯಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. 8 ಪ್ರಶ್ನೆಗಳಿಗೆ 200 ನಗರಗಳಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಎಷ್ಟು ಬಾರಿ 'ಕೈ ಬಿಸಿ' ಮಾಡಲಾಗಿದೆ ಎಂದು ಕೇಳಿದ ಪ್ರಶ್ನೆಗೆ ಶೇಕಡ 25ರಷ್ಟು ಮಂದಿ ಹಲವು ಬಾರಿ ಎಂದು ಉತ್ತರಿಸಿದ್ದರೆ, ಶೇಕಡ 20ರಷ್ಟು ಮಂದಿ ಒಂದು ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಲಂಚ ನೀಡಿದ್ದಾಗಿ ಬಹಿರಂಗಪಡಿಸಿದ್ದಾರೆ. ಶೇಕಡ 84ರಷ್ಟು ಮಂದಿ ಸ್ಥಳೀಯ ಸಂಸ್ಥೆಗಳಿಗೆ ಲಂಚ ನೀಡಿದ್ದನ್ನು ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News