ಉಗ್ರ ಸಂಪರ್ಕ ಆರೋಪ: ಪ್ರಧಾನಿ ಮೋದಿಗೆ ಅಹ್ಮದ್ ಪಟೇಲ್ ತಿರುಗೇಟು ನೀಡಿದ್ದು ಹೀಗೆ

Update: 2017-11-01 08:23 GMT

ಹೊಸದಿಲ್ಲಿ, ನ.1: ಗುಜರಾತ್ ರಾಜ್ಯದಲ್ಲಿ ಉಗ್ರ ನಿಗ್ರಹ ಪಡೆಯಿಂದ ಇತ್ತೀಚೆಗೆ ಬಂಧಿತರಾದ ಇಬ್ಬರಲ್ಲಿ ಒಬ್ಬ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಆಡಳಿತದ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಆರೋಪಕ್ಕೆ ಪಟೇಲ್ ಅದಕ್ಕೆ ತಕ್ಕ ತಿರುಗೇಟು ನೀಡಿದ್ದಾರೆ.

ಜಂಬೂಸರ್ ಎಂಬಲ್ಲಿ ಪಕ್ಷದ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಅಹ್ಮದ್ ಪಟೇಲ್, ಇಸ್ಲಾಮಿಕ್ ಸ್ಟೇಟ್ ಜತೆ ನಂಟು ಹೊಂದಿದ್ದಾರೆಂದು ಶಂಕಿಸಿ ಬಂಧಿಸಲಾಗಿರುವವರು ಬಿಜೆಪಿ ನಾಯಕರು ಸ್ಥಾಪಿಸಿದ್ದ ಹಾಗೂ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಾರೆಂದು ಹೇಳಿದ್ದಾರೆ.

‘‘ಬಿಜೆಪಿ ಉಗ್ರವಾದದ ಬಗ್ಗೆ ಮಾತನಾಡುತ್ತಿದೆ. ಇದರಿಂದಾಗಿ ಕಾಂಗ್ರೆಸ್ ನಾಯಕರು ಕಷ್ಟ ಪಟ್ಟಿದ್ದಾರೆ. ನಾನು ಕೆಲವೊಂದು ಪರಿಶೋಧನೆ ನಡೆಸಿದ್ದು ಶಂಕಿತ ಉಗ್ರ ಬಿಜೆಪಿ ನಾಯಕರ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದ ಎಂದು ತಿಳಿದುಕೊಂಡಿದ್ದೇನೆ. ಆತ ಕೆಲಸ ಮಾಡಿದ್ದ ಕೇರ್ ಹಾಸ್ಪಿಟಲ್ ಅನ್ನು ಮೋದಿ ಉದ್ಘಾಟಿಸಿದ್ದರು’’ಎಂದು ಪಟೇಲ್ ಹೇಳಿದ್ದಾರೆ.

‘‘ಹತಾಶವಾಗಿರುವ ಬಿಜೆಪಿ ಈಗ ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದೆ. ನಮ್ಮ ಶಾಸಕರಿಂದಾಗಿ ನಾನು ಗೆದ್ದಿದ್ದೇನೆ. ಬೇಕಿದ್ದರೆ ಈ ಬಗ್ಗೆ ನ್ಯಾಯಾಂಗವೇ ತೀರ್ಮಾನ ಕೈಗೊಳ್ಳಲಿ’’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಪಟೇಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News