ಎದುರಾಳಿ ಕಲ್ಪನೆ

Update: 2017-11-05 12:37 GMT

"ಎದುರಾಳಿಗಳ ವಿಷಯಕ್ಕೆ ಬಂದಾಗ, ಗಡಿವಿಷಯದಲ್ಲಿ ಮರಾಠಿಗರು, ನೀರಾವರಿ ಜಮೀನು ವಿಷಯದಲ್ಲಿ ತೆಲುಗರು; ನದಿನೀರಿನ ವಿಷಯದಲ್ಲಿ ತಮಿಳರು- ಗೋವನರು; ಕಾಸರಗೋಡು ಬಂದಾಗ ಮಲೆಯಾಳದವರು; ಕನ್ನಡ ಕಲಿಕೆಯ ವಿಚಾರ ಬಂದಾಗ ಉರ್ದು ಮನೆಮಾತಿನ ಮುಸ್ಲಿಮರು; ಹೊಸ ರೈಲಿನ ಘೋಷಣೆ, ಶಾಸ್ತ್ರೀಯ ಭಾಷೆ, ಹಿಂದಿ ಹೇರಿಕೆ ವಿಷಯಗಳಲ್ಲಿ ಕೇಂದ್ರ ಸರಕಾರ; ಕನ್ನಡ ಚಿತ್ರ ಪ್ರದರ್ಶಿಸದ ಥಿಯೇಟರುಗಳು; ಕರ್ನಾಟಕದ ವಿರುದ್ಧ ತೀರ್ಪುಕೊಡುವ ಕೋರ್ಟುಗಳು; ಬೆಂಗಳೂರನ್ನು ಆಕ್ರಮಿಸಿಕೊಳ್ಳುತ್ತಿರುವ ಉತ್ತರ ಭಾರತದ ವಣಿಕರು.... ಈ ಪಟ್ಟಿ ನಿಡಿದಾಗಿದೆ."

ಆಲೂರರ ಕರ್ನಾಟಕತ್ವ ಪರಿಕಲ್ಪನೆಯಲ್ಲಿ ಕೇಂದ್ರ ಸರಕಾರವೇ ಪ್ರಧಾನ ಎದುರಾಳಿ. ಶಂಬಾ ಅವರು ಕರ್ನಾಟಕದ ಋಣವನ್ನು ಒಲ್ಲದ ಮರಾಠಿ ಸಂಸ್ಕೃತಿಯನ್ನು ಎದುರಾಳಿಯಾಗಿ ಕಲ್ಪಿಸಿಕೊಂಡಿದ್ದರು. 90ರ ದಶಕದಲ್ಲಿ ಕಾಣಿಸಿಕೊಂಡ ಕ್ರಾಂತಿಕಾರಕ ಚಿಂತನೆ, ರಾಜ್ಯಗಳನ್ನು ತೊತ್ತುಗಳಂತೆ ನಡೆಸಿಕೊಳ್ಳುವ ಕೇಂದ್ರ ಸರಕಾರವನ್ನೂ ಅದರ ಸಾಮ್ರಾಜ್ಯಶಾಹಿಪರ ನೀತಿಗಳನ್ನೂ ಹಗೆಯಾಗಿ ಸೂಚಿಸಿತು. ಇತ್ತೀಚೆಗೆ ಬೆಂಗಳೂರಿನ ಮೆಟ್ರೊ ಗಳಲ್ಲಿ ಹಿಂದಿಯನ್ನು ಹೇರಲಾಗುತ್ತಿದೆ ಎಂದು ಸ್ವತಃ ಸರಕಾರವೇ ತನ್ನ ಪ್ರತಿರೋಧ ಸಲ್ಲಿಸಿತು. ಕನ್ನಡ ಕರ್ನಾಟಕಗಳ ಎದುರಾಳಿ ಕಲ್ಪನೆ ಬಹುರೂಪಿಯಾಗಿದೆ.

ಇದು ಕಾಲು ಶತಮಾನದ ಹಿಂದಿನ ಸುದ್ದಿ. ರಾಯಚೂರು ಸೀಮೆಯ ಬತ್ತದ ಕಣವೆ ಎನಿಸಿದ ಒಂದು ಊರಿಗೆ ರಾಜ್ಯೋತ್ಸವಕ್ಕೆ ಹೋಗಿದ್ದೆ. ಭಾಷಣಕ್ಕೆ ಮೊದಲು ಸಂಘಟಕರು ನನ್ನಲ್ಲಿ ಗುಪ್ತ ಕೋರಿಕೆಯೊಂದನ್ನು ಮಂಡಿಸಿದರು: ‘ಕನ್ನಡ ಪರವಾಗಿ ಎಷ್ಟಾದರೂ ಮಾತಾಡಿ. ತೆಲುಗರನ್ನು ಮಾತ್ರ ಟೀಕಿಸಬೇಡಿರಿ’. ವಾಸ್ತವವಾಗಿ ತೆಲುಗರನ್ನು ಟೀಕಿಸುವ ಉದ್ದೇಶ ನನ್ನಲ್ಲಿರಲಿಲ್ಲ. ಕುತೂಹಲದಿಂದ ಯಾಕೆಂದು ಕೇಳಿದೆ.

‘ಇವತ್ತಿನ ಕಾರ್ಯಕ್ರಮದ ಪೂರ್ತಿ ಖರ್ಚುವೆಚ್ಚ ಅವರದೇ’ ಎಂದು ಜವಾಬು ಬಂತು. ಕಾರ್ಯಕ್ರಮ ಮುಗಿದ ನಂತರ ತೆಲುಗು ಜಮೀನ್ದಾರರ ಮನೆಯಲ್ಲೇ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸೂಕ್ಷ್ಮವಾಗಿ ವಿಚಾರಿಸಲು ಕೆಲವು ವಿಷಯ ಗೊತ್ತಾದವು. ತುಂಗಭದ್ರಾ ಅಣೆಕಟ್ಟನ್ನು ಹೊಸಪೇಟೆಯಲ್ಲಿ ಕಟ್ಟಿದ ಬಳಿಕ ರಾಯಚೂರು ಕೊಪ್ಪಳ ಭಾಗದ ಭೂಮಿಯನ್ನು ಆಂಧ್ರದಿಂದ ಬಂದ ರೆಡ್ಡಿಗಳು ಕೊಂಡುಕೊಂಡು ಭೂಸ್ವಾಮಿಗಳಾಗಿ ಬೇರೂರಿದರು. ಅವರ ಅಭಿವೃದ್ಧಿ ಜಮೀನು ಕಳೆದುಕೊಂಡ ಕನ್ನಡಿಗರಲ್ಲಿ ಒಂದು ಬಗೆಯ ಕಸಿವಿಸಿ ಹುಟ್ಟಿಸಿದೆ. ಹೀಗಾಗಿ ಕನ್ನಡಪರ ಸಂಘಟನೆಗಳು ರಾಜ್ಯೋತ್ಸವದ ಹೊತ್ತಲ್ಲಿ ಈ ಬಗ್ಗೆ ಭಾವುಕವಾಗಿ ಪ್ರಸ್ತಾಪ ಮಾಡುತ್ತಲೇ ಇದ್ದವು. ಕೃಷ್ಣದೇವರಾಯನ ತೆಲುಗುಪರ ನೀತಿಯಿಂದ ಕನ್ನಡಕ್ಕೆ ಹಿಂಜರಿಕೆ ಆಗಿದೆ ಎಂದು ಕಲಬುರ್ಗಿಯವರು ಮಾಡಿದ ವಾದ, ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸಲು ತೆಲುಗರು ನಡೆಸಿದ ಯತ್ನ, ಆಲೂರು ಆದವಾನಿಗಳು ಆಂಧ್ರದಲ್ಲೇ ಉಳಿದ ಬೇಸರ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ರಂಜಾನ್‌ಸಾಬರನ್ನು ಕೊಂದಿದ್ದು- ಇವೆಲ್ಲವೂ ಈ ಕಸಿವಿಸಿಗೆ ಚಾರಿತ್ರಿಕ ಬುನಾದಿ ಒದಗಿಸಿದ್ದವು. ಹೀಗಾಗಿ ಈ ಭಾಗದ ತೆಲುಗು ಮಾತಿಗರಿಗೆ ರಾಜ್ಯೋತ್ಸವ ಬಂದರೆ ಕೊಂಚ ಆತಂಕ. ಇದನ್ನು ನಿವಾರಿಸಲು ಅವರು ಕೈಗೊಂಡ ಕ್ರಮವೆಂದರೆ, ಸ್ವತಃ ಆಯೋಜಕರಾಗಿ ನಿಂತು ರಾಜ್ಯೋತ್ಸವ ನೆರವೇರಿಸುವುದು. ಈ ಸಮಸ್ಯೆಯ ಮೂಲದಲ್ಲಿರುವುದು ಕನ್ನಡಪರ ಸಂಘಟನೆಗಳಲ್ಲಿರುವ ಎದುರಾಳಿಯ ಪರಿಕಲ್ಪನೆ.

ಗಡಿವಿಷಯದಲ್ಲಿ ಮರಾಠಿಗರು, ನೀರಾವರಿ ಜಮೀನು ವಿಷಯದಲ್ಲಿ ತೆಲುಗರು; ನದಿನೀರಿನ ವಿಷಯದಲ್ಲಿ ತಮಿಳರು-ಗೋವನರು; ಕಾಸರಗೋಡು ಬಂದಾಗ ಮಲೆಯಾಳದವರು; ಕನ್ನಡ ಕಲಿಕೆಯ ವಿಚಾರ ಬಂದಾಗ ಉರ್ದು ಮನೆಮಾತಿನ ಮುಸ್ಲಿಮರು; ಹೊಸ ರೈಲಿನ ಘೋಷಣೆ, ಶಾಸ್ತ್ರೀಯ ಭಾಷೆ, ಹಿಂದಿ ಹೇರಿಕೆ ವಿಷಯಗಳಲ್ಲಿ ಕೇಂದ್ರ ಸರಕಾರ; ಕನ್ನಡ ಚಿತ್ರ ಪ್ರದರ್ಶಿಸದ ಥಿಯೇಟರುಗಳು; ಕರ್ನಾಟಕದ ವಿರುದ್ಧ ತೀರ್ಪುಕೊಡುವ ಕೋರ್ಟುಗಳು; ಬೆಂಗಳೂರನ್ನು ಆಕ್ರಮಿಸಿಕೊಳ್ಳುತ್ತಿರುವ ಉತ್ತರ ಭಾರತದ ವಣಿಕರು- ಈ ಪಟ್ಟಿ ನಿಡಿದಾಗಿದೆ. ಚರಿತ್ರೆಯುದ್ದಕ್ಕೂ ವಿವಿಧ ಕನ್ನಡಪರ ಚಿಂತಕರು ಮಂಡಿಸಿರುವ ಕರ್ನಾಟಕತ್ವದ ಕಲ್ಪನೆಯಲ್ಲೂ ಈ ಎದುರಾಳಿಯ ಪರಿಕಲ್ಪನೆ ವಿಭಿನ್ನವಾಗಿದೆ. ಬಿ.ಎಂ.ಶ್ರೀಕಂಠಯ್ಯನವರು 1911ರಲ್ಲಿ ಮಾಡಿದ ‘ಕನ್ನಡ ಮಾತು ತಲೆಯೆತ್ತುವ ಬಗೆ’ ಉಪನ್ಯಾಸದಲ್ಲಿ, ಕನ್ನಡ ಕಾವ್ಯಕ್ಕೆ ಹಿಡಿದಿರುವ ಬಂದಿರುವ ಕಾಯಿಲೆಗೆ ಸಂಸ್ಕೃತ ಕಾರಣ ಎಂದು ವಿವರಿಸಿದ್ದರು. ಬೇಂದ್ರೆಯವರ ‘ಒಂದೇ ಕರ್ನಾಟಕ’ ಕವನ ‘ಹೆರವರನು’ ‘ಅವರಿದ್ದರೂ ಒಂದೇ ಇರದಿದ್ದರೂ ಒಂದೇ’ ಎಂದು ವಿಡಂಬನ ಧಾಟಿಯಲ್ಲಿ ಹೇಳುತ್ತ ಕನ್ನಡಿಗರು ಕಟ್ಟಿಕೊಂಡಿರುವ ಹುಸಿ ಎದುರಾಳಿಯ ಪರಿಕಲ್ಪನೆಯನ್ನು ವಿಡಂಬಿಸುತ್ತದೆ; ಆಲೂರರ ಕರ್ನಾಟಕತ್ವ ಪರಿಕಲ್ಪನೆಯಲ್ಲಿ ಕೇಂದ್ರ ಸರಕಾರವೇ ಪ್ರಧಾನ ಎದುರಾಳಿ. ಶಂಬಾ ಅವರು ಕರ್ನಾಟಕದ ಋಣವನ್ನು ಒಲ್ಲದ ಮರಾಠಿ ಸಂಸ್ಕೃತಿಯನ್ನು ಎದುರಾಳಿಯಾಗಿ ಕಲ್ಪಿಸಿಕೊಂಡಿದ್ದರು.

90ರ ದಶಕದಲ್ಲಿ ಕಾಣಿಸಿಕೊಂಡ ಕ್ರಾಂತಿಕಾರಕ ಚಿಂತನೆ, ರಾಜ್ಯಗಳನ್ನು ತೊತ್ತುಗಳಂತೆ ನಡೆಸಿಕೊಳ್ಳುವ ಕೇಂದ್ರ ಸರಕಾರವನ್ನೂ ಅದರ ಸಾಮ್ರಾಜ್ಯಶಾಹಿಪರ ನೀತಿಗಳನ್ನೂ ಹಗೆಯಾಗಿ ಸೂಚಿಸಿತು. ಇತ್ತೀಚೆಗೆ ಬೆಂಗಳೂರಿನ ಮೆಟ್ರೊಗಳಲ್ಲಿ ಹಿಂದಿಯನ್ನು ಹೇರಲಾಗುತ್ತಿದೆ ಎಂದು ಸ್ವತಃ ಸರಕಾರವೇ ತನ್ನ ಪ್ರತಿರೋಧ ಸಲ್ಲಿಸಿತು. ಕನ್ನಡ ಕರ್ನಾಟಕಗಳ ಎದುರಾಳಿ ಕಲ್ಪನೆ ಬಹುರೂಪಿಯಾಗಿದೆ. ಆಧುನಿಕ ಸಮಾಜಗಳಿಗೆ ಎದುರಾಳಿ ಕಲ್ಪನೆಯಿಂದ ಬಹುಶಃ ಬಿಡುಗಡೆ ಇಲ್ಲವೆಂದು ಕಾಣುತ್ತದೆ. ಭಾಷಿಕ ಭೌಗೋಳಿಕ ಧಾರ್ಮಿಕ ಜನಾಂಗಿಕ ನೆಲೆಯ ಎಲ್ಲ ರಾಷ್ಟ್ರೀಯತೆಗಳು ‘ಅನ್ಯ’ ಅಥವಾ ಎದುರಾಳಿ ಪರಿಕಲ್ಪನೆಯಿಂದಲೇ ರೂಪುಗೊಂಡವು. ನಾವು ನಮ್ಮ ಸಜ್ಜನಿಕೆಯಿಂದಲೇ ದುರ್ಬಲರಾದವರು. ಅನ್ಯಾಯಕ್ಕೆ ಒಳಗಾದವರು; ನಮ್ಮ ಹೇಡಿತನ ಕಳೆದುಕೊಂಡು ಶೌರ್ಯಗುಣ ಪಡೆಯದ ಹೊರತು ವಿಮೋಚನೆಯಿಲ್ಲ ಎಂಬುದು ಇಲ್ಲಿರುವ ಸಾಮಾನ್ಯ ತರ್ಕ. ಕುವೆಂಪು ಇಂಗ್ಲಿಷ್ ಮಾಧ್ಯಮವನ್ನು ಬಾಲಕೃಷ್ಣನಿಗೆ ಹಾಲೂಡುವ ನೆಪದಲ್ಲಿ ವಿಷವುಣಿಸಿದ ಪೂತನಿಗೂ, ತ್ರಿಭಾಷಾ ಸೂತ್ರವನ್ನು ತ್ರಿಶೂಲಕ್ಕೂ ಹೋಲಿಸಿದ್ದುಂಟು. ವರ್ತಮಾನ ಕಾಲದ ಸಂಘರ್ಷಗಳಿಗೆ ಚರಿತ್ರೆ ಮತ್ತು ಪುರಾಣದ ರೂಪಕಗಳು ದುಡಿಯುವ ಪರಿಗೆ ಇದು ನಿದರ್ಶನ. ಸಂಘರ್ಷ ಮಾಡುವವರ ಉದ್ದೇಶ ಮತ್ತು ತತ್ವದ ಆಧಾರದ ಮೇಲೆ ಸಂಘರ್ಷದ ಸ್ವರೂಪ ಬದಲಾಗುತ್ತದೆ. ಅದರ ಸಾಮಾಜಿಕ ಆರ್ಥಿಕ ರಾಜಕೀಯ ಧಾರ್ಮಿಕ ಆಯಾಮಗಳು ಬದಲಾಗುತ್ತವೆ.

ನಾಡು ನುಡಿ ನಾಡವರ ಪರವಾದ ಚಿಂತನೆಗಳು ಧರ್ಮಯುದ್ಧದ ನುಡಿಗಟ್ಟನ್ನು ಪಡೆದುಕೊಂಡಾಗ, ಎದುರಾಳಿಗಳು ಹಗೆಗಳಾಗಿ ಜನಾಂಗದ್ವೇಷವಾಗಿ ರೂಪಾಂತರ ಆಗುತ್ತದೆ. ಕಾವೇರಿ ನೀರು ತಮಿಳರ ನೆತ್ತರನ್ನು ಹರಿಸಿದ್ದು; ಉರ್ದುವಾರ್ತೆ ಪ್ರಸಾರದ ಪ್ರಕರಣವು ವಿವಾದಗೊಂಡು ಕೋಮುದಂಗೆಯಾಗಿ ಬದಲಾಗಿದ್ದು; ಹಸುರಕ್ಷಣೆ ವಿಷಯದಲ್ಲಿ ದನಸಾಗಿಸುವವರ ಮೇಲೆ ಗೋರಕ್ಷಕರು ಹಲ್ಲೆ ಮಾಡುತ್ತಿರುವುದು ಹೀಗೆ. ನಾಡಪ್ರೇಮವು ಸಂಕುಚಿತವಾದಂತೆಲ್ಲ ಮೂಲಭೂತವಾದಿ ಆಕ್ರಮಣದ ವಿನ್ಯಾಸವನ್ನು ಪಡೆಯುತ್ತದೆ. ಕನ್ನಡ ಚಳವಳಿಗಾರರು ಸುಲಭವಾಗಿ ಮತೀಯ ಚಳವಳಿಗಳ ಭಾಗವಾಗುವುದು ಇದೇ ಹಾದಿಯಲ್ಲಿ. ಹಾಗೆಂದು ಭಾಷೆ ನಾಡು ಕುರಿತ ಈ ಚಳವಳಿಗಳನ್ನು ಸಂಪೂರ್ಣ ನಿರಾಕರಿಸಲು ಬರುವುದಿಲ್ಲ. ಅವು ಎತ್ತುವ ಅನೇಕ ಪ್ರಶ್ನೆಗಳು ನ್ಯಾಯಯುತವಾಗಿರುತ್ತವೆ. ಆದರೆ ನ್ಯಾಯಕ್ಕಾಗಿ ಅವರು ಕಟ್ಟುವ ಹೋರಾಟದಲ್ಲಿರುವ ಎದುರಾಳಿಯ ಕಲ್ಪನೆ ದೋಷಪೂರ್ಣವಾಗುವುದರಿಂದ, ಅವುಗಳ ವಿಧಾನ ಹಾದಿತಪ್ಪಿಸುತ್ತದೆ. ಸ್ಥಳೀಯರಿಗೆ ಆಗುವ ಅನ್ಯಾಯದ ಕಲ್ಪನೆಯಲ್ಲಿ ಭಾರತದಲ್ಲಿ ರಾಜಕೀಯ ಪಕ್ಷಗಳೇ ಹುಟ್ಟಿವೆ. ಮರಾಠಿಗರ ಅವಕಾಶಗಳನ್ನು ಕನ್ನಡಿಗರು ಉತ್ತರ ಭಾರತೀಯರು ಕಬಳಿಸುತ್ತಿದ್ದಾರೆ ಎಂಬ ಅನ್ಯಾಯ ಪ್ರಜ್ಞೆಯಿಂದ ಶಿವಸೇನೆ ಹುಟ್ಟಿತು.

ಚಾರಿತ್ರಿಕ ಹಿನ್ನೆಲೆಯುಳ್ಳ ಶಿವಸೇನೆಯ ಹೆಸರಲ್ಲೇ ರಾಜಕೀಯ ಮತ್ತು ಮತೀಯ ಸಂಘರ್ಷದ ಲಕ್ಷಣಗಳಿವೆ. ಅದರ ಚಿಹ್ನೆಯಾದ ಹುಲಿಮುಖವೂ ಇದನ್ನು ದೃಢಪಡಿಸುತ್ತದೆ. ಆದರೆ ಶಿವಸೇನೆ ಮುಂಬೈನ ಆರ್ಥಿಕ ಲೋಕವನ್ನು ಆಳುತ್ತಿರುವ ಗುಜರಾತಿಗಳನ್ನು ತನ್ನ ಎದುರಾಳಿಯಾಗಿ ಮಾಡಿಕೊಳ್ಳಲಿಲ್ಲ. ಬದಲಿಗೆ ರೈಲ್ವೆ ಪರೀಕ್ಷೆ ಬರೆಯಲು ಬಂದ ಬಡಪಾಯಿ ಬಿಹಾರಿಗಳನ್ನು ಓಡಾಡಿಸಿ ಬಡಿಯಿತು. ಉತ್ತರ ಭಾರತದ ಟ್ಯಾಕ್ಸಿ ಚಾಲಕರನ್ನು ಅಟ್ಟಾಡಿಸಿತು. ಇದಕ್ಕೂ ಹಿಂದೆ ಹೋದರೆ ಅದು ಹೋಟೆಲ್ ಉದ್ಯಮದಲ್ಲಿರುವ ಕನ್ನಡಿಗರನ್ನು ತನ್ನ ಎದುರಾಳಿಯಾಗಿಸಿಕೊಂಡಿತ್ತು. ದಲಿತರ ಮತ್ತು ಮುಸ್ಲಿಮರ ವಿರುದ್ಧವೂ ಅದರ ಪೂರ್ವಗ್ರಹಿಕೆ ಪ್ರಸಿದ್ಧವಾಗಿದೆ. ಏಕಕಾಲದಲ್ಲಿ ಧಾರ್ಮಿಕ ಪ್ರಾದೇಶಿಕ ಭಾಷಿಕ ಎದುರಾಳಿಗಳನ್ನು ಅದು ಕಟ್ಟಿಕೊಂಡಿದೆ.

ಅಸ್ಸಾಮಿನಲ್ಲೂ ಕೇಂದ್ರ ಸರಕಾರದ ತಾರತಮ್ಯ ನೀತಿಗೆ ಉಲ್ಫಾಗಳು ಬಲಿಕೊಟ್ಟಿದ್ದು ಬಿಹಾರ ಕೂಲಿಕಾರರನ್ನು. ನಮಗೆ ಅನ್ಯಾಯವಾಗಿದೆ ಎಂಬ ವೇದನೆಯಲ್ಲಿ ಹುಟ್ಟುವ ಕುರುಡು ಆಕ್ರೋಶ ಮತ್ತು ಕ್ರೌರ್ಯವಿದು. ನಿಜವಾದ ಎದುರಾಳಿಯನ್ನು ಕಂಡುಕೊಳ್ಳಲಾಗದ ಮಿತಿ, ಸಮಸ್ಯೆಯನ್ನು ಸಂವಾದದಿಂದ ಬಗೆಹರಿಸಿಕೊಳ್ಳಲಾಗದ ದುಡುಕು, ಪ್ರತಿರೋಧವನ್ನು ಡೆಮಾಕ್ರಟಿಕ್ ವಿಧಾನದಲ್ಲಿ ಮಾಡಲಾಗದ ಅವಿವೇಕದ ಫಲಗಳಿವು. ನಿಜವಾದ ಎದುರಾಳಿಗಳು ಆಕ್ರಮಣಕ್ಕೆ ಸಿಲುಕುವುದಿಲ್ಲ. ದುರ್ಬಲರು ಮಾತ್ರ ಬಲಿಪಶುಗಳಾಗುವರು. ಅವರ ಬಲಿಗೆ ಸಾರ್ವಜನಿಕ ಬೆಂಬಲವೂ ಸಿಕ್ಕಿಬಿಡುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ನಾಡಿನ ಎಲ್ಲ ದಮನಿತ ವರ್ಗ ಮತ್ತು ಸಮುದಾಯಗಳಿಗೆ, ಅಭಿವೃದ್ಧಿಯ ತಕ್ಕ ಅವಕಾಶ ಒದಗಿಸುವ ಮತ್ತು ಸಂಪನ್ಮೂಲ ಹಂಚುವ ಕಾರ್ಯದಲ್ಲಿ ವಿಫಲವಾದಾಗ, ಈ ಕಾರ್ಯವು ನ್ಯಾಯಬದ್ಧವಾಗಿ ನಡೆಯಲು ಬೇಕಾದ ವಾತಾವರಣ ನಿರ್ಮಿಸಬಲ್ಲ ಜನಪರ ಹೋರಾಟಗಳು ಇಲ್ಲದಾಗ, ಶಿವಸೇನೆಯಂತಹ ನರಭಕ್ಷಕ ಹುಲಿಗಳು ಹುಟ್ಟಿಕೊಳ್ಳುತ್ತವೆ. ಅವುಗಳ ಎದುರಾಳಿಯ ಕಲ್ಪನೆ, ಸಂವಾದರಹಿತ ಕಾಠಿಣ್ಯ, ದುಸ್ಸಾಹಸತನ, ಆಕ್ರಮಣಕಾರಿ ಕಾರ್ಯವಿಧಾನ ವೀರಗುಣದಂತೆ ಕಾಣತೊಡಗುತ್ತವೆ.

"ಆಧುನಿಕ ಸಮಾಜಗಳಿಗೆ ಎದುರಾಳಿ ಕಲ್ಪನೆಯಿಂದ ಬಹುಶಃ ಬಿಡುಗಡೆ ಇಲ್ಲವೆಂದು ಕಾಣುತ್ತದೆ. ಭಾಷಿಕ, ಭೌಗೋಳಿಕ, ಧಾರ್ಮಿಕ, ಜನಾಂಗಿಕ ನೆಲೆಯ ಎಲ್ಲ ರಾಷ್ಟ್ರೀಯತೆಗಳು ‘ಅನ್ಯ’ ಅಥವಾ ಎದುರಾಳಿ ಪರಿಕಲ್ಪನೆಯಿಂದಲೇ ರೂಪುಗೊಂಡವು. ನಾವು ನಮ್ಮ ಸಜ್ಜನಿಕೆಯಿಂದಲೇ ದುರ್ಬಲರಾದವರು. ಅನ್ಯಾಯಕ್ಕೆ ಒಳಗಾದವರು; ನಮ್ಮ ಹೇಡಿತನ ಕಳೆದುಕೊಂಡು ಶೌರ್ಯಗುಣ ಪಡೆಯದ ಹೊರತು ವಿಮೋಚನೆಯಿಲ್ಲ ಎಂಬುದು ಇಲ್ಲಿರುವ ಸಾಮಾನ್ಯ ತರ್ಕ."

ಭಾಷೆ ಪ್ರಾಂತೀಯತೆ ಅಥವಾ ಸ್ಥಳೀಯ ಸಮುದಾಯ ರಕ್ಷಣೆಯ ಹೆಸರಲ್ಲಿ ಹುಟ್ಟುವ ಈ ಹುಲಿಗಳಿಗೆ ಒಬ್ಬ ರಿಂಗ್‌ಮಾಸ್ಟರ್ ಅಥವಾ ಈ ಅಭಿನವ ಸೈನಿಕರಿಗೆ ದಂಡನಾಯಕರೂ ಹುಟ್ಟಿಕೊಳ್ಳುತ್ತಾರೆ. ಈ ಸರ್ವಾಧಿಕಾರಿಗಳು ಚಳವಳಿಗೆ ವ್ಯಕ್ತಿನಿಷ್ಠೆಯನ್ನು ಮೌಲ್ಯವಾಗಿಸುತ್ತಾರೆ. ಆ ವ್ಯಕ್ತಿಯನ್ನು ಒಪ್ಪದವರನ್ನು ನಿರ್ದಯವಾಗಿ ಹೊಸಕಿಹಾಕುತ್ತಾರೆ. ಆಗ ಎದುರಾಳಿಗಳು ಹೊರಗಲ್ಲ, ಒಳಗಿನಿಂದಲೇ ಕಾಣತೊಡಗುತ್ತಾರೆ. ಕರ್ನಾಟಕದಲ್ಲಿ ಬಾಳಸಾಹೇಬ್ ಠಾಕ್ರೆಯಂತಹ ಹುಲಿಗಳಿಲ್ಲ. ಆದರೆ ಬಹುತೇಕ ಸಂಘಟನೆಗಳು ವ್ಯಕ್ತಿಕೇಂದ್ರಿತವಾಗಿವೆ. ಎಂತಲೆ ಅವು ಮಂಡಿಸುವ ಎದುರಾಳಿ ಕಲ್ಪನೆ ಆ ವ್ಯಕ್ತಿಯ ಹಿತಾಸಕ್ತಿಯ ಆಧಾರದಲ್ಲಿ ರೂಪುಗೊಂಡಿರುತ್ತದೆ.

ಕನ್ನಡಪರ ಸಂಘಟನೆಗಳ ಬಲವನ್ನು ಅರ್ಥಪೂರ್ಣ ಕರ್ನಾಟಕ ಕಟ್ಟಬಲ್ಲ ಶಕ್ತಿಯನ್ನಾಗಿ ರೂಪಾಂತರಿಸಲು ಸಾಧ್ಯವಿಲ್ಲವೇ? ಈ ದಿಸೆಯಲ್ಲಿ ಗಂಭೀರ ಚಿಂತನೆ ನಡೆದಿಲ್ಲ. ಹಾಗೆ ನಡೆಸಬಲ್ಲ ವಿದ್ವಾಂಸರು ಚಿಂತಕರು ಲೇಖಕರು ರಾಜಕಾರಣಿಗಳನ್ನು ಈ ಸಂಘಟನೆಗಳು ಒಳಗೊಳ್ಳುವುದೂ ಇಲ್ಲ. ಚಿಂತಕರ ವಲಯದಲ್ಲೂ ಈ ಸಂಘಟನೆಗಳ ಬಗ್ಗೆ ಅಸ್ಪಶ್ಯತಾ ನಿಲುವಿದೆ. ಬಲವಿದ್ದವರಿಗೆ ದಿಸೆಯಿಲ್ಲದಿರುವುದೂ, ಕಾಣ್ಕೆಯುಳ್ಳವರಿಗೆ ಅದನ್ನು ಜಾರಿಮಾಡುವ ಬಲವಿಲ್ಲದಿರುವುದೂ ಒಂದು ವೈರುಧ್ಯ. ಕನ್ನಡಪರವಾಗಿ ಹುಟ್ಟಿರುವ ಈ ಶಕ್ತಿಗಳನ್ನು ಪಳಗಿಸಿ ಕರ್ನಾಟಕಪರ ಪ್ರಾದೇಶಿಕ ಪಕ್ಷ ಕಟ್ಟುವ ಕೆಲವು ಯತ್ನಗಳು ನಡೆದವು. ಆದರೆ ಅವು ಶೋಚನೀಯವಾಗಿ ನಿಷ್ಫಲಗೊಂಡವು. ಎದುರಾಳಿ ಕಲ್ಪನೆಯಿಂದಲೇ ಹುಟ್ಟುವ ಹುಲಿಗಳನ್ನು ಪಳಗಿಸಿ ಸವಾರಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ.

ಜಾಗತೀಕರಣವು ಪರೋಕ್ಷವಾಗಿ ಭಾರತದ ಬೇರೆಬೇರೆ ಕಡೆ ಇಂತಹ ಹುಲಿಗಳನ್ನು ಸೃಷ್ಟಿಸಿದೆ. ಕರ್ನಾಟಕದ ಮಹಾನಗರಗಳು, ವಿಭಿನ್ನ ದೇಶಗಳ ಧರ್ಮಗಳ ಭಾಷೆಗಳ ಹಿನ್ನೆಲೆಯುಳ್ಳ ಜನರ ವಲಸೆಗಳು ನಡೆಯುತ್ತ; ಸ್ಥಳೀಯ ಭಾಷಿಕರನ್ನು ಮೂಲೆಗೆ ಒತ್ತರಿಸುತ್ತ ಕಾಸ್ಮೋಪಾಲಿಟನ್ ರೂಪಾಂತರ ಪಡೆಯುತ್ತಿವೆ. ಇವು ಈ ಹುಲಿಗಳ ಬೇಟೆಯಾಡಲು ಬೇಕಾದ ಕಾಡಾಗಿದೆ.

ಅಮೆರಿಕದಲ್ಲೂ ಸ್ಥಳೀಕರ ಅವಕಾಶವನ್ನು ಹೊರಗಿನವರು ಕಸಿಯುತ್ತಿದ್ದಾರೆ ಎಂಬ ಗ್ರಹಿಕೆಯಲ್ಲಿ ನವನಾಜಿವಾದ ಮರುಹುಟ್ಟು ಪಡೆಯುತ್ತಿದೆ. ಎದುರಾಳಿ ಪರಿಕಲ್ಪನೆಯಲ್ಲೇ ಗೆದ್ದು ಬಂದಿರುವ ಟ್ರಂಪ್ ಅಧ್ಯಕ್ಷನಾದ ಬಳಿಕ, ಜನಾಂಗದ್ವೇಷ ಹೆಚ್ಚುತ್ತಿದೆ.

ದಮನಿತ ಸಂವೇದನೆಗೆ ವಿವೇಕವಿಲ್ಲದ ಆಕ್ರಮಣತನ ಜತೆಗೂಡಿದರೆ ಅದು ಸಹಜವಾಗಿ ಮೂಲಭೂತವಾದಿ ಆಗುತ್ತದೆ. ಅಪರಿಮಿತ ಬಲವುಳ್ಳ ದೇಹಕ್ಕೆ ತಕ್ಕ ಆರೋಗ್ಯಕರ ಚಿಂತನೆಯ ಮನಸ್ಸು ಇಲ್ಲದಿದ್ದರೆ ಅದು ಹುಲಿಯೊ ಗೂಳಿಯೊ ಆಗುತ್ತದೆ. ಈ ಹುಲಿ ಮೇಕೆಯನ್ನು ತಿನ್ನುತ್ತದೆ, ಆನೆಯನ್ನಲ್ಲ. ಗೂಳಿ ಚಿಕ್ಕಗಿಡವನ್ನು ತಿಕ್ಕಬಲ್ಲದು, ದೊಡ್ಡ ಮರಗಳನ್ನಲ್ಲ. ತಪ್ಪಾಗಿ ಎದುರಾಳಿಯನ್ನು ಕಲ್ಪಿಸಿಕೊಂಡವರೆಲ್ಲ, ಶತ್ರುಗಳಿಗೆ ಶಕ್ತಿತುಂಬುವ ಪ್ರಮಾದ ಮಾಡಿದ್ದಾರೆ ಎಂದು ಚರಿತ್ರೆ ಹೇಳುತ್ತದೆ.

Writer - ಪ್ರೊ.ರಹಮತ್ ತರೀಕೆರೆ

contributor

Editor - ಪ್ರೊ.ರಹಮತ್ ತರೀಕೆರೆ

contributor

Similar News