ನೆನಪೆಂಬ ವಿಸ್ಮಯ

Update: 2017-11-03 06:54 GMT

ನೆನಪೆಂದರೆ ಒಂದು ಮಾಯೆಯೇ! ಒಬ್ಬ ವ್ಯಕ್ತಿಯೆಂದರೆ ಆತನ ನೆನಪುಗಳ ಒಟ್ಟು ಮೊತ್ತವೆಂದು ಹೇಳುವುದುಂಟು. ನಾವು ಪ್ರತಿಯೊಬ್ಬರೂ ನಮ್ಮ ನಮ್ಮ ಅನುಭವಗಳ, ನೆನಪುಗಳ ಸಂಚಯವಾಗಿದ್ದೇವೆ. ವರ್ತಮಾನದ ನಡತೆಯ ಮೇಲೆ ಪ್ರಭಾವ ಬೀರುವ ಶಕ್ತಿಯುಳ್ಳ ಭೂತಕಾಲದ ಅನುಭವಗಳು ನೆನಪಿನ ರೂಪದಲ್ಲಿ ನಮ್ಮನ್ನು ಕಾಡುತ್ತಿರುತ್ತವೆ. ಮಿದುಳಿನಲ್ಲಿ ಉಳಿಸಿಕೊಂಡ ಮಾಹಿತಿ, ಅನುಭವಗಳನ್ನು ಬೇಕೆಂದಾಗ ಮರಳಿಪಡೆಯುವ ನಮ್ಮ ಸಾಮರ್ಥ್ಯವೇ ನೆನಪಲ್ಲವೇ?

ನನ್ನ ಅಕ್ಕ ಈಗ ನೆನಪನ್ನು ಕಳಕೊಂಡಿದ್ದಾಳೆ. ನೆನಪನ್ನು ಕಳಕೊಳ್ಳುವುದು ಅದೆಷ್ಟೊಂದು ನೋವಿನ ಸಂಗತಿಯೆಂಬುದನ್ನು ನಾನು ಈಗಲೇ ಅನುಭವಿಸಿದ್ದು. ಅವಳು ನನ್ನ ಖಾಸಾ ಅಕ್ಕನಲ್ಲ. ದೊಡ್ಡಪ್ಪಯ್ಯನ ಮಗಳು. ಆದರೆ ಸ್ವಂತ ಅಕ್ಕನಿಗಿಂತೇನೂ ಕಮ್ಮಿಯವಳಲ್ಲ. ಅವಳ ತಂದೆ ಅವಳು ಚಿಕ್ಕ ಮಗುವಿರುವಾಗಲೇ ತೀರಿಕೊಂಡುದರಿಂದ ನಮ್ಮ ಮನೆಯಲ್ಲೇ ಅವಳು ಬೆಳೆದಿದ್ದಳು. ಸೌಮ್ಯ ಉರುಟು ಮುಖ, ನಾಗವೇಣಿಯಂತಹ ಉದ್ದ ನೇರ ಕೂದಲು, ಮೃದುಮಾತು. ಒಂದೆರಡು ಮಾತಾಡುವುದರೊಳಗೆ ಕಣ್ಣಲ್ಲಿ ನೀರು ಬರುವ ಸ್ವಭಾವ. ವಿಧೇಯತೆಯಿಂದಲೋ, ದಾಕ್ಷಿಣ್ಯದಿಂದಲೋ ತುಸು ಬಾಗಿದ ಬೆನ್ನು, ಮದುವೆಯಾಗಿ ಇವತ್ತಿಗೂ ಒಂದೇ ರೀತಿಯ ತೆಳ್ಳಗಿನ ಮೈಕಟ್ಟು. ಅವಳ ಮದುವೆಯಾಗುವಾಗ ನಾನು ಎರಡನೆಯ ತರಗತಿಯಲ್ಲಿದ್ದೆ. ನಾಲ್ಕು ದಿನಗಳ ಅವಳ ಮದುವೆಯ ನೆನಪು ನನ್ನಲ್ಲಿ ಈಗಲೂ ಹಸಿರಾಗಿದೆ. ನಾವು ತಂಗಿ-ತಮ್ಮಂದಿರೆಂದರೆ ಅವಳಿಗೆ ತವರುಮನೆಯವರೆಂಬ ಅಭಿಮಾನ, ಮುಖದಲ್ಲಿ ಮಿಂಚಿ, ಹತ್ತಿರವೇ ಕುಳಿತು ಕೈ ಹಿಡಿದು ತೋಳಿನುದ್ದಕ್ಕೂ ಬಳಚಿಯಾಳು. ದೈನ್ಯ ಮುಖಭಾವದಲ್ಲಿ ನಮ್ಮನ್ನೇ ನೋಡಿಯಾಳು. ನೆನಪೇ ಹೋದ ಮೇಲೆ ಅಲ್ಲಿ ಮಾತಿಗೆಲ್ಲಿ ಅವಕಾಶ? ನೆನಪನ್ನು ಕಳಕೊಂಡ ನೋವಿನ ಅಸಹಾಯಕತೆಯಿಂದ ಕಣ್ಣನ್ನು ಮಂಜುಗೊಳಿಸಿ, ‘ನಾನು ಯಾವುದಕ್ಕೂ ಪ್ರಯೋಜನ ಇಲ್ಲದವಳು, ಅಲ್ವ? ಯಾಕೂ ಬೇಡದವಳು..’ ಎನ್ನುತ್ತಿದ್ದರೆ, ಕರುಳು ಹಿಂಡಿದಂತಾಗುತ್ತದೆ.

ನನ್ನ ಕಾದಂಬರಿ ‘ಪಾಚಿ ಕಟ್ಟಿದ ಪಾಗಾರ’ದಲ್ಲಿ ಬರುವ ಪಾರಳ ಬಾಲ್ಯದ ಬಗ್ಗೆ ಬರೆಯುತ್ತ ನಾನು ಈ ನನ್ನ ಅಕ್ಕನ ಬಾಲ್ಯದ ನೆನಪುಗಳನ್ನು ಎರವು ಪಡೆದಿದ್ದೆ. ಹಾಗೆ ಬರೆಯುವ ನಿರ್ದಿಷ್ಟ ಉದ್ದೇಶವಿಲ್ಲದಿದ್ದರೂ, ಬರೆಯುತ್ತ ಹೋದಂತೆ  ಅವಳ ನೀಳವಾದ ಕೂದಲು, ತಾಯಿಗೆ ಅವಳ ಮೇಲಿದ್ದ ಪ್ರೀತಿ-ಸಿಟ್ಟು, ಎಲ್ಲವೂ ಬಂತು. ಪುಸ್ತಕ ಬಂದ ಮೇಲೆ ಒಮ್ಮೆ ಅವಳನ್ನು ಭೇಟಿಯಾದಾಗ, (ಆಗ ಅವಳ ನೆನಪು ಸರಿಯಿತ್ತು) ಇದ್ದಕ್ಕಿದ್ದಂತೆ, ‘ಏ, ನನ್ನದೇ ವಿಷಯ ಬರೆದಿದ್ದಿಯಲ್ಲ...’ ಎಂದಳು. ನನಗೆ ಅಳುಕಾಯಿತು. ಅವಳ ಸ್ವರದಲ್ಲಿ ಆರೋಪವಿತ್ತು, ‘ಇವಳೊಬ್ಬಳು! ನಿಂಗೆ ಯಾರ ಅದೆಲ್ಲ ಹೇಳಿದ್ದು?’ ಆದರೆ ಮುಖದಲ್ಲಿ ಹೌದೋ ಅಲ್ಲವೋ ಎಂಬಂತಹ ನಗುವಿತ್ತು. ಆಗ ಐದಾರು ವರ್ಷದವಳಾಗಿದ್ದ ನನಗೆ ಅವೆಲ್ಲ ನೆನಪಿತ್ತೆಂದರೆ ಅವಳೇ ನಂಬುವವಳು? ಕೆಲವು ವಿಚಾರಗಳನ್ನು ಅವಳೇ ಹಿಂದೊಮ್ಮೆ, ಬಹಳ ಮುಂಚೆ ನನಗೆ ಹೇಳಿದ್ದಳು. ಅದನ್ನೂ ನಂಬಲು ಅವಳು ತಯಾರಿರಲಿಲ್ಲ. ಅಂತೂ, ಅವಳು ನನ್ನನ್ನು ಬಯ್ಯುತ್ತಿದ್ದ ರೀತಿಯಲ್ಲಿ - ತನ್ನ ಬದುಕಿನ ಭಾಗವೊಂದನ್ನು ಯಾರಾದರೂ ನೆನಪಿನಲ್ಲಿಟ್ಟು ಬರೆದಿದ್ದಾರೆಂಬ ಅಸ್ಪಷ್ಟ ಖುಶಿಯಿದ್ದಂತಿತ್ತು ಎಂಬ ಸೂಕ್ಷ್ಮವನ್ನು ನಾನು ಗಮನಿಸಿದೆ. ನೆನಪೆಂದರೆ ಒಂದು ಮಾಯೆಯೇ! ಒಬ್ಬ ವ್ಯಕ್ತಿಯೆಂದರೆ ಆತನ ನೆನಪುಗಳ ಒಟ್ಟು ಮೊತ್ತವೆಂದು ಹೇಳುವುದುಂಟು. ನಾವು ಪ್ರತಿಯೊಬ್ಬರೂ ನಮ್ಮ ನಮ್ಮ ಅನುಭವಗಳ, ನೆನಪುಗಳ ಸಂಚಯವಾಗಿದ್ದೇವೆ. ವರ್ತಮಾನದ ನಡತೆಯ ಮೇಲೆ ಪ್ರಭಾವ ಬೀರುವ ಶಕ್ತಿಯುಳ್ಳ ಭೂತಕಾಲದ ಅನುಭವಗಳು ನೆನಪಿನ ರೂಪದಲ್ಲಿ ನಮ್ಮನ್ನು ಕಾಡುತ್ತಿರುತ್ತವೆ. ಮಿದುಳಿನಲ್ಲಿ ಉಳಿಸಿಕೊಂಡ ಮಾಹಿತಿ, ಅನುಭವಗಳನ್ನು ಬೇಕೆಂದಾಗ ಮರಳಿಪಡೆಯುವ ನಮ್ಮ ಸಾಮರ್ಥ್ಯವೇ ನೆನಪಲ್ಲವೇ? ಕೊನೆಗಾದರೂ ನಮ್ಮನ್ನು ನಾವೇ ಎಂದು ದೃಢಪಡಿಸುವುದು ನಮ್ಮ ಸ್ಮರಣಶಕ್ತಿಯೇ. ಹಾಗಿರುವಾಗ ತನ್ನ ಮಕ್ಕಳನ್ನೇ ಗುರುತು ಹಿಡಿಯದ ನನ್ನ ಅಕ್ಕ ಈಗ ಅದೇ ಅಕ್ಕ ಹೌದೇ? ನೆನಪು ಹೋಯಿತು, ನೆನಪು ನಷ್ಟವಾಯಿತು, ನೆನಪು ಕೊಳೆತಿದೆ  ಎನ್ನುತ್ತೇವೆ. ಆದರೆ ನಿಜದಲ್ಲೆಂದರೆ ನೆನಪು ಎಂದೂ ನಶಿಸುವುದಿಲ್ಲ. ಅದರ ಸಾಮಾರ್ಥ್ಯ ಅನಂತ. ಎಲ್ಲ ಅನುಭವಗಳೂ ನೆನಪಿನ ಉಗ್ರಾಣದಲ್ಲಿ ಬೆಚ್ಚಗೆ ಕುಳಿತಿವೆ. ಅವನ್ನು ಮರಳಿ ಪಡೆಯುವ ಶಕ್ತಿ ಕುಂಠಿತವಾದಂತೆ ದಾರಿ ದುರ್ಗಮವಾಗುತ್ತ ಹೋಗುತ್ತದೆ. ನನ್ನಕ್ಕನಿಗೆ ಆದುದಾದರೂ ಇದೇ ಇರಬೇಕು. ನಿವೃತ್ತರಾದ ಅವಳ ಗಂಡ ತೀರಿ ಹೋದ ಮೇಲೆಯೇ ಅವಳು ನೆನಪನ್ನು ಕಳೆದುಕೊಳ್ಳಲು ಸುರುಮಾಡಿದ್ದು. ‘ಅಪ್ಪನ ನೆನಪೂ ಇಲ್ಲವಲ್ಲ ನಿನಗೆ?’ ಎಂದು ಮಗಳು ಕೇಳಿದರೆ, ‘ಸ್ವಲ್ಪ ನಿನ್ನ ಅಪ್ಪನ ವಿಷಯ ಹೇಳಲ್ಲ,’ ಎಂದು ದುಂಬಾಲು ಬೀಳುತ್ತಾಳಂತೆ. ಭೂತಕಾಲವೆಂದರೆ ಅದೊಂದು ಮುಗಿದ ಕತೆ, ಅದನ್ನು ಬದಲಿಸಲಿಕ್ಕಾಗುವುದಿಲ್ಲ ಎಂದು ಜನ ಭಾವಿಸುತ್ತಾರೆ. ನೆನಪನ್ನು ಮರಳಿ ಪಡೆಯುವ ಪ್ರಕ್ರಿಯೆಯಲ್ಲಿ ಭೂತಕಾಲವನ್ನು ನಾವು ಪುನಃರ್ರಚಿಸುತ್ತ ಇರುತ್ತೇವೆ. ನೆನಪಿಸುವ ರೀತಿಯನ್ನು, ಅರ್ಥ ಮಾಡಿಕೊಳ್ಳುವ ಕ್ರಮವನ್ನು ಬದಲಿಸಿಕೊಳ್ಳುತ್ತಲೇ ಇರುತ್ತೇವೆ. ಹೀಗೆ ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುವುದರಿಂದ ಹಿಂದೆ ನಡೆದುದರ ಮರು-ವ್ಯಾಖ್ಯಾನವಾಗಿ, ಹಿಂದಿನ ನೋವಿನ, ದುಃಖದ ಸಂಗತಿಗಳು ತಮ್ಮ ತೀವ್ರತೆಯನ್ನು ಕಳಕೊಳ್ಳಬಹುದು. ಕೆಲವೊಮ್ಮೆ ಗೊಂದಲಕ್ಕೊಳಗಾದ ನೆನಪುಗಳು ಬೇರೆ ಆಕಾರ ಪಡೆದು ನಮ್ಮನ್ನೇ ಅಚ್ಚರಿಪಡಿಸಬಹುದು.

ನರತಜ್ಞರ ಹೇಳಿಕೆಯಂತೆ ಪ್ರತೀ ಸಲ ಯಾವುದನ್ನೇ ಆದರೂ ನೆನಪಿಸಿಕೊಳ್ಳುವಾಗ, ಮೆದುಳಿನಲ್ಲಿ ಹರಡಿರುವ ಆ ನೆನಪಿನ ಕುರುಹುಗಳನ್ನೆಲ್ಲ ಒಟ್ಟು ಹಾಕಿ ಸಂಗತಿಯ ಮರುರಚನೆ ಮಾಡಿಕೊಳ್ಳುತ್ತ ಇರುತ್ತೇವಂತೆ. ನಮ್ಮ ಅರಿವಿಲ್ಲದೆಯೇ, ತುಂಬ ನೋವುಂಟುಮಾಡುವ, ಆತ್ಮಗೌರವಕ್ಕೆ ಧಕ್ಕೆಯಾಗುವ ವಿಷಯಗಳು ಅದುಮಲ್ಪಡಲೂ ಬಹುದು; ಮನಸ್ಸಿಗೆ ಮುದ ಕೊಡುವ ಸಂಗತಿಗಳು ಉತ್ಪ್ರೇಕ್ಷೆಗೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ನೆನಪೆಂಬುದು ನಂಬಲರ್ಹವಲ್ಲ ಎಂದು ಸಾರಾಸಗಟಾಗಿ ಹೇಳಬಹುದೇ? ಅಥವಾ ಅದಕ್ಕಿಂತ - ನೆನಪಿಗೆ ಹೊಂದಿಕೊಳ್ಳುವ ಗುಣವಿದೆ ಎಂದರೆ ಸರಿಯಾದೀತೇ? ಅಂತೂ ನೆನಪೆಂಬುದು ’ಇದಮಿತ್ಥಂ’ ಎಂದು ಹೇಳುವಂಥದ್ದಲ್ಲ. ಆದರೆ ನೆನಪಿನಿಂದ ವಂಚಿತರಾಗುವುದನ್ನು ಮಾತ್ರ ಊಹಿಸಲೂ ಸಾಧ್ಯವಿಲ್ಲ. ಮಾತನಾಡುವ ಮನಸ್ಸಿದ್ದರೂ ನನ್ನಕ್ಕನ ಬಾಯಿಯಿಂದ ಒಂದೇ ಒಂದು ಶಬ್ದ ಹೊರಡದು. ನೆನಪಿನ ಆಧಾರವಿಲ್ಲದೆ ಮಾತು ಹೇಗೆ ಸಾಧ್ಯ?

ಕೆಲವೊಂದು ಸಂದರ್ಭಗಳಲ್ಲಿ ನಮ್ಮ ನೆನಪಿನ ಬಗ್ಗೆ ಸಂಶಯವಾಗುವುದೂ ಇದೆ. ಸಾಮಾನ್ಯವಾಗಿ ನನ್ನ ನೆನಪಿನ ಬಗ್ಗೆ ನನಗೆ ಅಭಿಮಾನವಿತ್ತು. ಸಣ್ಣ ಸಣ್ಣ ವಿವರಗಳೂ ನೆನಪಿನಲ್ಲಿರುತ್ತವೆ ಎಂದುಕೊಂಡಿದ್ದೆ. ಆದರೆ ಕೆಲವೊಮ್ಮೆ ನನ್ನ ನೆನಪನ್ನು ತಂಗಿಯೋ, ತಮ್ಮನೋ ಹಾಗಲ್ಲವೇ ಅಲ್ಲವೆಂದು ಸಾಧಿಸಿದಾಗ, ನೆನಪು ಆಡುವ ಕಣ್ಣುಮುಚ್ಚಾಲೆಯಿಂದ ಗಲಿಬಿಲಿಗೊಳ್ಳುವಂತಾಗುತ್ತದೆ. ಯಾರ ನೆನಪು ಸರಿಯಿರಬಹುದೆಂದು ದೀರ್ಘ ಚರ್ಚೆ ನಡೆದರೂ, ಪ್ರತಿಯೊಬ್ಬರಿಗೂ ತಮ್ಮದೇ ಸರಿ ಎಂಬ ಅನಿಸಿಕೆ.

ಹಬ್ಬ, ಮದುವೆಗಳ ಕಾರ್ಯಕ್ರಮಗಳಲ್ಲಿ ಅಕ್ಕ-ತಂಗಿ, ಬಂಧುಗಳು ಸೇರಿದ ದೊಡ್ಡ ಗುಂಪುಗಳಲ್ಲಿ, ಹಳೆಯ ಸುದ್ದಿಗಳನ್ನು ಮಾತಾಡುವಾಗ ಯಾರಾದರೊಬ್ಬರು ತಪ್ಪುತಪ್ಪಾಗಿ ನೆನಪುಗಳನ್ನು ಮೆಲುಕುಹಾಕಿದ ಅನುಭವ ಎಲ್ಲರಿಗೂ ಆಗಿರಬಹುದು. ಆಗ ತಿದ್ದಲೂ ಆಗದೆ, ತಿದ್ದದಿರಲೂ ಆಗದೆ ಪೇಚಾಟವಾಗುವುದಿದೆ. ಅದಕ್ಕಿಂತಲೂ ಅವಸ್ಥೆ ಎಂದರೆ ನಮಗಾದ ಒಂದು ಅನುಭವವನ್ನು ಬೇರೊಬ್ಬರು ಅದು ತಮ್ಮದೇ ಅನುಭವವೆಂಬಂತೆ ರೂಪಿಸಿದಾಗ! ಅಷ್ಟರ ಮಟ್ಟಿಗೂ ನೆನಪು ತಿರುಚಿಕೊಳ್ಳಬಹುದೇ? ತಿರುಚಿದ ನೆನಪೇ ಶಾಶ್ವವಾಗಬಹುದೇ?

ನೆನಪುಗಳೆಂದರೆ ಕೆಲವೊಮ್ಮೆ... ಸಣ್ಣ ಸಣ್ಣ ದೃಶ್ಯದ ತುಂಡುಗಳು, ಮಾತಿನ ತುಣುಕುಗಳು, ಒಮ್ಮೆಮ್ಮೆ ಬರೇ ಬೆಳಕಿನ ಗೆರೆ ತಳಿಕಂಡಿಯಿಂದ ಚಾವಡಿಗೆ ಬರುವ ಬೆಳಕಿನ ಗೀಟಿನಲ್ಲಿ ಹೊಳೆಯುವ ಧೂಳಿನ ಕಣಗಳು, ‘ಅಂಬಾ’ ಎನ್ನುವ ಕೂಗಿನೊಂದಿಗೆ ಬರುವ ಗೊರಸಿನ ಸದ್ದು, ಮಳೆಗಾಲದಲ್ಲಿ ರಾತ್ರಿ ಮಲಗುವಾಗ ಅಮ್ಮ ಖಡ್ಡಾಯವಾಗಿ ತೊಡಿಸುತ್ತಿದ್ದ ಅವಳೇ ಹೊಲಿದ ಫ್ರಿಲ್ಲಿನ ಬಿಳಿ ಟೊಪ್ಪಿಯ ನವಿರುತನ, - ಇಂಥವು ಕಣ್ಣಿಗೆ, ಕಿವಿಗೆ, ಸ್ಪರ್ಶಕ್ಕೆ ಮಾತ್ರ ಸಿಗುವ ನೆನಪುಗಳು. ಇನ್ನು ಕೆಲವು ನೆನಪಿನ ಎಳೆಗಳಿವೆ, ಅವು ಬರೇ ಮೂಗಿಗೆ ಮಾತ್ರ ಅನುಭವವಾಗುವಂಥವುಗಳು....

ಒಮ್ಮೆ ಕೇರಳದ ಕಾಡೊಂದರ ಒಳಗೆ ನಡೆಯುತ್ತಿದ್ದೆವು, ಬೇಸಗೆಯ ಕೊನೆಯ ದಿನಗಳು, ಒಂದೆರಡು ಮಳೆಯಿಂದ ಒದ್ದೆಯಾದ ನೆಲ, ಜಿಗಣೆಗಳಿರಬಹುದೆಂದು ನಮ್ಮ ಗೈಡ್ ಹೆದರಿಸಿದ್ದ. ಹಾಗಾಗಿ ಧ್ಯಾನವೆಲ್ಲ ಆ ಕಡೆಗೇ ಇತ್ತು. ಇದ್ದಕ್ಕಿದ್ದಂತೆ ಏನೋ ಹಳಹಳಿಕೆ, ಸೂಕ್ಷ್ಮ ತಳಮಳ, ಬೆಚ್ಚಗಿನ ಭಾವನೆ, ಸುವಾಸನೆಯೊಂದು ನವಿರಾಗಿ ಹಬ್ಬಿದ ಅನುಭವ... ಅದು ನನ್ನ ಅಜ್ಜಿಯ ಪೆಟ್ಟಿಗೆಯಲ್ಲಿ ಸೀರೆಗಳ ನಡುವೆ ಇಡುತ್ತಿದ್ದ ಲಾವಂಚದ ಪರಿಮಳವೆಂದು ತಿಳಿದದ್ದು ಮತ್ತೆ. ತೀರ ಚಿಕ್ಕಂದಿನ ಆ ಪರಿಮಳ ನಿಜ ಹೇಳಬೇಕೆಂದರೆ ನನಗೆ ಮರೆತೇ ಹೋಗಿತ್ತು. ಪರಿಮಳದೊಂದಿಗೆ ತಂತಾನೇ ಕಣ್ಣು ಪಸೆಗೂಡುತ್ತಿರುವಾಗ ಅಜ್ಜಿಯ ಕುರಿತ ನೆನಪುಗಳ ಸಾಲು  ಮನೆಯಲ್ಲೇ ನಡೆಯುತ್ತಿದ್ದ ಭರತನಾಟ್ಯ ಕ್ಲಾಸು ಮುಗಿಸಿ ಒಳಗೆ ಹೋದರೆ ಬರಸೆಳೆದು ಮಡಿಲಲ್ಲಿ ಮಲಗಿಸಿ ನನ್ನ ಕಾಲುಗಳನ್ನು ಸವರುತ್ತಿದ್ದ ನನ್ನ ಅಜ್ಜಿ.... ಆ ಬೆಚ್ಚಗಿನ ಮಡಿಲಲ್ಲಿ ಲಾವಂಚದ ಆಪ್ತ ಘಮ... ಪ್ರಸಿದ್ಧ ಮನಶಾಸ್ತ್ರಜ್ಞ ಯೂಂಗ್ ಇದನ್ನು ಅಡಗಿ ಕುಳಿತ ನೆನಪುಗಳು ಅಥವಾ ‘ಅದುಮಿಟ್ಟ ತಿರುಳು’ ಎಂದು ಕರೆದಿದ್ದಾನೆ, ತನ್ನಿಂದ ತಾನೇ ಅಥವಾ ನಾವಾಗಿ ಅವನ್ನು ನೆನಪುಮಾಡಿಕೊಳ್ಳುವ ಸಾಧ್ಯತೆಯೇ ಇಲ್ಲದೆ, ವಾಸನೆಯೋ, ಸ್ಪರ್ಶವೋ, ಇನ್ಯಾವುದೋ ಬಾಹ್ಯ ಪ್ರಚೋದನೆಯಿಂದಷ್ಟೇ ದಕ್ಕುವ ಇಂಥ ನೆನಪುಗಳು ಅಮೂಲ್ಯ ನಿಧಿಗೆ ಸಮಾನ.

ನಮ್ಮ ನೆನಪಿನ ಬಹುಭಾಗವನ್ನು ಬಾಲ್ಯದ ನೆನಪುಗಳೇ ಆವರಿಸಿರುತ್ತವೆ. ಚಿಕ್ಕವರಿರುವಾಗ ಪ್ರತಿಯೊಂದು ಸಂಗತಿಗೂ ಅಚ್ಚರಿ, ಕೌತುಕ, ಸಂಭ್ರಮ! ಹಸಿಯಾಗಿ, ತಾಜಾತನವಿರುವ ಬಾಲ್ಯಕಾಲದ ಅನುಭವಗಳು ಗಾಢವಾಗಿ ಮನಸ್ಸಿನೊಳಗೆ ಅಚ್ಚಳಿಯದೆ ಕುಳಿತುಬಿಟ್ಟಿರುತ್ತವೆ. ಇಷ್ಟೇ ಅಲ್ಲ ನಮ್ಮ ನಡವಳಿಕೆ, ಯೋಚನಾಕ್ರಮ, ನಿಲುವುಗಳ ಮೇಲೂ ನಿರಂತರ ಪ್ರಭಾವ ಬೀರಿಕೊಂಡೇ ಇರುತ್ತವೆ. ಬಾಲ್ಯದ ಈ ಅನುಭವಗಳನ್ನು ನೆನಪಿನ ತಳಹದಿ ಎನ್ನಲೂ ಬಹುದು. ಮೇಲೆ ಕಟ್ಟಿದ ಕಟ್ಟಡವೆಲ್ಲ ಬಿದ್ದುಹೋದ ಮೇಲೂ ಉಳಿಯುವುವೆಂದರೆ ಈ ತಳಹದಿ ಮಾತ್ರ. ವೃದ್ಧಾಪ್ಯದಲ್ಲಿ ಕೇವಲ ಸಣ್ಣಂದಿನ ನೆನಪುಗಳನ್ನು ಮಾತ್ರ ಮೆಲುಕುಹಾಕುವುದು ಸಾಮಾನ್ಯ. ತೊಂಬತ್ತು ವರ್ಷ ಬದುಕಿದ ನಮ್ಮ ತಂದೆಯವರು ತಮ್ಮ ಕೊನೆಯ ದಿನಗಳಲ್ಲಿ ಕೇವಲ ತಾನು ಹುಟ್ಟಿದ ಮನೆ, ತನ್ನ ಬಾಲ್ಯದ ದಿನಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದರು. ನಾಲ್ವತ್ತು ವರ್ಷಗಳಿಂದ ಹೋಗಿರದ ಹುಟ್ಟಿದ ಮನೆಯ ಬಗ್ಗೆಯೇ ನಿದ್ದೆಯಲ್ಲೂ ಕನವರಿಸುತ್ತ, ಎಚ್ಚರಿರುವಾಗೆಲ್ಲ, ‘ಈಗಲೇ ಹೋಗುವ ಹಲ್ಸನಾಡಿಗೆ, ಹೊರಡಿ ಎಲ್ಲರೂ,’ ಎಂದು ಅವಸರದ ಸ್ವರದಲ್ಲಿ ಹೇಳುತ್ತಿದ್ದರೆ, ಆ ಮನೆಯ ಮೇಲೆ ಅಷ್ಟೊಂದು ಬೆಚ್ಚಗಿನ ಭಾವನೆಯಿತ್ತೇ ಅವರಿಗೆ ಎಂದು ನಾವು ಅಚ್ಚರಿಪಡುವಂತಾಗಿತ್ತು. ನಮ್ಮಲ್ಲಿ ಹೆಚ್ಚಿನವರು ಬಾಲ್ಯದ ಬಗ್ಗೆ ಇನ್ನಿಲ್ಲದಂತೆ ಹಳಹಳಿಸುವುದಿದೆ. ಬಾಲ್ಯದ ಕಾಲ ಹೇಗೇ ಇದ್ದಿರಲಿ, ಈಗಿನ ನೆನಪಿನಲ್ಲಿ ಮಾತ್ರ ಅದರಷ್ಟು ಸುಂದರ ಸಮಯ ಬೇರೊಂದಿಲ್ಲವೆಂದು ವೈಭವೀಕರಿಸುವುದು ಸಾಮಾನ್ಯ. ನೆನಪಿನ ಮೂಸೆಯಲ್ಲಿ ಅದು ಸುಂದರ, ಅತಿ ಸುಂದರ, ಇನ್ನಷ್ಟು ಸುಂದರವಾಗುತ್ತ ಹೋಗಿರುತ್ತದೆ. ಅಂತೆಯೇ ಕೆಲವು ನೋವಿನ ಕ್ಷಣಗಳು ಪ್ರತಿಸಲ ನೆನಪುಮಾಡಿಕೊಳ್ಳುವಾಗಲೂ ಇನ್ನಷ್ಟು ನೋವನ್ನು ಕೊಡುವುದಿದೆ. ನನ್ನ ಗೆಳತಿಯೊಬ್ಬರು ತನ್ನ ಗಂಡನ ಸ್ವಭಾವವನ್ನು ನೆನಪಿಸುತ್ತ ಅದೆಷ್ಟು ನೊಂದುಕೊಳ್ಳುತ್ತಿದ್ದರೆಂದರೆ, ಆತನ ಪರಿಚಯವಿದ್ದ ನಮಗೆ ಅಚ್ಚರಿಯಾಗುವಷ್ಟು. ಆತ ಸತ್ತು ಇಪ್ಪತ್ತು ವರ್ಷಗಳಲ್ಲಿ ನೆನಪಿನ ಆಕಾರವು ಬದಲಾಗುತ್ತ ಹೋಗಿ, ಆತನ ಸಣ್ಣಪುಟ್ಟ ತಪ್ಪುಗಳು ವಿರಾಟ್ ಸ್ವರೂಪವನ್ನು ಪಡೆದು ಸ್ವಾನುಕಂಪದಲ್ಲಿ ಮುಳುಗಿದ ಆಕೆ ಸಾಂತ್ವನಕ್ಕಾಗಿ ಹಾತೊರೆಯುವಂತಾಗಿತ್ತು.

ನೆನಪಿಲ್ಲದಿದ್ದರೆ, ಸಂಸ್ಕೃತಿಯಿಲ್ಲ. ನೆನಪಿಲ್ಲದಿದ್ದರೆ ನಾಗರಿಕತೆಯಿಲ್ಲ, ಸಮಾಜವೂ ಇಲ್ಲ, ಭವಿಷ್ಯವೂ ಶೂನ್ಯ. ಜನಾಂಗೀಯ ನೆನಪುಗಳು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಾಗಿಬರುವುದಾದರೂ ಈ ನೆನಪಿನ ಬಲದಿಂದಲೇ ಅಲ್ಲವೇ? ಚರಿತ್ರೆ ಎಂಬುದು ಕೇವಲ ಪುಸ್ತಕದಲ್ಲಿರುವುದು ಮಾತ್ರವಲ್ಲ. ಪುಸ್ತಕದಲ್ಲಿರುದೆಲ್ಲವೂ ನಿಜವಾದ ಚರಿತ್ರೆಯೂ ಅಲ್ಲ. ಜನಮನದ ನೆನಪಿನಲ್ಲಿ ಸಾರ್ವತ್ರಿಕವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹರಿದು ಬಂದಿರುವ ಸಾಮೂಹಿಕ ನೆನಪುಗಳೇ ಇತಿಹಾಸದ ಬಹು ಮುಖ್ಯ ರೂಪ. ನಮ್ಮ ತಂದೆ, ತಾಯಿ, ಅಜ್ಜ, ಅಜ್ಜಿ, ಚಿಕ್ಕಪ್ಪ, ದೊಡ್ಡಮ್ಮಂದಿರ ನೆನಪಿನ ಕತೆಗಳು ನಮ್ಮ ನೆನಪಿನೊಂದಿಗೆ ಸಮ್ಮಿಳಿತವಾಗಿ ನಮ್ಮ ಅಸ್ಮಿತೆಯನ್ನು ಬಲಪಡಿಸುತ್ತವೆ. ಕುಟುಂಬದ ಇಂಥ ಹಂಚಿಕೊಂಡ ನೆನಪುಗಳು ನಮ್ಮ ಮಾನಸಿಕ ನೆಲೆಯನ್ನು ಹರಿತಗೊಳಿಸುವುದಲ್ಲದೆ, ನಮ್ಮನ್ನೂ ನಮ್ಮ ಸುತ್ತಲಿನವರನ್ನೂ ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ. ಒಮ್ಮೆ ಶಿಕ್ಷಕರಾಗಿದ್ದ ನಮ್ಮ ಮಾವನವರ ಬಗ್ಗೆ ಮಾತನಾಡುತ್ತಿದ್ದೆವು. ಅವರ ಧಾರಾಳತನ, ಸರಳತೆ, ದಾಕ್ಷಿಣ್ಯಪರತೆ, ಮನೆಮಕ್ಕಳಿಗಿಂತ ಬೇರೆ ಮಕ್ಕಳ ಮೇಲೆ ಅವರಿಗಿದ್ದ ಪ್ರೀತಿ  ಇತ್ಯಾದಿಗಳ ಬಗ್ಗೆ ಹೇಳುತ್ತಿದ್ದರೆ, ಇದ್ದಕ್ಕಿದ್ದಂತೆ ಹೊಸದಾಗಿ ಮದುವೆಯಾದ ಮನೆಯ ಸೊಸೆ ಯೊಬ್ಬಳು, - ಈಗ ತನಗೆ ತನ್ನ ಗಂಡನನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತಿದೆ, - ಎಂದಳು!

ನಮ್ಮ ಎಷ್ಟೋ ನೆನಪುಗಳಿಗೆ ನಾವು ಸದಾ ಪ್ರತಿಕ್ರಿಯೆ ತೋರುತ್ತಾ ಇರುತ್ತೇವೆ. ಈ ಪ್ರತಿಕ್ರಿಯೆಗಳಿಂದಾಗಿ ಆ ನೆನಪುಗಳು ತಮ್ಮದೇ ಜೀವ ಪಡೆಯುತ್ತವೆ. ಹೀಗೆ ಜೀವಪಡೆದ ನೆನಪುಗಳೇ ಕತೆಗಳಾಗಿ ಪರಿವರ್ತನೆಗೊಳ್ಳುತ್ತವೆ  ಅವು ಬರಹದಲ್ಲಿ ಬರಲಿ, ಬಿಡಲಿ. ಈ ವರ್ಷ ಸಾಹಿತ್ಯದ ನೊಬೆಲ್ ಪಾರಿತೋಷಕ ಪಡೆದ ಕಾಝು ಇಶಿಗುರೊ ಒಂದು ಕಡೆ ಹೀಗೆ ಹೇಳುತ್ತಾನೆ: ಬದುಕನ್ನು ಸೋಸಿ ನೋಡುವ ಸ್ಮರಣಶಕ್ತಿಯಲ್ಲಿ ನನಗೆ ಆಸಕ್ತಿ. ಅದು ಮಬ್ಬಾಗಿ, ಅಸ್ಪಷ್ಟವಾಗಿರುವುದರಿಂದ ಆತ್ಮವಂಚನೆಗೆ ಅಲ್ಲಿ ಸಾಕಷ್ಟು ಅವಕಾಶವಿದೆ. ಕೊನೆಗೂ, ಲೇಖಕನಾಗಿ, - ನಿಜವಾಗಿ ಏನು ನಡೆದಿದೆ ಎನ್ನುವುದಕ್ಕಿಂತ, ಜನರು ಆ ಬಗ್ಗೆ ಏನು ಹೇಳುತ್ತಾರೆಂಬುದರ ಬಗ್ಗೆ ನನಗೆ ಹೆಚ್ಚು ಆಸಕ್ತಿ.

‘ಸಮಯ’ದ ಪರಿಮಿತಿ, ಪರಿಕಲ್ಪನೆಗಳ ಬಗ್ಗೆ ಮಾನವನಿಗೆ ಸದಾ ಕುತೂಹಲ. ವಿಜ್ಞಾನ ವೂ ಈ ದಿಸೆಯಲ್ಲಿ ಅನೇಕ ಪ್ರಶ್ನೆಗಳನ್ನು ಕೇಳುತ್ತ ಬಂದಿದೆ. ‘ಸಮಯ’ದಲ್ಲಿ ಹಿಂದೆ ಹೋಗುವ ಸಾಧ್ಯತೆಗಳ ಬಗ್ಗೆ ಅನೇಕ ಪ್ರಯೋಗಗಳನ್ನೂ ಕೈಕೊಂಡಿವೆ. ಈ ಕುರಿತು ಸ್ವಾರಸ್ಯಕರವಾದ ಹಲವು ಕಾದಂಬರಿಗಳೂ, ಚಲನಚಿತ್ರಗಳೂ ಬಂದಿವೆ. ಆದರೆ, ನೆನಪಿನ ದೋಣಿಯಲ್ಲಿ ಸಾಗುವುದೆಂದರೆ ಅದು ಯಾವ ‘ಸಮಯ ಪಯಣ’ಕ್ಕೂ ಕಮ್ಮಿಯಲ್ಲ. ಸೀಮಿತವಾದುದೇ ಆಗಿರಲಿ, ಇದೊಂದು ಭೂತಕಾಲದ ಪಯಣವಂತೂ ಹೌದೇ ಹೌದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News