ಗಾಂಧಿ ಮತ್ತು ಕೋಮುವಾದ

Update: 2017-11-03 12:01 GMT

''ನಾನೊಬ್ಬ ಸನಾತನಿ ಹಿಂದೂ'' ಎಂದು ಗಾಂಧೀಜಿಯವರು ಹೇಳಿಕೊಂಡರೂ ತಮ್ಮದೇ ಆದ ಮಾನವೀಯ ಮೌಲ್ಯಗಳ ಬೆಳಕಿನ ಮೂಲಕವೇ ಹಿಂದೂ ಧರ್ಮವನ್ನು ಗುರುತಿಸುತ್ತಾರೆ. ವಿಶಾಲ ಕಲ್ಪನೆಗೆ ಅವಕಾಶವಿಲ್ಲದ ಹಿಂದೂ ಧರ್ಮ, ಕೋಮುಭಾವನೆಗಳನ್ನು ಕೆರಳಿಸುವ ಹಿಂದೂ ಧರ್ಮ, ಜಾತೀಯತೆ ಮತ್ತು ಅಸ್ಪಶ್ಯತೆ ಆಚರಿಸುವ ಹಿಂದೂ ಧರ್ಮ ಮತ್ತು 'ಗರ್ವದಿಂದ ಹೇಳಿರಿ ನಾವು ಹಿಂದೂಗಳು ಎಂದು' ಹೇಳುವವರ ಹಿಂದೂ ಧರ್ಮ ಗಾಂಧೀಜಿಯವರ ಹಿಂದೂ ಧರ್ಮವಾಗಿರಲಿಲ್ಲ.

"ನೂಲುವುದನ್ನು ನಾನು ಖಂಡಿತವಾಗಿಯೂ ಧಾರ್ಮಿಕ ಪಂಥಗಳ ಆಚರಣೆಗಿಂತಲೂ ಉತ್ತಮ ವಾದುದೆಂದು ಪರಿಗಣಿಸಿದ್ದೇನೆ. ಆದರೆ ಇದರ ಅರ್ಥ ಈ ಆಚರಣೆಯನ್ನು ಬಿಟ್ಟುಬಿಡಬೇಕು ಎಂದಲ್ಲ. ಎಲ್ಲ ಧರ್ಮಗಳ ಅನುಯಾಯಿಗಳು ಅನುಸರಿಸಬೇಕಾಗಿರುವ ಧರ್ಮವು ಆ ಧರ್ಮಗಳನ್ನು ಮೀರುತ್ತದೆ ಎಂದಷ್ಟೇ ನನ್ನ ಮಾತಿನ ಅರ್ಥ. ಆದ್ದರಿಂದ ಸೇವಾಭಾವದಿಂದ ಚರಕ ತಿರುಗಿಸಿದರೆ ಬ್ರಾಹ್ಮಣ ಉತ್ತಮ ಬ್ರಾಹ್ಮಣನಾಗುತ್ತಾನೆ. ಮುಸಲ್ಮಾನ ಉತ್ತಮ ಮುಸಲ್ಮಾನನಾಗುತ್ತಾನೆ. ವೈಷ್ಣವ ಉತ್ತಮ ವೈಷ್ಣವನಾಗುತ್ತಾನೆ ಎಂದು ನಾನು ಹೇಳುತ್ತೇನೆ."

ನಾವು ಇಂದು ಅತ್ಯಂತ ಆತಂಕದ ಸ್ಥಿತಿಯಲಿದ್ದೇವೆ. ಮನುಷ್ಯನ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯ ಕುರಿತು ಮಾಡಬೇಕಾದ ಚಿಂತನೆಗೆ ಬೇಕಾದ ಸಮಯವನ್ನೆಲ್ಲಾ ಕೋಮುವಾದದ ವಿರುದ್ಧ ಹೋರಾಡಲು ಬಳಸುವ ಪರಿಸ್ಥಿತಿ ಬಂದೊದಗಿದೆ. ಸಮಾಜದಲ್ಲಿ ಕೋಮುಸೌಹಾರ್ದವು ಸಹಜವಾಗಿ ಇರುವಂಥ ವಾತಾವರಣವಿದ್ದಾಗ ಮಾತ್ರ ಮಾನವ ಅಭಿವೃದ್ಧಿಪಥದಲ್ಲಿ ಮುಂದುವರಿಯಲು ಸಾಧ್ಯ; ಇಲ್ಲದಿದ್ದರೆ ಜೀವಂತವಾಗಿ ಇರುವುದೊಂದೇ ಅವನ ಗುರಿಯಾಗುತ್ತದೆ. ಕೋಮುವಾದವು ಮನುಷ್ಯನ ಎಲ್ಲಾ ಒಳ್ಳೆಯತನದ ಮೇಲೆ ಕ್ಯಾಕರಿಸಿ ಉಗುಳುತ್ತದೆ. ಎಲ್ಲಾ ಸೂಕ್ಷ್ಮ ಭಾವನೆಗಳನ್ನು ಹಾಳು ಮಾಡುತ್ತದೆ. ಮನುಷ್ಯ ಮನುಷ್ಯನನ್ನು ಅರಿಯುವ ಸಂದರ್ಭದಲ್ಲಿ ಅಡ್ಡಗೋಡೆಯಾಗಿ ನಿಲ್ಲುತ್ತದೆ. ಈ ಸಂದರ್ಭದಲ್ಲಿ ಗಾಂಧೀಜಿಯವರು ಕೋಮುಸೌಹಾರ್ದಕ್ಕಾಗಿ ಮತ್ತು ಮನುಷ್ಯನ ಸದ್ಭಾವನೆಗಳನ್ನು ರಕ್ಷಿಸುವುದಕ್ಕಾಗಿ ಮಾಡಿದ ಪ್ರಯತ್ನಗಳು ನಮ್ಮ ದೇಶಕ್ಕೆ ದಾರಿದೀಪಗಳಾಗಿವೆ. ದೇಶ ಯಾವ ರೀತಿ ಮುಂದುವರಿಯಬೇಕೆಂಬುದನ್ನು ಸೂಚಿಸುತ್ತವೆ.

ಗಾಂಧೀಜಿಯವರು ಮಾನವೀಯತೆಗೆ ಬದ್ಧವಾಗಿದ್ದಂಥ ಒಬ್ಬ 'ಬಂಡುಕೋರ' ಸನಾತನವಾದಿಗಳಾಗಿದ್ದರು. ಅವರ ಸನಾತನವಾದವು ಪರಿಶುದ್ಧವಾಗಿದೆ; ಇಡೀ ಲೋಕದ ಹಿತವನ್ನು ಕಾಪಾಡುವಂಥದ್ದಾಗಿದೆ. ಅಂತೆಯೆ ಗಾಂಧೀಜಿಯವರು ವ್ಯಾಖ್ಯಾನಿಸುವ ಹಿಂದೂ ಧರ್ಮವು ಇಡೀ ವಿಶ್ವಕ್ಕೆ ಆದರ್ಶಪ್ರಾಯವಾಗಿದೆ. ಅವರ ಹಿಂದೂ ಧರ್ಮದಲ್ಲಿ ಕ್ರೈಸ್ತರು, ಮುಸ್ಲಿಮರು, ಬೌದ್ಧರು, ಹೀಗೆ ಎಲ್ಲರೂ ಮಾನವ ಘನತೆಯನ್ನು ಪಡೆಯುತ್ತಾರೆ. ಪರಿಶುದ್ಧವಾದ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರೈಸ್ತರು ಎಲ್ಲರೂ ಗಾಂಧೀಜಿಯವರ ಕಣ್ಣಲ್ಲಿ ಒಂದೇ ಆಗುತ್ತಾರೆ. ಹೀಗಾಗಿ ನಿಜವಾದ ಆಚರಣೆಯಲ್ಲಿ ಅವರಿಗೆ ಧರ್ಮಗಳ ಮಧ್ಯೆ ವ್ಯತ್ಯಾಸವೇ ಕಾಣುವುದಿಲ್ಲ. ಈ ಮನಸ್ಥಿತಿಯೇ ಕೋಮುವಾದವೆಂಬ ರೋಗಕ್ಕೆ ಮದ್ದಾಗಿದೆ.  ''ಮುಹಮ್ಮದ್, ಝರತುಷ್ಟ್ರ ಮತ್ತು ಮೂಸೆಸ್‌ರಿಗೆ ಇರುವಂತೆಯೇ ಏಸುವಿಗೂ ಹಿಂದೂ ಧರ್ಮದಲ್ಲಿ ಸಾಕಷ್ಟು ಸ್ಥಾನವಿದೆ. ವಿವಿಧ ಧರ್ಮಗಳು ನನಗೆ ಒಂದೇ ತೋಟದ ಸುಂದರ ಪುಷ್ಪಗಳು ಅಥವಾ ಅವು ಒಂದೇ ಮಹಾವೃಕ್ಷದ ಕೊಂಬೆಗಳು'' ಎಂದು ಗಾಂಧೀಜಿಯವರು ಹೇಳಿದ್ದು ಕೋಮುವಾದಕ್ಕೊಂದು ಪ್ರಬಲ ಉತ್ತರವಾಗಿದೆ. ಎಲ್ಲ ಮತಗಳು ಸತ್ಯ ಮಾತ್ರವಲ್ಲ ಸಮಾನ ಕೂಡ ಎಂದು ಗಾಂಧೀಜಿಯವರು ನಂಬಿದ್ದರು. ಎಲ್ಲಾ ಪ್ರವಾದಿಗಳು ಸಮಾನರು ಎಂದು ಅವರು ಹೇಳುತ್ತಿದ್ದರು. ಭಾರತದಂಥ ಬಹು ಸಾಂಸ್ಕೃತಿಕ ಮತ್ತು ಬಹು ಧಾರ್ಮಿಕ ದೇಶದಲ್ಲಿ ಗಾಂಧೀಜಿಯವರ ಸಂಯಮ ಮತ್ತು ಮನುಷ್ಯಪ್ರೇಮ ಮಾತ್ರ ಜನಸಮುದಾಯಕ್ಕೆ ಉದ್ವಿಗ್ನವಿಲ್ಲದ ವಾತಾವರಣವನ್ನು ಸೃಷ್ಟಿಸಬಲ್ಲುದು.

''ಹಿಂದೂ ಧರ್ಮ ಪಟ್ಟು ಬಿಡದ ಸತ್ಯಾನ್ವೇಷಣೆ'' ಎಂಬುದರಲ್ಲಿ ಅವರಿಗೆ ಅಚಲವಾದ ನಂಬಿಕೆ ಇತ್ತು. ಧರ್ಮಗ್ರಂಥವಾದ ಭಗವದ್ಗೀತೆ ಅವರಿಗೆ ಬಾಹ್ಯಪ್ರಪಂಚದ ಗ್ರಂಥವಾಗಿದ್ದಿಲ್ಲ. ಮನುಷ್ಯನ ಆಂತರಿಕ ಜಗತ್ತು ಮತ್ತು ಅಲ್ಲಿರುವ ಕುರುಕ್ಷೇತ್ರಕ್ಕೆ ಸಬಂಧಿಸಿದುದಾಗಿತ್ತು.  ''ದುರ್ಯೋಧನನ ಮತ್ತು ಅವನ ಪಕ್ಷದವರನ್ನು ನಾನು ಮಾನವನಲ್ಲಿರುವ ಅಧಮ ಪ್ರವೃತ್ತಿಗಳೆಂದೂ ಅರ್ಜುನ ಮತ್ತು ಅವನ ಪಕ್ಷದವರನ್ನು ಉತ್ತಮ ಪ್ರವೃತ್ತಿಗಳೆಂದೂ ಪರಿಗಣಿಸುತ್ತೇನೆ. ನಮ್ಮ ಸ್ವಂತ ದೇಹವೇ ಯುದ್ಧರಂಗ ಈ ಎರಡೂ ಪಕ್ಷಗಳಲ್ಲಿ ಶಾಶ್ವತವಾದ ಯುದ್ಧ ನಡೆಯುತ್ತಿದೆ. ಋಷಿಕವಿ ಅದನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾನೆ. ಶುದ್ಧ ಹೃದಯದಲ್ಲಿ ಸದಾ ಪಿಸುನುಡಿ ನುಡಿಯುತ್ತಿರುವ ಅಂತರ್ಯಾಮಿ ಕೃಷ್ಣ. ಗಡಿಯಾರದಂತೆ ಹೃದಯಕ್ಕೆ ಶುದ್ಧತೆಯ ಕೀಲು ಕೊಡುವುದು ಆವಶ್ಯಕ. ಇಲ್ಲದಿದ್ದರೆ ಅಂತರ್ಯಾಮಿ ಮಾತನಾಡುವುದನ್ನು ನಿಲ್ಲಿಸುತ್ತಾನೆ'' ಎಂದು ಗಾಂಧೀಜಿ ನಮಗೆ ಕಿವಿಮಾತು ಹೇಳಿದ್ದಾರೆ.  ''ನಾನೊಬ್ಬ ಸನಾತನಿ ಹಿಂದೂ'' ಎಂದು ಗಾಂಧೀಜಿಯವರು ಹೇಳಿಕೊಂಡರೂ ತಮ್ಮದೇ ಆದ ಮಾನವೀಯ ಮೌಲ್ಯಗಳ ಬೆಳಕಿನ ಮೂಲಕವೇ ಹಿಂದೂ ಧರ್ಮವನ್ನು ಗುರುತಿಸುತ್ತಾರೆ. ವಿಶಾಲ ಕಲ್ಪನೆಗೆ ಅವಕಾಶವಿಲ್ಲದ ಹಿಂದೂ ಧರ್ಮ, ಕೋಮುಭಾವನೆಗಳನ್ನು ಕೆರಳಿಸುವ ಹಿಂದೂ ಧರ್ಮ, ಜಾತೀಯತೆ ಮತ್ತು ಅಸ್ಪಶ್ಯತೆ ಆಚರಿಸುವ ಹಿಂದೂ ಧರ್ಮ ಮತ್ತು 'ಗರ್ವದಿಂದ ಹೇಳಿರಿ ನಾವು ಹಿಂದೂಗಳು ಎಂದು' ಹೇಳುವವರ ಹಿಂದೂ ಧರ್ಮ ಗಾಂಧೀಜಿಯವರ ಹಿಂದೂ ಧರ್ಮವಾಗಿರಲಿಲ್ಲ.  ''ಆನುವಂಶಿಕತೆಯ ಪ್ರಭಾವದಲ್ಲಿ ನನಗೆ ನಂಬಿಕೆ ಇರುವುದರಿಂದ ಮತ್ತು ಹಿಂದೂ ಕುಟುಂಬವೊಂದರಲ್ಲಿ ಹುಟ್ಟಿರುವುದರಿಂದ ನಾನು ಒಬ್ಬ ಹಿಂದೂ ಆಗಿ ಉಳಿದಿದ್ದೇನೆ. ನನ್ನ ನೈತಿಕ ಪ್ರಜ್ಞೆಗೆ ಅಥವಾ ಆಧ್ಯಾತ್ಮಿಕ ಬೆಳವಣಿಗೆಗೆ ಅದು ಅಸಂಗತವೆಂದು ಕಂಡುಬಂದಲ್ಲಿ ನಾನು ಅದನ್ನು (ಹಿಂದೂಧರ್ಮವನ್ನು) ತ್ಯಜಿಸುತ್ತೇನೆ'' ಎಂದು ಗಾಂಧೀಜಿಯವರು ಪ್ರಕಟಿಸಿದ್ದಾರೆ.  ಸತ್ಯ, ಪ್ರೇಮ ಮತ್ತು ಅಹಿಂಸೆಗಳು ಅವರು ಪ್ರತಿಪಾದಿಸುತ್ತಿದ್ದ ಹಿಂದೂಧರ್ಮದ ಮೂಲಾಧಾರಗಳಾಗಿವೆ. ಆ ಮೂಲಕವೇ ಅವರು ಎಲ್ಲ ಧರ್ಮಗಳನ್ನು ನೋಡುತ್ತಿದ್ದರು ಮತ್ತು ಗೌರವಿಸುತ್ತಿದ್ದರು. ''ಅಹಿಂಸೆ ಎಲ್ಲ ಧರ್ಮಗಳಿಗೂ ಸಮಾನವಾಗಿದೆ. ಹಿಂದೂ ಧರ್ಮವು ಕೇವಲ ಮಾನವ ಜೀವನದ ಏಕತೆಯಲ್ಲಿ ಮಾತ್ರ ನಂಬಿಕೆ ಇಡದೆ, ಜೀವಂತವಾಗಿ ಇರುವ ಎಲ್ಲದರ ಏಕತೆಯಲ್ಲಿ ನಂಬಿಕೆ ಇಡುತ್ತದೆ'' ಎಂದು ಗಾಂಧೀಜಿ ಹೇಳಿದ್ದಾರೆ. ಈ ಹೇಳಿಕೆಯಲ್ಲಿ ಬದುಕಿನ ಒಳ್ಳೆಯದೆಲ್ಲವನ್ನು ಗೌರವಿಸುವ ಮನೋಭಾವವಿದೆ. ಇಂಥ ಮನಸ್ಥಿತಿಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಎಂಬ ಭೇದಭಾವ ಎಂದಿಗೂ ಬಾರದು. ಕೋಮುಭಾವನೆ ಎಂದೂ ಕೆರಳದು. ಇಂಥ ಮನಸ್ಥಿತಿಯಲ್ಲಿ ಮಾತ್ರ ಇಡೀ ಮಾನವಕುಲವನ್ನು ಮತ್ತು ಎಲ್ಲಾ ಜೀವರಾಶಿಗಳನ್ನು ಅಂತಃಕರಣದಿಂದ ನೋಡಲು ಸಾಧ್ಯ. ಎಲ್ಲ ಒಳ್ಳೆಯದರ ಬಗ್ಗೆ ಗೌರವ ಮೂಡಲು ಸಾಧ್ಯ. ''ವೇದಗಳು ಮಾತ್ರವೇ ದೈವೀಕವಾದವು ಎಂಬುದನ್ನು ನಾನು ನಂಬುವುದಿಲ್ಲ. ಬೈಬಲ್, ಕುರ್‌ಆನ್ ಮತ್ತು ಜಿಂದಾ ಅವೆಸ್ತಾ ಸಹ ವೇದಗಳಷ್ಟೇ ದೈವೀಕವಾಗಿ ಪ್ರೇರಿತವಾದುವು ಎಂಬುದು ನನ್ನ ನಂಬಿಕೆ'' ಎಂದು ಗಾಂಧೀಜಿಯವರು ಹೇಳುವಾಗ ಕೋಮುವಾದ ಬೇರುಸಹಿತ ಕಿತ್ತಿಹೋಗುತ್ತದೆ.

ಚರಕಧರ್ಮ:

ಕಾಯಕ ಮತ್ತು ಧರ್ಮವನ್ನು ಅಭೇದ್ಯವಾಗಿ ನೋಡುವ ಗಾಂಧೀಜಿಯವರ ಕ್ರಮವು 12ನೆ ಶತಮಾನದ ಶರಣರನ್ನು ನೆನಪಿಗೆ ತರುತ್ತದೆ. ಚರಕವು ಅವರಿಗೆ ಉತ್ಪಾದನೆಯ ಒಂದು ಮಹತ್ವದ ಸಾಧನವಾಗಿತ್ತು. ಬ್ರಿಟಿಷರ ಜವಳಿ ಗಿರಣಿಗಳನ್ನು ಬಂದ್ ಮಾಡುವ ಶಕ್ತಿ ಅದಕ್ಕಿತ್ತು. ಆ ಮೂಲಕ ಭಾರತೀಯರ ಶೋಷಣೆ ಕಡಿಮೆಗೊಳಿಸುವಲ್ಲಿ ಮತ್ತು ಸ್ವಾತಂತ್ರದ ಪ್ರಜ್ಞೆಯನ್ನು ಬೆಳೆಸುವಲ್ಲಿ ಚರಕವು ಮಹತ್ತರ ಪಾತ್ರವನ್ನು ವಹಿಸಿದೆ. ಆದರೆ ಗಾಂಧೀಜಿಯವರಿಗೆ ಚರಕವೆಂಬುದು ಧರ್ಮವಾಗಿತ್ತು. ಎಲ್ಲ ಧರ್ಮಗಳನ್ನು ಒಂದುಗೂಡಿಸುವ ಸಾಧನವಾಗಿತ್ತು; ಕಾಯಕದ ಪಾವಿತ್ರದ ಸಂಕೇತವಾಗಿತ್ತು; ಸಾಮ್ರಾಜ್ಯಶಾಹಿಯನ್ನು ವಿರೋಧಿಸುವ ಅಸ್ತ್ರವಾಗಿತ್ತು; ಸತ್ಯಾಗ್ರಹವಾಗಿತ್ತು; ಸ್ವಾತಂತ್ರದ ಪಥವಾಗಿತ್ತು; ಆತ್ಮಗೌರವ ಮತ್ತು ರಾಷ್ಟ್ರಗೌರವದ ಸಂಕೇತವಾಗಿತ್ತು; ಮನುಷ್ಯರನ್ನು ನಿಜಮನುಷ್ಯರನ್ನಾಗಿ ಮಾಡುವ ಮಂತ್ರದಂಡವಾಗಿತ್ತು. ಅಂತೆಯೆ ಗಾಂಧೀಜಿಯವರು ಹೀಗೆ ಹೇಳಿದರು.

''ನಾನು ಎಲ್ಲೆಲ್ಲಿಯೂ ಚರಕವನ್ನು ನೋಡಲು ಇಚ್ಛಿಸುತ್ತೇನೆ; ಏಕೆಂದರೆ ನಾನು ಎಲ್ಲೆಲ್ಲಿಯೂ ದಿವಾಳಿತನವನ್ನು ನೋಡುತ್ತಿದ್ದೇನೆ. ಅಸ್ಥಿಪಂಜರಗಳಂತಿರುವ ಭಾರತದ ಜನರಿಗೆ ಉಣಲು ಮತ್ತು ಹೊದೆಯಲು ದೊರೆಯಬೇಕು. ಅಲ್ಲಿಯವರೆಗೆ ಅವರಿಗೆ ಧರ್ಮದ ಅರ್ಥವಿಲ್ಲ. ಇಂದು ಅವರು ಪಶುಗಳಂತೆ ಬಾಳುತ್ತಿರುವುದಕ್ಕೆ ನಾವು ಜವಾಬ್ದಾರರಾಗಿದ್ದೇವೆ. ಆದ್ದರಿಂದ ಚರಕ ನಮಗೊಂದು ಪ್ರಾಯಶ್ಚಿತ್ತ. ಅಸಹಾಯಕರ ಸೇವೆಯೇ ಧರ್ಮ. ದೇವರು ಆ ಸಹಾಯಕರ ಮತ್ತು ದುಃಖಾರ್ಥರ ರೂಪದಲ್ಲಿ ನಮಗೆ ಕಾಣುತ್ತಾನೆ. ಆದರೆ ನಾವು ಹಣೆಯ ಮೇಲೆ ಲಾಂಛನಗಳನ್ನು ಧರಿಸಿದ್ದರೂ ಅವನನ್ನು ಎಂದರೆ ದೇವರನ್ನು ಗಮನಿಸುವುದಿಲ್ಲ. ದೇವರು ವೇದಗಳಲ್ಲಿ ಇದ್ದಾನೆ ಹಾಗೂ ಇಲ್ಲ. ವೇದಗಳ ಭಾವವನ್ನು ಗ್ರಹಿಸುವವನು ಅವುಗಳಲ್ಲಿ ದೇವರನ್ನು ಕಾಣುತ್ತಾನೆ. ವೇದಗಳ ಅಕ್ಷರಕ್ಕೆ ಜೋತುಬೀಳುವವನು ಒಬ್ಬ ವೇದೀಯ, ಒಬ್ಬ ಅಕ್ಷರನಿಷ್ಠ.  ವೇದಗಳ ಬರಿಯ ಜ್ಞಾನ ನಮ್ಮ ಬ್ರಾಹ್ಮಣರನ್ನು ಆಧ್ಯಾತ್ಮಿಕ ಗುರುಗಳನ್ನಾಗಿ ಮಾಡಲಾರದು. ಹಾಗೆ ಮಾಡಿದಲ್ಲಿ ಮ್ಯಾಕ್ಸ್ ಮುಲ್ಲರ್ ಒಬ್ಬ ಬ್ರಾಹ್ಮಣನಾಗುತ್ತಿದ್ದ. ಇಂದಿನ ಧರ್ಮವನ್ನು ಅರ್ಥ ಮಾಡಿಕೊಂಡಿರುವ ಬ್ರಾಹ್ಮಣನು ಖಂಡಿತವಾಗಿಯೂ ವೇದಾಧ್ಯಯನಕ್ಕೆ ಎರಡನೇ ಸ್ಥಾನ ಕೊಡುತ್ತಾನೆ. ಚರಕದ ಧರ್ಮವನ್ನು ಪ್ರಸಾರ ಮಾಡುತ್ತಾನೆ ಮತ್ತು ಉಪವಾಸದಿಂದಿರುವ ತನ್ನ ಲಕ್ಷಾಂತರ ದೇಶಬಾಂಧವರ ಹಸಿವನ್ನು ಇಂಗಿಸುತ್ತಾನೆ.

ನೂಲುವುದನ್ನು ನಾನು ಖಂಡಿತವಾಗಿಯೂ ಧಾರ್ಮಿಕ ಪಂಥಗಳ ಆಚರಣೆಗಿಂತಲೂ ಉತ್ತಮವಾದುದೆಂದು ಪರಿಗಣಿಸಿದ್ದೇನೆ. ಆದರೆ ಇದರ ಅರ್ಥ ಈ ಆಚರಣೆಯನ್ನು ಬಿಟ್ಟುಬಿಡಬೇಕು ಎಂದಲ್ಲ. ಎಲ್ಲ ಧರ್ಮಗಳ ಅನುಯಾಯಿಗಳು ಅನುಸರಿಸಬೇಕಾಗಿರುವ ಧರ್ಮವು ಆ ಧರ್ಮಗಳನ್ನು ಮೀರುತ್ತದೆ ಎಂದಷ್ಟೇ ನನ್ನ ಮಾತಿನ ಅರ್ಥ. ಆದ್ದರಿಂದ ಸೇವಾಭಾವದಿಂದ ಚರಕ ತಿರುಗಿಸಿದರೆ ಬ್ರಾಹ್ಮಣ ಉತ್ತಮ ಬ್ರಾಹ್ಮಣನಾಗುತ್ತಾನೆ. ಮುಸಲ್ಮಾನ ಉತ್ತಮ ಮುಸಲ್ಮಾನನಾಗುತ್ತಾನೆ. ವೈಷ್ಣವ ಉತ್ತಮ ವೈಷ್ಣವನಾಗುತ್ತಾನೆ ಎಂದು ನಾನು ಹೇಳುತ್ತೇನೆ.  ನಾನು ಹಾಸಿಗೆಯಲ್ಲಿ ಮಲಗಿರುವಾಗ ಚರಕ ತಿರುಗಿಸುವುದು ನನಗೆ ಸಾಧ್ಯವಾದಲ್ಲಿ ಮತ್ತು ಅದು ದೇವರ ಮೇಲೆ ನನ್ನ ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಎಂದು ನನಗೆ ಅನಿಸಿದ್ದಲ್ಲಿ, ನಾನು ಖಂಡಿತವಾಗಿಯೂ ಜಪಸರವನ್ನು ಬದಿಗಿಟ್ಟು ಚರಕ ತಿರುಗಿಸುತ್ತೇನೆ. ಚರಕ ತಿರುಗಿಸಲು ನನಗೆ ಶಕ್ತಿಯಿದ್ದು, ಮಣಿಗಳನ್ನು ಎಣಿಸುವುದು ಅಥವಾ ಚರಕ ತಿರುಗಿಸುವುದು ಇವುಗಳ ನಡುವೆ ಆಯ್ಕೆ ಮಾಡಬೇಕಾದಲ್ಲಿ ನಾನು ಬಡತನ ಹಾಗೂ ಉಪವಾಸ ದೇಶವನ್ನು ಗುಪ್ತವಾಗಿ ಬೆನ್ನಟ್ಟಿರುವುದನ್ನು ಕಾಣುತ್ತಿರುವವರೆಗೆ ಖಂಡಿತವಾಗಿಯೂ ಚರಕದ ಪರವಾಗಿ ತೀರ್ಮಾನಿಸುತ್ತೇನೆ ಮತ್ತು ಅದನ್ನೇ ನಾನು ನನ್ನ ಜಪಸರವನ್ನಾಗಿ ಮಾಡಿಕೊಳ್ಳುತ್ತೇನೆ. ರಾಮನಾಮದ ಜಪ ಕೂಡ ಒಂದು ಅಡ್ಡಿಯಾಗುವಂಥ ಕಾಲವನ್ನು ನಾನು ಎದುರು ನೊಡುತ್ತೇನೆ. ರಾಮನು ಮಾತಿಗೂ ಮೀರಿದವನೆಂದು ನಾನು ಅರಿತಾಗ ಆ ಹೆಸರನ್ನು ಜಪ ಮಾಡುವ ಅಗತ್ಯ ನನಗೆ ಇರುವುದಿಲ್ಲ. ಚರಕ, ಜಪಸರ ಮತ್ತು ರಾಮನಾಮ ನನಗೆ ಎಲ್ಲವೂ ಒಂದೇ ಗುರಿಗೆ ಸಾಧಕವಾಗಿದೆ. ಅವು ನನಗೆ ಸೇವಾಧರ್ಮವನ್ನು ಬೋಧಿಸುತ್ತವೆ. ಸೇವಾಧರ್ಮವನ್ನು ಆಚರಿಸದೆ ನಾನು ಅಹಿಂಸೆಯನ್ನು ಪಾಲಿಸಲಾರೆ. ಅಹಿಂಸಾ ಧರ್ಮವನ್ನು ಆಚರಿಸದೆ ನಾನು ಸತ್ಯವನ್ನು ಕಾಣಲಾರೆ. ಸತ್ಯಕ್ಕಿಂತ ಬೇರೆ ಧರ್ಮವಿಲ್ಲ. ಸತ್ಯವೇ ರಾಮ, ನಾರಾಯಣ, ಈಶ್ವರ, ಖುದಾ, ಅಲ್ಲಾ, ಗಾಡ್''.

ಗಾಂಧೀಜಿಯವರ ಇಂಥ ಆಲೋಚನಾಕ್ರಮಗಳಿಂದಾಗಿಯೇ ಹಿಂದೂ ಧರ್ಮಕ್ಕೆ ಒಂದು ಹೊಸರೂಪ ಬಂದಿತು. ಆದರೆ ದುರ್ದೈವದ ಸಂಗತಿ ಎಂದರೆ ವಿಶ್ವಮಾನ್ಯವಾದ ಗಾಂಧೀಜಿಯವರ ಮನೋಲೋಕದ ಈ ಹಿಂದೂ ಧರ್ಮದ ಬಗ್ಗೆ ಭಾರತೀಯ ಅಕ್ಷರಸ್ಥರು ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಾಗಿ ಗಾಂಧೀಜಿಯವರನ್ನು ಕೊಲೆ ಮಾಡಿದ ನಾಥೂರಾಂ ಗೋಡ್ಸೆಯಂಥವರ ಪರಿಕಲ್ಪನೆಯ ಹಿಂದೂ ಧರ್ಮವೇ ಇಂದಿನ ಸಂದರ್ಭದಲ್ಲಿ ಪ್ರಾಧಾನ್ಯ ಪಡೆಯುತ್ತಿದೆ.  ''ಹಿಂದೂ ಧರ್ಮದ ಸ್ವಾರಸ್ಯ ಅದರ ವ್ಯಾಪಕವಾದ ಸರ್ವಗ್ರಾಹಿತ್ವದಲ್ಲಿ ಅಡಗಿದೆ. ಪ್ರತಿಯೊಬ್ಬನು ತನ್ನ ಸ್ವಂತ ಮತ ಅಥವಾ ಧರ್ಮಕ್ಕೆ ಅನುಸಾರವಾಗಿ ದೇವರನ್ನು ಪೂಜಿಸುವಂತೆ ಹಿಂದೂ ಧರ್ಮ ಹೇಳುತ್ತದೆ. ಆದ್ದರಿಂದ ಅದು ಎಲ್ಲಾ ಧರ್ಮಗಳ ಜೊತೆ ಶಾಂತಿ ಸ್ನೇಹದಿಂದ ಬಾಳುತ್ತದೆ. ಅಧಿಕೃತ ಸಿದ್ಧಾಂತದಿಂದ ಮುಕ್ತವಾಗಿರುವ ಅದು ನನಗೆ ಹಿಡಿಸುತ್ತದೆ'' ಎಂದು ಗಾಂಧೀಜಿಯವರು ಹೇಳಿದ್ದು ಸರ್ವ ಕಾಲಕ್ಕೂ ಪ್ರಸ್ತುತವಾಗಿದೆ.

''ಧರ್ಮದ ಹೆಸರಿನಲ್ಲಿ ನಾವು ಹಿಂದೂಗಳು ಬಾಹ್ಯಾಚರಣೆಗಳನ್ನು ಅಂಧಶ್ರದ್ಧೆಯ ಒಂದು ವಿಷಯವನ್ನಾಗಿ ಮಾಡಿದ್ದೇವೆ ಮತ್ತು ಧರ್ಮಗಳನ್ನು ಕೇವಲ ತಿನ್ನುವ, ಕುಡಿಯುವ ವಿಷಯವನ್ನಾಗಿ ಅದನ್ನು ಕೆಳದರ್ಜೆಗೆ ಇಳಿಸಿದ್ದೇವೆ'' ಎಂದು ಗಾಂಧೀಜಿಯವರು ವಿಷಾದಿಸಿದ್ದಾರೆ. ಈ ವಿಷಾದ ನಮಗೆ ಅರ್ಥವಾಗದ್ದರಿಂದ ನಮ್ಮ ಸಮಾಜದಲ್ಲಿ ಗ್ರಾಹಂ ಸ್ಟೇನ್ಸ್‌ರಂಥ ಮಾನವತಾವಾದಿಗಳನ್ನು ಜೀವಂತ ಸುಡುವ ದಾರಾಸಿಂಗ್‌ಗಳು ಹುಟ್ಟುತ್ತಿದ್ದಾರೆ.

''ನಿಜವಾದ ಶುದ್ಧ ಚಳವಳಿಯು ಪ್ರತಿಯೊಬ್ಬನು ತನ್ನ ಸ್ವಂತ ಧರ್ಮದಲ್ಲಿ ಪರಿಪೂರ್ಣತೆ ತಲುಪಲು ಮಾಡುವ ಪ್ರಯತ್ನವನ್ನು ಒಳಗೊಂಡಿರಬೇಕು. ಅಂಥ ಯೋಜನೆಯಲ್ಲಿ ಚಾರಿತ್ರವು ಏಕಮಾತ್ರ ಪರೀಕ್ಷಾ ಸಾಧನವಾಗುತ್ತದೆ'' ಎಂದು ಗಾಂಧೀಜಿಯವರು ಹೇಳಿದ್ದು ದಾರಾಸಿಂಗ್ ಅಂಥವರನ್ನು ಸೃಷ್ಟಿಸಿದವರಿಗೆ ಅರ್ಥವಾಗುವುದೇ?

''ಹಿಂದೂ ಧರ್ಮ ಮತ್ತು ಇತರ ಎಲ್ಲ ಧರ್ಮಗಳನ್ನೂ ತಕ್ಕಡಿಯಲ್ಲಿ ತೂಗಲಾಗುತ್ತಿದೆ. ಶಾಶ್ವತ ಸತ್ಯ ಒಂದೇ. ದೇವರು ಒಬ್ಬನೇ. ನಮ್ಮಲ್ಲಿ ಪ್ರತಿಯೊಬ್ಬರೂ ಪರಸ್ಪರ ಘರ್ಷಣೆಯಲ್ಲಿರುವ ಮತಗಳು ಮತ್ತು ಆಚಾರಗಳಿಂದ ದೂರ ಸರಿದು, ಸತ್ಯದ ನೇರ ಮಾರ್ಗ ಅನುಸರಿಸೋಣ. ಆಗ ಮಾತ್ರವೇ ನಾವು ನಿಜವಾದ ಹಿಂದೂಗಳು ಆಗುತ್ತೇವೆ. ತಮ್ಮನ್ನು ಸನಾತನಿಗಳೆಂದು ಕರೆದುಕೊಳ್ಳುತ್ತ ಅನೇಕ ಜನ ಭೂಮಿಯ ಮೇಲೆ ಓಡಾಡುತ್ತಿದ್ದಾರೆ. ಅವರಲ್ಲಿ ಎಷ್ಟು ಜನರನ್ನು ದೇವರು ಆಯ್ದುಕೊಳ್ಳುತ್ತಾನೆ ಎನ್ನುವುದನ್ನು ಯಾರು ಬಲ್ಲರು? ದೇವರ ಅನುಗ್ರಹವು ಅವನ ಸಂಕಲ್ಪವನ್ನು ನೆರವೇರಿಸಿ, ಅವನ ಸೇವೆ ಮಾಡುವವರಿಗೆ ದೊರೆಯುತ್ತದೆ, ಸುಮ್ಮನೆ ರಾಮ ರಾಮ ಎಂದು ವಟಗುಟ್ಟುವವರಿಗಲ್ಲ'' ಎಂದು ಗಾಂಧೀಜಿಯವರು ಹೇಳಿದ್ದು ಬಾಬರಿ ಮಸೀದಿಯನ್ನು ಕೆಡವಿದವರಿಗೆ ಅರ್ಥವಾಗುವುದೇ?  ''ಹಿಂದೂ ಧರ್ಮದ ಅತ್ಯಂತ ಪರಿಶುದ್ಧ ರೂಪದಲ್ಲಿ ಒಬ್ಬ ಬ್ರಾಹ್ಮಣ, ಒಂದು ಇರುವೆ, ಒಂದು ಆನೆ ಮತ್ತು ಒಬ್ಬ ಶ್ವಪಚ ಸಮಾನ ಸ್ಥಾನ ಹೊಂದಿರುತ್ತಾರೆ... ಹಿಂದೂ ಧರ್ಮವು ಇಡೀ ಮಾನವಕುಲಕ್ಕೆ ಮಾತ್ರ ಸೀಮಿತವಾದುದಲ್ಲ; ಜೀವಂತವಾಗಿರುವ ಎಲ್ಲದರ ಭ್ರಾತೃತ್ವ ವನ್ನು ಅದು ಒತ್ತಿ ಹೇಳುತ್ತದೆ. ಮನುಷ್ಯ ಮನುಷ್ಯನ ನಡುವೆ ನಾವು ನಿಜ ವಾದ, ಜೀವಂತವಾದ ಸಮಾನತೆಯನ್ನು ಪುನಃಸ್ಥಾಪಿಸಿದ ಕ್ಷಣವೇ ಮಾನವನ ಮತ್ತು ಇಡೀ ಸೃಷ್ಟಿಯ ನಡುವೆ ಸಮಾನತೆಯನ್ನು ಸ್ಥಾಪಿಸಲು ನಾವು ಶಕ್ತರಾಗುತ್ತೇವೆ. ಆ ದಿನ ಬಂದಾಗ ನಾವು ಭೂಮಿಯ ಮೇಲೆ ಶಾಂತಿಯನ್ನು ಮತ್ತು ಮನುಷ್ಯರ ಬಗ್ಗೆ ಸದ್ಭಾವನೆಯನ್ನು ಹೊಂದುತ್ತೇವೆ'' ಎಂದು ಗಾಂಧೀಜಿಯವರು ಹೇಳಿದ್ದನ್ನು ನಾವು ಮನನ ಮಾಡಬೇಕಿದೆ.

''ಪ್ರಭುವಾದ ದೇವರು ಈ ವಿಶ್ವದಲ್ಲಿರುವ ಎಲ್ಲ ಕಡೆ ವ್ಯಾಪಿಸಿದ್ದಾನೆ. ಆದ್ದರಿಂದ ತ್ಯಾಗಿಗಳಾಗಿ ಮತ್ತು ಎಲ್ಲವನ್ನೂ ಅವನಿಗೆ ಸಮರ್ಪಿಸಿ. ಆನಂತರ ನಿಮ್ಮ ಪಾಲಿಗೆ ಬರಬಹುದಾದುದನ್ನು ಪಡೆಯಿರಿ. ಯಾರದೇ ಆಸ್ತಿಗೆ ಆಸೆ ಪಡಬೇಡಿ. - ಈಶೋಪನಿಷತ್ತಿನ ಈ ಒಂದು ಮಂತ್ರವನ್ನು ನೆನಪಿಡಿ. ಇತರ ಧರ್ಮಗ್ರಂಥಗಳ ವಿಷಯವನ್ನು ಪೂರ್ತಿ ಮರೆತುಬಿಡಿ. ಧರ್ಮಗ್ರಂಥಗಳ ಸಾಗರದಲ್ಲಿ ನೀವು ಮುಳುಗಿ ಉಸಿರುಗಟ್ಟಬಹುದು. ವಿನಯವಂತರಾಗಿ ವಿವೇಕಿಗಳಾಗಿದ್ದಲ್ಲಿ ಅವು ಪಂಡಿತರಿಗೆ ಒಳ್ಳೆಯವೇ. ಆದರೆ ಸಾಮಾನ್ಯ ಮನುಷ್ಯನಿಗೆ ಸಾಗರವನ್ನು ದಾಟಲು ಈ ಮಂತ್ರವನ್ನು ಬಿಟ್ಟು ಬೇರಾವುದರ ಅಗತ್ಯವಿಲ್ಲ'' ಎಂದು ಗಾಂಧೀಜಿಯವರು ತಮ್ಮ ಪರಿಕಲ್ಪನೆಯ ಹಿಂದೂ ಧರ್ಮವನ್ನು ಮೇಲಿನ ಈಶೋಪನಿಷತ್ತಿನ ಒಂದು ಮಂತ್ರದಲ್ಲಿ ಹಿಡಿದಿಟ್ಟರು. ಆ ಮೂಲಕ ತಮ್ಮ ಕಾಲದ ಹಿಂದೂ ಧರ್ಮದ ಆಚರಣೆಯನ್ನು ಪರಿಶೀಲಿಸಿದರು. ''ಇಂದು ನಾವು ನೋಡುವುದು ಶುದ್ಧವಾದ ಹಿಂದೂ ಧರ್ಮವನ್ನಲ್ಲ, ಅದರ ವಿಕಟಾನುಕರಣೆಯನ್ನು ಮಾತ್ರ'' ಎಂದು ನಿಟ್ಟುಸಿರು ಬಿಟ್ಟರು.

ಗಾಂಧೀಜಿಯವರ ಈ ನಿಟ್ಟುಸಿರಿನಲ್ಲಿ ಅಡಗಿರುವ ಹಿಂದೂ ಧರ್ಮ ಪ್ರತಿ ಮನುಷ್ಯ ನೊಳಗಿನ ಧರ್ಮವಾಗಲಿ. ಆ ಮೂಲಕ ಎಲ್ಲ ಧರ್ಮಗಳು ಒಂದೇ ಎಂಬುದು ಜನಸಮು ದಾಯಕ್ಕೆ ಅರಿವಾಗಲಿ. ಕೋಮುವಾದ ಅಳಿಯಲಿ, ಮಾನವೀಯತೆ ಉಳಿಯಲಿ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News