​ಟೆಕ್ಸಸ್ ಚರ್ಚ್‌ನಲ್ಲಿ ದಾಳಿ: 26 ಮಂದಿ ಬಲಿ

Update: 2017-11-06 04:05 GMT

ಟೆಕ್ಸಸ್, ನ. 6: ಇಲ್ಲಿನ ಚರ್ಚ್ ಒಂದರಲ್ಲಿ ರವಿವಾರ ಅಪರಿಚಿತ ವ್ಯಕ್ತಿಯೊಬ್ಬ ರೈಫಲ್‌ನಿಂದ ಬೇಕಾಬಿಟ್ಟಿ ಗುಂಡು ಹಾರಿಸಿದ ಪರಿಣಾಮ 26 ಮಂದಿ ಮೃತಪಟ್ಟಿದ್ದಾರೆ. ಇತರ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭೀಕರ ಸಾಮೂಹಿಕ ಹತ್ಯೆ ಎಂದು ಗವರ್ನರ್ ಬಣ್ಣಿಸಿದ್ದಾರೆ.

ದಾಳಿಕೋರ ಡೆವಿನ್ ಪಿ.ಕೆಲ್ಲಿ ಈ ಹಿಂದೆ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದ ಹಾಗೂ ನ್ಯೂಮೆಕ್ಸಿಕೋದಲ್ಲಿ ವಾಸವಿದ್ದ ಎಂದು ಅಮೆರಿಕದ ಸೇನಾ ಅಧಿಕಾರಿಗಳು ಹೇಳಿದ್ದಾರೆ.

ನ್ಯೂಮೆಕ್ಸಿಕೋದ ಹೊಲೋಮನ್ ವಾಯುನೆಲೆಯ ಲಾಜಿಸ್ಟಿಕ್ ರೆಡಿಲಿನೆಸ್ ವಿಭಾಗದಲ್ಲಿ 2010ರವರೆಗೂ ಸೇವೆಯಲ್ಲಿದ್ದ ಎಂದು ಮೂಲಗಳು ಖಚಿತಪಡಿಸಿವೆ.
ಆದರೆ ಈತ ಯಾವುದೇ ಭಯೋತ್ಪಾದಕ ಗುಂಪುಗಳ ಜತೆ ಸಂಬಂಧ ಹೊಂದಿರುವ ಸಾಧ್ಯತೆ ಇಲ್ಲ. ಸ್ಯಾನ್ ಆಂಟೊನಿಯೊದಲ್ಲಿ ಈತ ವಾಸಿಸುತ್ತಿದ್ದ. ರವಿವಾರ ದಾಳಿ ಮಾಡುವ ಮುನ್ನ ಯಾವುದಾದರೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆಯೇ ಎನ್ನುವುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದರೆ. ಎಆರ್-15 ಅರೆ ಸ್ವಯಂಚಾಲಿತ ರೈಫಲ್‌ನಿಂದ ದಾಳಿ ಮಾಡಿದ್ದಾರೆ ಎನ್ನಲಾಗಿದೆ.

ಚರ್ಚ್ ಆವರಣಕ್ಕೆ ಬಂದ ಆರೋಪಿ, ಎಆರ್ ರೈಫಲ್‌ನಿಂದ ಬೇಕಾಬಿಟ್ಟಿ ಗುಂಡು ಹಾರಿಸುತ್ತಲೇ ಇದ್ದ. ಶಸ್ತ್ರಸಜ್ಜಿತ ನಾಗರಿಕರು ಆತನನ್ನು ಬೆನ್ನಟ್ಟಿದರು. ಸ್ವಲ್ಪಸಮಯದ ಬಳಿಕ ಆತನ ಮೃತದೇಹ ಆತನ ವಾಹನದಲ್ಲಿ ಕಂಡುಬಂದಿದೆ. ವಾಹನದಲ್ಲಿ ಮತ್ತಷ್ಟು ಶಸ್ತ್ರಾಸ್ತ್ರಗಳಿದ್ದವು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News