ಮೋದಿಯ ರೈತರ ಆದಾಯ ದ್ವಿಗುಣ ಭರವಸೆ 'ಮತ್ತೊಂದು ಜುಮ್ಲಾ': ಮನಮೋಹನ್ ಸಿಂಗ್

Update: 2017-11-08 08:06 GMT

ಅಹ್ಮದಾಬಾದ್,ನ.8 : ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಆಶ್ವಾಸನೆಯನ್ನು ವ್ಯಂಗ್ಯವಾಡಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈ ಆಶ್ವಾಸನೆ ಕೂಡ ಇನ್ನೊಂದು ಚುನಾವಣಾ 'ಜುಮ್ಲಾ' ಆಗಿ ಅಂತ್ಯಗೊಳ್ಳಬಹುದು ಎಂದಿದ್ದಾರೆ. ಸರಕಾರಕ್ಕೆ ತನ್ನ ಆಶ್ವಾಸನೆ ಈಡೇರಿಸಲು ಯಾವುದೇ ನಿರ್ದಿಷ್ಟ ಯೋಜನೆಯಿಲ್ಲ ಎಂದು ಸಿಂಗ್ ಹೇಳಿದ್ದಾರೆ.

ಇಲ್ಲಿ ಮಂಗಳವಾರ ಸುದ್ದಿಗಾರರೊಡನೆ ಮಾತನಾಡಿದ ಮನಮೋಹನ್ ಸಿಂಗ್  ರೈತರ ಆದಾಯ ದ್ವಿಗುಣಗೊಳ್ಳಬೇಕಿದ್ದರೆ ಕೃಷಿ ಕ್ಷೇತ್ರ ಶೇ. 10ರ ಪ್ರಮಾಣದಲ್ಲಿ ಬೆಳೆಯಬೇಕಿದೆ ಎಂದರು. ಮೋದಿ ಆಡಳಿತದ ಪ್ರಥಮ ಮೂರು ವರ್ಷಗಳಲ್ಲಿ  ಕೃಷಿ ರಂಗದ ಅಭಿವೃದ್ಧಿ ವಾರ್ಷಿಕ ಕೇವಲ 1.8 ಶೇಕಡಾ ಅಗಿತ್ತು ಎಂದರು. ಇದು ಯುಪಿಎ ಆಡಳಿತ ತನ್ನ 10 ವರ್ಷಗಳ ಆಡಳಿತದಲ್ಲಿ ದಾಖಲಿಸಿದ ಸರಾಸರಿ ಕೃಷಿ ಅಭಿವೃದ್ಧಿ ಪ್ರಮಾಣವಾದ ಶೇ 3.7ಗಿಂತಲೂ ಕಡಿಮೆಯಾಗಿದೆ ಎಂದು ಹೇಳಿದರು.

ಮೋದಿ ಸರಕಾರದ  ಕೇಳಲು ಚೆನ್ನಾಗಿರುವ ಘೋಷಣೆಗಳಾದ `ಸ್ಟಾರ್ಟ್-ಅಪ್ ಇಂಡಿಯಾ, ಸ್ಟ್ಯಾಂಡ್-ಅಪ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ' ಇವುಗಳಿಗೆ ಬೆಂಬಲವಾಗಿ ಸರಿಯಾದ ಯೋಜನೆಗಳಿಲ್ಲ ಎಂದು ಸಿಂಗ್ ಹೇಳಿದರು.

ಪ್ರಧಾನಿ ಮೋದಿಯ ಕಾರ್ಯವೈಖರಿಯ ಬಗ್ಗೆಯೂ ಪ್ರತಿಕ್ರಿಯಿಸಿದ ಸಿಂಗ್, ನಾಯಕರು ಟೀಕೆಗಳನ್ನೂ ಕೇಳಬೇಕು ಎಂದರು. ``ಅಮಾನ್ಯೀಕರಣದಂತಹ ನೀತಿಗಳ ವಿಚಾರ ಬಂದಾಗ ಈ ಆಧುನಿಕ ಜಗತ್ತಿನಲ್ಲಿ ಸರಕಾರದ ನೀತಿಗಳ ವಿಮರ್ಶೆಯನ್ನು ಪರಿಗಣಿಸಿ ಸೂಕ್ತ  ತಿದ್ದುಪಡಿಗಳನ್ನು ತರುವ ಸಂಸ್ಕೃತಿಯನ್ನು ನಾವು ಬೆಳೆಸಿಲ್ಲ ಎಂಬುದು ಕಳವಳಕಾರಿ,'' ಎಂದರು.

``ನಾಯಕರಿಗೆ ಕೇವಲ ಹೊಗಳಿಕೆ ಬೇಕಿದ್ದರೆ ಅವರಿಗೆ ಹೊಗಳಿಕೆ ಬಿಟ್ಟು ಬೇರೇನೂ ಕೇಳಿಸದು. ಇದು ವಿಕಾಸಕ್ಕೆ ಆಸ್ಪದ ನೀಡುವುದಿಲ್ಲ,'' ಎಂದು ಮನಮೋಹನ್ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News