ವಿದೇಶಿ ಯುದ್ಧ ವಿಮಾನಗಳ ಎದುರು ಸ್ವದೇಶಿ 'ತೇಜಸ್' ನಿಸ್ತೇಜ ?

Update: 2017-11-10 06:08 GMT

ಹೊಸದಿಲ್ಲಿ, ನ.10: ದೇಶದಲ್ಲಿಯೇ ತಯಾರಿಸಲಾದ ಲಘು ಯುದ್ಧ ವಿಮಾನ ತೇಜಸ್ ಭಾರತದ ಆಗಸವನ್ನು ರಕ್ಷಿಸಲು ಸಾಕಾಗದು ಎಂದು ವಾಯುಸೇನೆ ಸರಕಾರಕ್ಕೆ ತಿಳಿಸಿದೆ. ಗ್ಲೋಬಲ್ ಸಂಸ್ಥೆಯಿಂದ ಸಿಂಗಲ್ ಇಂಜಿನ್ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಸ್ತಾವವನ್ನು ರದ್ದುಪಡಿಸುವಂತೆ ರಕ್ಷಣಾ ಇಲಾಖೆ ಹೇಳಿದ ನಂತರ ವಾಯುಸೇನೆ ಮೇಲಿನಂತೆ ಪ್ರತಿಕ್ರಿಯಿಸಿದೆ.

ಸ್ವೀಡನ್ನಿನ ಸಾಬ್ ಸಂಸ್ಥೆಯ ಜೆಎಸ್ 39 ಗ್ರಿಪೆನ್ ಹಾಗೂ ಅಮೆರಿಕದ ಲಾಕ್ ಹೀಡ್ ಮಾರ್ಟಿನ್ ಕಂಪೆನಿಯ ಎಫ್-16 ಎದುರು ತೇಜಸ್ ಏನೇನೂ ಅಲ್ಲ ಎಂದು ವಾಯುಸೇನೆ ಹೇಳಿದೆ.

ವಿದೇಶಿ ನಿರ್ಮಿತ ಸಿಂಗಲ್ ಇಂಜಿನ್ ಯುದ್ಧ ವಿಮಾನಗಳ ಬದಲು ದೇಶೀಯ ನಿರ್ಮಿತ ವಿಮಾನಗಳನ್ನು ಖರೀದಿಸಲು ಸರಕಾರ ಸಲಹೆ ನೀಡಿದ ಬೆನ್ನಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ ಈ ವಿಚಾರ ಎತ್ತಿದ್ದಾರೆನ್ನಲಾಗಿದೆ. ತೇಜಸ್ ವಿಮಾನವೊಂದೇ ಭಾರತದ ಅಗತ್ಯತೆಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದು ವಾಯುಸೇನೆ ಸರಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ.

ಯುದ್ಧದ ಸಂದರ್ಭದಲ್ಲಿ ತೇಜಸ್ 59 ನಿಮಿಷಗಳ ತನಕ ಕಾರ್ಯಾಚರಿಸಬಹುದಾದರೆ, ಗ್ರಿಪೆನ್ ಹಾಗೂ ಎಫ್-16 ಕ್ರಮವಾಗಿ ಮೂರು ಹಾಗೂ ನಾಲ್ಕು ಗಂಟೆಗಳ ಕಾಲ ಕಾರ್ಯಚರಿಸುವ ಸಾಮರ್ಥ್ಯ ಹೊಂದಿದೆ. ಅಷ್ಟೇ ಎಲ್ಲ ತೇಜಸ್ ಮೂರು ಟನ್ ಲೋಡ್ ಹೊರುವ ಸಾಮರ್ಥ್ಯ ಹೊಂದಿದ್ದರೆ, ಗ್ರಿಪೆನ್ ಹಾಗೂ ಎಫ್-16 ಕ್ರಮವಾಗಿ ಆರು ಹಾಗೂ ಏಳು ಟನ್ ಲೋಡ್ ಸಾಮರ್ಥ್ಯ ಹೊಂದಿದೆ. ಪ್ರತೀ ಒಂದು ಗಂಟೆ ಹಾರಾಟಕ್ಕಾಗಿ ತೇಜಸ್ ಅನ್ನು ಸಿದ್ಧಪಡಿಸಲು 20 ಗಂಟೆಗಳು ಬೇಕಾಗಿದ್ದರೆ ಗ್ರಿಪೆನ್ ಹಾಗೂ ಎಫ್-16ಗೆ ಕ್ರಮವಾಗಿ ಆರು ಗಂಟೆ ಹಾಗೂ 3.5 ಗಂಟೆಗಳು ಸಾಕು ಎನ್ನಲಾಗಿದೆ.

ತೇಜಸ್ ತಯಾರಿಕಾ ವೆಚ್ಚ ಕೂಡ ಅಧಿಕ ಎಂದು ಹೇಳಲಾಗುತ್ತಿದೆ. ತೇಜಸ್ 20 ವರ್ಷ ಬಾಳಿಕೆ ಬರುವುದಾದರೆ ಗ್ರಿಪೆನ್ ಹಾಗೂ ಎಫ್-16 ತಲಾ 40 ವರ್ಷ ಬಾಳಿಕೆ ಬರುತ್ತದೆ.

ಈಗ ಕಾರ್ಯಾಚರಿಸುತ್ತಿರುವ ಮಿಗ್ 31ಎಸ್. ಬದಲಿಗೆ ಭಾರತಕ್ಕೆ ಸಾಕಷ್ಟು ಸಂಖ್ಯೆಯ ಸಿಂಗಲ್ ಇಂಜಿನ್ ಯುದ್ಧ ವಿಮಾನಗಳ ಅಗತ್ಯವಿದೆ. ಇಲ್ಲಿಯ ತನಕ 123 ತೇಜಸ್ ಯುದ್ಧ ವಿಮಾನಗಳಿಗೆ ವಾಯುಪಡೆ ಬೇಡಿಕೆ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News