ನ್ಯಾಯಾಧೀಶರ ಹೆಸರಲ್ಲಿ ಲಂಚದ ಆರೋಪ ಗಂಭೀರ ಪ್ರಕರಣ : ಸುಪ್ರೀಂ ಕೋರ್ಟ್

Update: 2017-11-10 13:18 GMT

ಹೊಸದಿಲ್ಲಿ, ನ.10: ನ್ಯಾಯಾಧೀಶರ ಹೆಸರಿನಲ್ಲಿ ಲಂಚ ಪಡೆದಿರುವ ಕುರಿತ ಆರೋಪ ಅತ್ಯಂತ ಗಂಭೀರವಾದುದು ಎಂದು ಸುಪ್ರೀಂಕೋರ್ಟ್ ತಿಳಿಸಿದ್ದು ನ್ಯಾಯದ ಚಿಲುಮೆಯನ್ನು ಮಲಿನಗೊಳಿಸಲು ಯಾರಿಗೂ ಆಸ್ಪದ ನೀಡಲಾಗದು ಎಂದು ಹೇಳಿದೆ.

ಯಾರೇ ಆಗಲಿ, ಎಷ್ಟು ಪ್ರಭಾವಿಯೇ ಆಗಿರಲಿ ಅವರು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಂತಿಮವಾಗಿ ನ್ಯಾಯ ದೊರೆಯಲಿದೆ ಎಂದು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠವು ತಿಳಿಸಿದೆ.

ಸಿಬಿಐ ದಾಳಿ ನಡೆಸಿದೆ ಹಾಗೂ ಪ್ರಕರಣ ದಾಖಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು ಇದರ ಮಹತ್ವವನ್ನು ಯಾರೂ ದುರ್ಬಲಗೊಳಿಸುವಂತಿಲ್ಲ. ನ್ಯಾಯದ ಹರಿವನ್ನು ಮಲಿನಗೊಳಿಸಲು ಯಾರಿಗೂ ಆಸ್ಪದ ನೀಡಲಾಗದು ಎಂದು ನ್ಯಾಯಪೀಠ ತಿಳಿಸಿದೆ.

 ನವೆಂಬರ್ 8ರಂದು ಈ ಪ್ರಕರಣದ ವಿಚಾರಣೆಯನ್ನು ಸೂಕ್ತ ನ್ಯಾಯಪೀಠದ ಸೂಚಿಪಟ್ಟಿಯಲ್ಲಿ ದಾಖಲಿಸಲು ನಿರ್ದೇಶಿಸಲಾಗಿತ್ತು. ಆದರೂ ನ.9ರಂದು ಕೋರ್ಟ್ ನಂ.2ರಲ್ಲಿ ಮತ್ತೊಂದು ಅರ್ಜಿ ದಾಖಲಿಸುವ ಅಗತ್ಯವೇನಿತ್ತು. ನೀವು ನನಗೆ ಪರಿಚಿತರು. ನನ್ನಲ್ಲಿ ಕೇಳಿದ್ದರೆ ಬಹುಷಃ ನಾನು ಇದನ್ನು ನಿರಾಕರಿಸುತ್ತಿದ್ದೆ ಎಂದು ನ್ಯಾಯಮೂರ್ತಿ ಎ.ಕೆ.ಸಿಕ್ರಿ ಎನ್‌ಜಿಒ ಸಂಸ್ಥೆಯೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸಂಸ್ಥೆಯನ್ನು ಪ್ರತಿನಿಧಿಸಿದ್ದ ವಕೀಲ ಪ್ರಶಾಂತ್ ಭೂಷಣ್‌ಗೆ ತಿಳಿಸಿದರು.

  ಇದಕ್ಕೆ ಉತ್ತರಿಸಿದ ಪ್ರಶಾಂತ್ ಭೂಷಣ್, ನವೆಂಬರ್ 8ರಂದು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದಾಗ ನೋಂದಣಾಧಿಕಾರಿಗಳು, ನ್ಯಾಯಪೀಠದಲ್ಲಿ ಈಗಾಗಲೇ ಬೇರೊಂದು ಪ್ರಕರಣ ವಿಚಾರಣೆಗೆ ಸಿದ್ಧವಾಗಿರುವ ಕಾರಣ ಈ ಅರ್ಜಿ ಸ್ವಯಂ ಕೋರ್ಟ್ ನಂ.2ಕ್ಕೆ ವರ್ಗಾವಣೆಗೊಳ್ಳುತ್ತದೆ ಎಂದು ತಿಳಿಸಿದ್ದರು ಎಂದರು. ಯಾವ ಪ್ರಕರಣವನ್ನು ಯಾವ ನ್ಯಾಯಪೀಠದ ಸೂಚಿಪಟ್ಟಿಯಲ್ಲಿ ದಾಖಲಿಸಬೇಕು ಎಂಬ ಬಗ್ಗೆ ಮುಖ್ಯ ನ್ಯಾಯಾಧೀಶರು ತಿಳಿಸುತ್ತಾರೆ ಎಂದು ನ್ಯಾಯಪೀಠ ತಿಳಿಸಿತು.

 ಈ ವಿಷಯದ ಬಗ್ಗೆ ಕೂಲಂಕುಷ ಮತ್ತು ಸಮರ್ಪಕ ತನಿಖೆಯ ಅಗತ್ಯವಿದೆ. ಸಿಬಿಐ ತನಿಖೆ ಮುಂದುವರಿಸಬೇಕೇ ಅಥವಾ ನಿಮ್ಮ ಕೋರಿಕೆಯಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕೆ ತನಿಖೆಯನ್ನು ವರ್ಗಾಯಿಸಬೇಕೇ ಎಂಬ ಬಗ್ಗೆ ಪರಿಶೀಲಿಸಬೇಕಿದೆ ಎಂದು ನ್ಯಾಯಪೀಠ ತಿಳಿಸಿತು.

ಈ ಮಧ್ಯೆ , ಸುಪ್ರೀಂಕೋರ್ಟ್ ವಕೀಲರ ಸಂಘಟನೆ(ಎಸ್‌ಸಿಬಿಎ) ಅಧ್ಯಕ್ಷ ಹಾಗೂ ಹಿರಿಯ ವಕೀಲ ಆರ್.ಎಸ್.ಪುರಿ ಮತ್ತು ಕಾರ್ಯದರ್ಶಿ ಗೌರವ್ ಭಾಟಿಯಾ ಈ ವಿಷಯದಲ್ಲಿ ತಮ್ಮನ್ನು ಕಕ್ಷೀದಾರರನ್ನಾಗಿ ಸೇರಿಸಿಕೊಳ್ಳಲು ಬಾಯಿಮಾತಿನಲ್ಲಿ ಕೋರಿಕೆ ಸಲ್ಲಿಸಿದ್ದಾರೆ ಎಂದು ತಿಳಿಸಿರುವ ನ್ಯಾಯಪೀಠವು, ಸುಪ್ರೀಂಕೋರ್ಟ್‌ನ ಪ್ರಥಮ ಐವರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ಸಾಂವಿಧಾನಿಕ ಪೀಠದೆದುರು ಈ ಪ್ರಕರಣದ ವಿಚಾರಣೆಯನ್ನು ನವೆಂಬರ್ 13ಕ್ಕೆ ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News