ಕುಲಭೂಷಣ್ ಭೇಟಿಯಾಗಲು ಪತ್ನಿಗೆ ಪಾಕ್ ಅವಕಾಶ

Update: 2017-11-11 04:48 GMT

ಇಸ್ಲಾಮಾಬಾದ್, ನ. 11: ಬೇಹುಗಾರಿಕೆ ಆರೋಪದಲ್ಲಿ ಬಂಧಿತರಾಗಿ ಮಿಲಿಟರಿ ನ್ಯಾಯಾಲಯದಿಂದ ಮರಣ ದಂಡನೆ ಶಿಕ್ಷೆಗೆ ಈಡಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ಅವರ ಪತ್ನಿಗೆ ಮಾನವೀಯತೆ ಆಧಾರದಲ್ಲಿ ಪಾಕಿಸ್ತಾನ ಅವಕಾಶ ಮಾಡಿಕೊಟ್ಟಿದೆ.

ಕುಲಭೂಷಣ್ ಅವರ ಪತ್ನಿ ತಮ್ಮ ಪತಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುವ ಸಂಬಂಧದ ಆದೇಶವನ್ನು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಕಳುಹಿಸಲಾಗಿದೆ. ಈ ಭೇಟಿಯನ್ನು ಪಾಕಿಸ್ತಾನದಲ್ಲಿ ವ್ಯವಸ್ಥೆಗೊಳಿಸಲಾಗುವುದು ಹಾಗೂ ಮಾನವೀತೆಯ ಆಧಾರದಲ್ಲಿ ಮಾತ್ರ ಈ ಭೇಟಿಗೆ ಅವಕಾಶ ನೀಡಲಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಕಚೇರಿಯ ಹೇಳಿಕೆ ಸ್ಪಷ್ಟಪಡಿಸಿದೆ.

ಆದರೆ ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಈ ಭೇಟಿಗೆ ಮುಂದಿನ ತಿಂಗಳು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಇಸ್ಲಾಮಾಬಾದ್‌ನಲ್ಲಿ ಅಧಿಕಾರಿಗಳು ಖಾಸಗಿಯಾಗಿ ಹೇಳಿದ್ದಾರೆ. ಇಂಥ ಭೇಟಿಗೆ ಅವಕಾಶ ನೀಡಲು ಕಾರಣ ಮಾತ್ರ ತಿಳಿದುಬಂದಿಲ್ಲ.

ಜಾಧವ್ ಅವರ ತಾಯಿ ಅವಂತಿಕಾ ಜಾಧವ್ ಅವರು ಮಗನನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ಕಳೆದ ಏಪ್ರಿಲ್‌ನಲ್ಲಿ ಮಾಡಿಕೊಂಡಿರುವ ಮನವಿಗೆ ಪಾಕಿಸ್ತಾನ ಇದುವರೆಗೆ ಸ್ಪಂದಿಸಿಲ್ಲ. ಈ ಬಗ್ಗೆ ಪಾಕಿಸ್ತಾನ ಸರ್ಕಾರಕ್ಕೆ ಕೂಡಾ ಸೇನೆಯಿಂದ ಯಾವ ಉತ್ತರವೂ ಬಂದಿಲ್ಲ.

ಪಾಕಿಸ್ತಾನದ ವಿದೇಶಾಂಗ ಕಚೇರಿಯ ಹೇಳಿಕೆಯಲ್ಲಿ ಜಾಧವ್ ಅವರನ್ನು ಭಾರತೀಯ ನೌಕಾಪಡೆಯ ಕಮಾಂಡರ್ ಎಂದು ಉಲ್ಲೇಖಿಸಲಾಗಿದೆ. ಹುಸೈನ್ ಮುಬಾರಕ್ ಪಟೇಲ್ ಎಂಬ ಹೆಸರಿನಿಂದ ಭಾರತದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ ಗುಪ್ತಚರನಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಪಾಕಿಸ್ತಾನದ ಗಡಿಯನ್ನು ಕಾನೂನುಬಾಹಿರವಾಗಿ ದಾಟುತ್ತಿದ್ದಾಗ ಮಾರ್ಚ್ 3ರಂದು ಪಾಕಿಸ್ತಾನದ ಕಾನೂನು ಜಾರಿ ಏಜೆನ್ಸಿಗಳು ಬಂಧಿಸಿವೆ ಎಂದು ಪ್ರಕಟಣೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News