ಕನ್ಹಯ್ಯ ಭಾಗಿಯಾದದ್ದಕ್ಕೆ ಸಂಘ ಪರಿವಾರ ಸಂಘಟನೆಗಳಿಂದ ದಾಂಧಲೆ

Update: 2017-11-11 14:09 GMT

ಲಕ್ನೋ, ನ.11: ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕನ್ಹಯ್ಯ ಕುಮಾರ್ ಉಪಸ್ಥಿತಿಯನ್ನು ವಿರೋಧಿಸಿ ಸಂಘ ಪರಿವಾರ ಸಂಘಟನೆಗೆ ಸೇರಿದವರು ಎನ್ನಲಾದ ವ್ಯಕ್ತಿಗಳು ನಡೆಸಿದ ದಾಂಧಲೆಯ ಪರಿಣಾಮ ಲಕ್ನೊ ಆಡಳಿತ ಮೂರು ದಿನಗಳ ಸಾಹಿತ್ಯ ಉತ್ಸವಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಆ್ಯಸಿಡ್ ದಾಳಿ ಸಂತ್ರಸ್ತರು ನಡೆಸುತ್ತಿರುವ ಶೆರೋಸ್ ಕೆಫೆಯಲ್ಲಿ ನಡೆದ ಉತ್ಸವದ ಮೊದಲ ದಿನ ಕನ್ಹಯ್ಯ ಕುಮಾರ್ ಅವರನ್ನು ತಮ್ಮ ಪುಸ್ತಕ “ಷ್ರಮ್ ಬಿಹಾರ್ ಟು ತಿಹಾರ್” ಬಗ್ಗೆ ಮಾತನಾಡಲು ಆಹ್ವಾನಿಸಲಾಗಿತ್ತು.

ಕುಮಾರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದ, ಸಂಘ ಪರಿವಾರ ಸಂಘಟನೆಗೆ ಸೇರಿದವರು ಎನ್ನಲಾದ ಕೆಲ ವ್ಯಕ್ತಿಗಳು ಸ್ಥಳಕ್ಕಾಗಮಿಸಿ ಕನ್ಹಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಭಾರತ್ ಮಾತಾ ಕೀ ಜೈ, ‘ವಂದೇ ಮಾತರಂ’ ಮುಂತಾದ ಘೋಷಣೆಗಳ ನಡುವೆಯೇ ಕುಮಾರ್ ಬೆಂಬಲಿಗರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷವೇರ್ಪಟ್ಟಿತು.

ಪರಿಸ್ಥಿತಿಯನ್ನು ನಿಭಾಯಿಸಲು ಕೂಡಲೇ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಯಿತು.

 ಕಾರ್ಯಕ್ರಮದ ಸಂಘಟಕರಾದ ಶಮೀಮ್ ಆರೆರ್ ಹೇಳುವಂತೆ, ಕಾರ್ಯಕ್ರಮದ ಮೊದಲ ಭಾಗದಲ್ಲಿ ನಟಿ ದಿವ್ಯಾ ದತ್ತಾ ವರು ಅತಿಥಿಯಾಗಿ ಭಾಗವಹಿಸಿದ್ದರು. ನಂತರ ಕನ್ಹಯ್ಯ ತಮ್ಮ ಪುಸ್ತಕದ ಬಗ್ಗೆ ಮಾತನಾಡಬೇಕಿತ್ತು. ಆದರೆ ಆಗಲೇ ಒಂದು ಸಂಘಟನೆಗೆ ಸೇರಿದ ಡಜನ್‌ಗಟ್ಟಲೆ ವ್ಯಕ್ತಿಗಳು ಸ್ಥಳಕ್ಕಾಗಮಿಸಿ ತೊಂದರೆ ನೀಡಿದರು.

ನಾವು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆವು. ಅದು ಸಾಧ್ಯವಾಗದಾಗ ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರನ್ನು ಕರೆಯಬೇಕಾಯಿತು. ನಂತರ ಪೂರ್ವನಿಗದಿಯಾದಂತೆ ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಅವರ ಜೊತೆಗಿನ ಸಂವಾದ ಮುಂದುವರಿಯಿತು ಎಂದು ಆರೆರ್ ತಿಳಿಸಿರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News