ಉತ್ತರ ಭಾರತದಲ್ಲಿ ತಗ್ಗದ ವಾಯುಮಾಲಿನ್ಯ

Update: 2017-11-11 14:39 GMT

ಹೊಸದಿಲ್ಲಿ,ನ.11: ಉತ್ತರ ಭಾರತದಲ್ಲಿಯ ನಗರಗಳು ವಾಯು ಗುಣಮಟ್ಟ ಸೂಚಿ(ಎಕ್ಯೂಐ)ಯಲ್ಲಿ ‘ಗಂಭೀರ’ವಾಗಿಯೇ ಮುಂದುವರಿದಿವೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಯು ಶನಿವಾರ ತಿಳಿಸಿದೆ.

 ಮಾಲಿನ್ಯ ಪೀಡಿತ ನಗರಗಳ ಪಟ್ಟಿಯಲ್ಲಿ ವಾರಣಾಸಿ(ಎಕ್ಯೂಐ 491) ಅಗ್ರ ಸ್ಥಾನದಲ್ಲಿದ್ದು, ಗುರುಗ್ರಾಮ(480), ದಿಲ್ಲಿ(468), ಲಕ್ನೋ(462) ಮತ್ತು ಕಾನ್ಪುರ(461) ನಂತರದ ಸ್ಥಾನಗಳಲ್ಲಿವೆ.

  ಎಕ್ಯೂಐ 401ರಿಂದ 500ರ ನಡುವೆ ಇದ್ದರೆ ಮಾಲಿನ್ಯ ಮಟ್ಟವನ್ನು ಗಂಭೀರ ಎಂದು ವರ್ಗೀಕರಿಸಲಾಗಿದೆ. ಇದು ಆರೋಗ್ಯವಂತರ ಮೇಲೂ ದುಷ್ಪರಿಣಾಮವನ್ನು ಬೀರುತ್ತದೆ ಮತ್ತು ಈಗಾಗಲೇ ಅನಾರೋಗ್ಯ ಪೀಡಿತರ ಸ್ಥಿತಿಯನ್ನು ತೀವ್ರವಾಗಿ ಹದಗೆಡಿಸುತ್ತದೆ.

 ಪಂಜಾಬ್ ಮತ್ತು ಹರ್ಯಾಣಗಳಲ್ಲಿ ರೈತರು ತಮ್ಮ ಹೊಲಗಳಲ್ಲಿ ಕೃಷಿತ್ಯಾಜ್ಯಗಳಿಗೆ ಬೆಂಕಿ ಹಾಕುತ್ತಿರುವುದು ಉತ್ತರ ಭಾರತದಲ್ಲಿ ವಾಯುಮಾಲಿನ್ಯ ಹೆಚ್ಚಲು ಪ್ರಮುಖ ಕಾರಣಗಳಲ್ಲೊಂದಾಗಿದೆ.

ರಾಜಧಾನಿ ದಿಲ್ಲಿಯಲ್ಲಿ ಕಳೆದ ಕೆಲವು ದಿನಗಳಿಂದ ವಾಯುಮಾಲಿನ್ಯ ತೀರ ಹೆಚ್ಚಾಗಿದ್ದು, ರಸ್ತೆಗಳಲ್ಲಿ ಗೋಚರತೆಯು ಕಡಿಮೆಯಾಗಿದೆ. ಸಾರ್ವಜನಿಕ ಆರೋಗ್ಯಕ್ಕೆ ತೀವ್ರ ಸವಾಲು ಎದುರಾಗಿದ್ದು, ಶಾಲೆಗಳನ್ನು ಮುಚ್ಚಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News