ಭಾರತದ ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಧಿಸೂಚನೆ ಹಿಂದಕ್ಕೆ ಪಡೆದ ಅಮೆರಿಕ

Update: 2017-11-11 16:54 GMT

ವಾಶಿಂಗ್ಟನ್, ನ. 11: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಉತ್ತೇಜಿಸುವ ಯೋಜನೆಗಳನ್ನು ಜಾರಿಗೊಳಿಸುವುದಕ್ಕಾಗಿ 5 ಲಕ್ಷ ಡಾಲರ್ (ಸುಮಾರು 3.27 ಕೋಟಿ ರೂಪಾಯಿ)ವರೆಗೆ ಅನುದಾನ ಪಡೆಯಲು ಸರಕಾರೇತರ ಸಂಘಟನೆ (ಎನ್‌ಜಿಒ)ಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸಿರುವ ಅಧಿಸೂಚನೆಯನ್ನು ಅಮೆರಿಕದ ವಿದೇಶಾಂಗ ಇಲಾಖೆ ಹಿಂದಕ್ಕೆ ಪಡೆದುಕೊಂಡಿದೆ.

‘‘ನಿಧಿ ಹಂಚಿಕೆ ಕುರಿತ ಅಧಿಸೂಚನೆಯನ್ನು ತಾಂತ್ರಿಕ ಮರುಪರಿಶೀಲನೆಗಾಗಿ ಹಿಂದಕ್ಕೆ ಪಡೆದುಕೊಳ್ಳಲಾಗಿದೆ’’ ಎಂದು ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ಶುಕ್ರವಾರ ‘ಹಿಂದೂಸ್ತಾನ್ ಟೈಮ್ಸ್’ಗೆ ತಿಳಿಸಿದರು.

ಆದಾಗ್ಯೂ, ಮರುಪರಿಶೀಲನೆಗೆ ಕಾರಣ ಅಥವಾ ಮರುಪರಿಶೀಲನಾ ಅವಧಿಯ ಬಗ್ಗೆ ಅವರು ಯಾವುದೇ ವಿವರಗಳನ್ನು ನೀಡಲಿಲ್ಲ.

ಅಮೆರಿಕ ವಿದೇಶಾಂಗ ಇಲಾಖೆಯ ‘ಪ್ರಜಾಪ್ರಭುತ್ವ, ಮಾನವಹಕ್ಕುಗಳು ಮತ್ತು ಕಾರ್ಮಿಕ (ಡಿಆರ್‌ಎಲ್) ಬ್ಯೂರೊ’ ಈ ವಾರದ ಆದಿ ಭಾಗದಲ್ಲಿ ಅಧಿಸೂಚನೆಯನ್ನು ಹೊರಡಿಸಿತ್ತು. ‘ಭಾರತದಲ್ಲಿ ಧರ್ಮದ ನೆಲೆಯಲ್ಲಿ ನಡೆಯುತ್ತಿರುವ ಹಿಂಸೆ ಮತ್ತು ತಾರತಮ್ಯವನ್ನು ಕಡಿಮೆ ಮಾಡುವ ಉದ್ದೇಶ’ದ ಯೋಜನೆಗಳಿಗಾಗಿ ಸುಮಾರು 5 ಲಕ್ಷ ಡಾಲರ್ ನಿಧಿಯನ್ನು ನೀಡುವುದಾಗಿ ಅಧಿಸೂಚನೆ ತಿಳಿಸಿತ್ತು.

 ಈ ಅಧಿಸೂಚನೆಯು ಭಾರತದಲ್ಲಿ ಸಾಕಷ್ಟು ಕಂಪನಗಳನ್ನು ಸೃಷ್ಟಿಸಿತ್ತು. ಸಾಮಾನ್ಯವಾಗಿ ತನ್ನ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅಮೆರಿಕ ನೀಡುವ ವರದಿಗಳ ಬಗ್ಗೆ ತಲೆಕೆಡಿಸಿಕೊಳ್ಳದಿರುವ ಭಾರತ ಈ ಬಾರಿ ತೀವ್ರ ಪ್ರತಿಕ್ರಿಯ ನೀಡಿದೆ ಎನ್ನಲಾಗಿದೆ.

‘‘ಈ ವಿಷಯಕ್ಕೆ ಸಂಬಂಧಿಸಿ ನಾವು ವರದಿಗಳನ್ನು ನೋಡಿದ್ದೇವೆ. ನಾವು ಹೆಚ್ಚಿನ ಮಾಹಿತಿಗಳನ್ನು ಕೋರಿದ್ದೇವೆ’’ ಎಂದು ಭಾರತದ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತನ್ನ ಸಾಪ್ತಾಹಿಕ ಮಾಧ್ಯಮ ಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

 ‘‘ಏನಿದ್ದರೂ, ಭಾರತದಲ್ಲಿ ನಡೆಯುವ ಇಂಥ ಯಾವುದೇ ಚಟುವಟಿಕೆಗಳು ನೆಲದ ಕಾನೂನಿಗೆ ಅನುಸಾರವಾಗಿ ನಡೆಯಬೇಕು’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News