ಆನೆ ಜೊತೆಗೆ 'ಬಾಹುಬಲಿ' ಸ್ಟಂಟ್ ಮಾಡಲು ಹೋದವ ಗಾಳಿಯಲ್ಲಿ ಹಾರಿದ್ದು ಹೀಗೆ !

Update: 2017-11-14 07:31 GMT

ತಿರುವನಂತಪುರಂ, ನ.14: ಕೇರಳದಲ್ಲಿ ಯುವಕನೊಬ್ಬ ಆನೆಯ ಜತೆಗೆ 'ಬಾಹುಬಲಿ' ಸ್ಟಂಟ್ ಮಾಡಲು ಹೋಗಿ ಆಸ್ಪತ್ರೆ ಸೇರಿದ ಘಟನೆ ನಡೆದಿದ್ದು ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಳಿ ಶರ್ಟ್ ಮತ್ತು ಲುಂಗಿ ಧರಿಸಿದ್ದ ಯುವಕನೊಬ್ಬ ರಬ್ಬರ್ ಎಸ್ಟೇಟ್ ಒಂದರಲ್ಲಿ ಎಲೆಗಳನ್ನು ತಿನ್ನುತ್ತಿದ್ದ ಆನೆಯ ಬಳಿ ತೆರಳಿ ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲದಿಂದ ಬಾಳೆಹಣ್ಣನ್ನು ತೆಗೆದು ಆನೆಗೆ ನೀಡುತ್ತಾನೆ. ಒಂದು ಬಾಳೆ ಹಣ್ಣು ತಿಂದ ಆನೆ ಮತ್ತೊಂದು ಬೇಕೆಂದು ಸೊಂಡಿಲು ಮುಂದೆ ಮಾಡುತ್ತದೆ. ಹೀಗೆ ಒಂದೊಂದಾಗಿ ಬಾಳೆಹಣ್ಣು ತಿನ್ನುತ್ತಾ ಕೊನೆಗೆ ಆ ಯುವಕನಲ್ಲಿ ಒಂದೇ ಬಾಳೆಹಣ್ಣು ಉಳಿದಿರುತ್ತದೆ. ಅದನ್ನೂ ಆನೆ ಜತೆ ಮಾತನಾಡುತ್ತಾ ನೀಡಿದ ಆತ ನಂತರ ಅದರ ಎರಡೂ ದಂತಗಳನ್ನು ಕೈಯಲ್ಲಿ ಹಿಡಿದು ತನ್ನ ಮುಖ ಹತ್ತಿರಕ್ಕೆ ತಂದು ಅದರ ಸೊಂಡಿಲಿಗೆ ಮುತ್ತು ನೀಡುತ್ತಾನೆ. ಮೊದಲ ಪ್ರಯತ್ನ ಯಶಸ್ವಿ. ಮತ್ತೊಮ್ಮೆ ಅದನ್ನೇ ಆತ ಮಾಡುತ್ತಾನೆ. ಅಷ್ಟರಲ್ಲಿ ಈ ವೀಡಿಯೋವನ್ನು ಫೇಸ್ ಬುಕ್ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ಆತನ ಗೆಳೆಯರು ಆತನಿಗೆ ಎಚ್ಚರಿಸುತ್ತಾರೆ ‘‘ನೀನು ಕುಡಿದಿದ್ದೀಯ, ಎಚ್ಚರಿಕೆ, ಆನೆ ಒಮ್ಮೆಗೇ ರೊಚ್ಚಿಗೇಳಬಹುದು’’ ಎಂದು ಹೇಳಿದರೂ ಆತ ತನ್ನ ಸಾಹಸ ಮುಂದುವರಿಸುತ್ತಾನೆ. ಅಷ್ಟರಲ್ಲಿ ಸಿಡಿಮಿಡಿಗೊಂಡ ಆನೆ ಒಮ್ಮೆಲೆ ಆತನನ್ನು ಎತ್ತಿ ಬಿಸಾಕುತ್ತದೆ. ಆತ ಹತ್ತು ಅಡಿ ದೂರ ನೆಲದಲ್ಲಿ ಮುದ್ದೆಯಾಗಿ ಬೀಳುತ್ತಾನೆ. 

ಬಾಹುಬಲಿ ಸಿನೆಮಾದ ದೃಶ್ಯವೊಂದನ್ನು ಅನುಕರಿಸಲು ಈ ಯುವಕ ಹೋಗಿದ್ದನೋ ಇಲ್ಲ ತನ್ನದೇ ಸ್ಟಂಟ್ ಮಾಡಲು ಪ್ರಯತ್ನಿಸಿದ್ದಾನೋ ಎಂಬುದು ತಿಳಿದಿಲ್ಲ. ಆದರೆ ಕೊನಗೆ ಪ್ರಜ್ಞೆ ಕಳೆದುಕೊಂಡು ಬಿದ್ದ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಘಟನೆಯು ಇಡುಕ್ಕಿ ಜಿಲ್ಲೆಯ ತಡಪುಝ ಎಂಬಲ್ಲಿ ನಡೆದಿದ್ದು, ವೀಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿ ಜಿನು ಜಾನ್ ಎಂದು ಗುರುತಿಸಲಾಗಿದೆ. ಗೆಳೆಯರೊಡನೆ ಸ್ಕೂಟರಿನಲ್ಲಿ ಹೋಗುತ್ತಿದ್ದಾಗ ಆನೆ ಕಂಡು ಆತ ಈ ಸಾಹಸಕ್ಕೆ ಕಳೆದ ರವಿವಾರ ಕೈಹಾಕಿದ್ದನೆಂದು ತಿಳಿದು ಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News