ರಾಕೆಟ್ ಉಡಾವಣೆಗೆ ಚೀನಾದೊಂದಿಗೆ ದರ ಸಮರಕ್ಕಿಳಿದ ಇಸ್ರೊ

Update: 2017-11-14 17:08 GMT

ಬೀಜಿಂಗ್, ನ. 14: ರಾಕೆಟ್ ಉಡಾವಣೆಯ ವೆಚ್ಚವನ್ನು ಕಡಿತಗೊಳಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಜಾಗತಿಕ ಸ್ಪರ್ಧೆಗೆ ಸಂಪೂರ್ಣವಾಗಿ ಸಜ್ಜಾಗಿದೆ.

ಚೀನಾವು ರಾಕೆಟ್ ಉಡಾವಣೆಯ ಬೆಲೆಯನ್ನು ಕಿಲೋಗ್ರಾಂಗೆ 5,000 ಡಾಲರ್ (3.27 ಲಕ್ಷ ರೂಪಾಯಿ)ಗೆ ಇಳಿಸಿದ ಬಳಿಕ ಇಸ್ರೊ ಮಂಗಳವಾರ ಈ ಘೋಷಣೆ ಮಾಡಿದೆ.

ರಾಕೆಟ್ ಉಡಾವಣೆಯ ಬೆಲೆಯನ್ನು ಸಾಮಾನ್ಯವಾಗಿ ಯಾರೂ ಬಹಿರಂಗಪಡಿಸುವುದಿಲ್ಲ. ಆದರೆ, ಬೀಜಿಂಗ್‌ನಲ್ಲಿ ಈ ತಿಂಗಳು ನಡೆದ ಬಾಹ್ಯಾಕಾಶ ಸಂಬಂಧಿ ಕಾರ್ಯಕ್ರಮವೊಂದರಲ್ಲಿ, ರಾಕೆಟ್ ಉಡಾವಣಾ ಬೆಲೆಯನ್ನು ಕಡಿತಗೊಳಿಸುವ ಚೀನಾದ ಯೋಜನೆಯ ಬಗ್ಗೆ ಅಲ್ಲಿನ ಅಧಿಕಾರಿಯೊಬ್ಬರು ವಿವರಗಳನ್ನು ನೀಡಿದ್ದರು.

ಉಡಾವಣಾ ಬೆಲೆಯನ್ನು ಗಣನೀಯವಾಗಿ ಇಳಿಸುವ ಚೀನಾದ ಯೋಜನೆಗಳಿಗೆ ಪ್ರತಿಕ್ರಿಯಿಸಿರುವ ಇಸ್ರೊ ಅಧಿಕಾರಿಯೊಬ್ಬರು, ಭಾರತೀಯ ಬಾಹ್ಯಾಕಾಶ ಸಂಸ್ಥೆ ಸ್ಪರ್ಧಾತ್ಮಕವಾಗಿದೆ ಎಂದು ಹೇಳಿದರು. ನೂತನ ತಂತ್ರಜ್ಞಾನದ ಮೂಲಕ ಬಾಹ್ಯಾಕಾಶ ಸಂಪರ್ಕ ವೆಚ್ಚವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಇಸ್ರೊ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.

ಅಮೆರಿಕದ ಯುನೈಟೆಡ್ ಲಾಂಚ್ ಅಲಯನ್ಸ್ ಸಂಸ್ಥೆ ಈಗ ಕಿಲೋಗ್ರಾಂಗೆ 14,000 ದಿಂದ 20,000 ಡಾಲರ್‌ವರೆಗೆ ಬೆಲೆ ವಿಧಿಸಿದೆ.

ಆದರೆ, ಖಾಸಗಿ ಸ್ಪೇಸ್‌ಎಕ್ಸ್ ಸಂಸ್ಥೆಯು ಬೆಲೆಯನ್ನು ಕಿಲೋಗ್ರಾಂಗೆ 2,500 ಡಾಲರ್‌ಗೆ ಇಳಿಸಲು ಮುಂದಾಗಿದೆ. ಅದು ರಾಕೆಟ್ ಮರುಬಳಕೆ ತಂತ್ರಜ್ಞಾನವನ್ನು ಬಳಸುತ್ತಿರುವುದರಿಂದ ಇದು ಸಾಧ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News