ಝಿಂಬಾಬ್ವೆಯಲ್ಲಿ ಕ್ಷಿಪ್ರ ಕ್ರಾಂತಿ: ಮಿಲಿಟರಿ ವಶದಲ್ಲಿ ಅಧ್ಯಕ್ಷ ಮುಗಾಬೆ

Update: 2017-11-15 18:06 GMT

  ಹರಾರೆ, ನ.15: ಝಿಂಬಾಬ್ವೆ ಸೇನಾ ಪಡೆ ದೇಶದ ಅಧ್ಯಕ್ಷ ರಾಬರ್ಟ್ ಮುಗಾಬೆಯನ್ನು ಬಂಧಿಸಿದ್ದು ಕೇಂದ್ರ ಹರಾರೆಯಲ್ಲಿ ಸೈನಿಕರು ಹಾಗೂ ಶಸ್ತ್ರಸಜ್ಜಿತ ವಾಹನಗಳು ಮುಖ್ಯ ಸರಕಾರಿ ಕಚೇರಿಗಳು, ಸಂಸತ್ತು ಹಾಗೂ ನ್ಯಾಯಾಲಯಗಳ ರಸ್ತೆಯನ್ನು ಮುಚ್ಚುವ ಮೂಲಕ ದೇಶದಲ್ಲಿ ಕ್ಷಿಪ್ರ ಕ್ರಾಂತಿ ಉಂಟಾಗಿದೆ.

                 (ರಾಬರ್ಟ್ ಮುಗಾಬೆ)

ಸರಕಾರವನ್ನು ಸೇನಾಪಡೆಯು ಸ್ವಾಧೀನಪಡಿಸಿಕೊಂಡಿದೆ ಎಂಬ ವರದಿಯನ್ನು ನಿರಾಕರಿಸಿದ ಸೇನಾಪಡೆ, ದೇಶದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿರುವ ಮುಗಾಬೆಯನ್ನು ಸುತ್ತುವರಿದಿರುವ ‘ಕ್ರಿಮಿನಲ್‌ಗಳು’ ನಮ್ಮ ಗುರಿ. 93ರ ಪ್ರಾಯದ ಮುಗಾಬೆ ಸುರಕ್ಷಿತ ಹಾಗೂ ಆರೋಗ್ಯವಂತರಾಗಿದ್ದಾರೆ ಎಂದು ಝಿಂಬಾಬ್ವೆ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಮುಗಾಬೆ ಸುತ್ತುಮುತ್ತಲಿರುವ ಕ್ರಿಮಿನಲ್‌ಗಳು ನಮ್ಮ ಗುರಿಯಾಗಿದ್ದಾರೆ. ದೇಶದಲ್ಲಿ ಅಪರಾಧವನ್ನು ಎಸಗುವ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿರುವರನ್ನು ಮಟ್ಟ ಹಾಕಿ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ. ಆದಷ್ಟು ಬೇಗನೆ ದೇಶದಲ್ಲಿ ಸಾಮಾನ್ಯ ಸ್ಥಿತಿ ವಾಪಸಾಗಲಿದೆ'' ಎಂದು ಝಿಂಬಾಬ್ವೆಯ ಮೇಜರ್ ಜನರಲ್ ಎಸ್‌ಬಿ ಮೋಯಾ ದೇಶದ ರಾಷ್ಟ್ರೀಯ ದೂರದರ್ಶನಕ್ಕೆ ತಿಳಿಸಿದ್ದಾರೆ.

ಝಿಂಬಾಬ್ವೆಯ ಪ್ರಮುಖ ಪ್ರಸಾರ ಸಂಸ್ಥೆ ಹಾಗೂ ಮುಗಾಬೆಯ ಮುಖ್ಯವಾಣಿ ‘ಝೆಬಿಸಿ’ಯನ್ನು ವಶಪಡಿಸಿಕೊಂಡಿರುವ ಸೇನಾ ಪಡೆ ಸಂಸ್ಥೆಯ ಸಿಬ್ಬಂದಿಗಳನ್ನು ಕಚೇರಿ ಬಿಟ್ಟು ತೊಲಗುವಂತೆ ಆದೇಶಿಸಿದೆ. ಕೆಲವರನ್ನು ಬಲವಂತವಾಗಿ ಹೊರಹಾಕಲಾಗಿದೆ ಎಂದು ಮಾನವ ಹಕ್ಕು ಕಾರ್ಯಕರ್ತ ಹೇಳಿದ್ದಾರೆ.

ಆಫ್ರಿಕದ ರಾಜಕೀಯದಲ್ಲಿ  ‘ಗ್ರಾಂಡ್ ಓಲ್ಡ್ ಮ್ಯಾನ್’ ಆಗಿರುವ ಮುಗಾಬೆ ಕಳೆದ 37 ವರ್ಷಗಳಿಂದ ಝಿಂಬಾಬ್ವೆಯಲ್ಲಿ ಆಡಳಿತ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News