20 ಸೆಕೆಂಡ್ ಬೇಗ ಹೊರಟಿದ್ದಕ್ಕೆ ಕ್ಷಮೆ ಯಾಚಿಸಿದ ಜಪಾನ್ ರೈಲು ಕಂಪೆನಿ

Update: 2017-11-17 07:17 GMT

ಟೋಕಿಯೋ,ನ.17 : ರೈಲೊಂದು ತನ್ನ ನಿಗದಿತ ಸಮಯಕ್ಕಿಂತ 20 ಸೆಕೆಂಡು ಬೇಗ ಹೊರಟಿದ್ದಕ್ಕಾಗಿ  ಟೋಕಿಯೋ ಸಬ್-ಅರ್ಬನ್ ರೈಲು ಸೇವೆಗಳನ್ನು ನಿರ್ವಹಿಸುವ ಖಾಸಗಿ ರೈಲ್ವೆ ಸಂಸ್ಥೆಯೊಂದು ಕ್ಷಮೆ ಕೋರಿದೆ.  ಟೋಕಿಯೋದ ಉತ್ತರ ದಿಕ್ಕಿನಲ್ಲಿರುವ ಮಿನಾಮಿ ನಗರೆಯಮ ನಿಲ್ದಾಣದಿಂದ ಮಂಗಳವಾರ ಬೆಳಿಗ್ಗೆ  ತ್ಸುಕುಬ ಎಕ್ಸ್ ಪ್ರೆಸ್ ರೈಲು ಹೊರಟಾಗ ಅದರಲ್ಲಿದ್ದ ಅಷ್ಟೂ ಪ್ರಯಾಣಿಕರಿಗೆ ಏನಾದರೂ ಪ್ರಮಾದವಾಗಿರಬಹುದೆಂಬುದರ ಒಂದಿನಿತೂ ಸುಳಿವು ಇರಲಿಲ್ಲ. ನಡೆದಿದ್ದಿಷ್ಟೇ. ಬೆಳಿಗ್ಗೆ 9.44.40ಕ್ಕೆ ನಿಲ್ದಾಣ ಬಿಡಬೇಕಿದ್ದ ರೈಲು 20 ಸೆಕೆಂಡುಗಳಷ್ಟು ಬೇಗ ಅಂದರೆ 9.44.20 ಗಂಟೆಗೆ ಹೊರಟಿತ್ತು.

ಆದರೆ ರೈಲು ನಿರ್ವಹಣಾ ಸಂಸ್ಥೆ ಮಾತ್ರ ಇದೊಂದು ಗಂಭೀರ ಪ್ರಮಾದವೆಂಬಂತೆ ರೈಲು ಬೇಗ ಹೊರಟಿದ್ದಕ್ಕೆ ಕ್ಷಮೆ ಕೋರಿ ಹೇಳಿಕೆ ನೀಡಿತ್ತು. ರೈಲಿನ ಕಂಡಕ್ಟರ್ ಸಮಯಸೂಚಿಯನ್ನು ಸರಿಯಾಗಿ ಗಮನಿಸಿರಲಿಲ್ಲ ಹಾಗೂ ಆತನಿಗೆ ಮುಂದೆ ಇಂತಹ ತಪ್ಪುಗಳಾಗದಂತೆ ನೋಡಿಕೊಳ್ಳಲು ಹೇಳಲಾಯಿತು ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದರೆ ಈ ಪ್ರಮಾದದಿಂದ ಯಾವ ಪ್ರಯಾಣಿಕರು ರೈಲು ತಪ್ಪಿಸಿಕೊಂಡಿಲ್ಲ. ಆದರೂ ರೈಲು ನಿರ್ವಹಣಾ ಸಂಸ್ಥೆ ಕ್ಷಮೆ ಕೇಳಿದೆ.

ರೈಲು 20 ಸೆಕೆಂಡು ಮುಂಚಿತವಾಗಿ ನಿಲ್ದಾಣದಿಂದ ನಿರ್ಗಮಿಸಿದ್ದರಿಂದ ಆ ರೈಲಿನಲ್ಲಿ ಹೊರಡಬೇಕಿದ್ದವರು ಸ್ವಲ್ಪ ಅನಾನುಕೂಲ ಅನುಭವಿಸಬೇಕಾಯಿತು. ಮುಂದಿನ ರೈಲು ನಾಲ್ಕು ನಿಮಿಷಗಳಲ್ಲಿ ರೈಲು ನಿಲ್ದಾಣದಲ್ಲಿತ್ತು. ತ್ಸುಕುಬ ಎಕ್ಸ್‍ಪ್ರೆಸ್  ಪ್ರತಿ ವರ್ಷ 13 ಕೋಟಿ ಪ್ರಯಾಣಿಕರನ್ನು  ಅಕಿಬಬರ ಹಾಗೂ ತ್ಸುಕುಬ ನಡುವೆ ಸಾಗಿಸುತ್ತದೆ. ಪ್ರಯಾಣದ ಅವಧಿ  45 ನಿಮಿಷ ಆಗಿದೆ.

ಜಪಾನೀಯರ ಸಮಯಪ್ರಜ್ಞೆ ಅದೆಷ್ಟೆಂದರೆ ಒಂದಿನಿತೂ ತಡವಾದರೂ ಅವರು ಕ್ಷಮೆ ಕೇಳಿಯೇ ಕೇಳುತ್ತಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಯ ವಿಷಯವಾಗಿದ್ದು ಇತರ ದೇಶಗಳ ರೈಲು ಸೇವೆಗಳ ಸಮಯ ಪರಿಪಾಲನೆಯಲ್ಲಿನ ನ್ಯೂನತೆಗಳತ್ತ ಕೆಲವರು ಗಮನ ಸೆಳೆದರು.

ಜಪಾನ್ ದೇಶದಲ್ಲಿ 2005ರಲ್ಲಿ ನಡೆದ ರೈಲು ಅಪಘಾತವೊಂದರಲ್ಲಿ 100 ಜನ ಸಾವನ್ನಪ್ಪಿದ್ದ ದುರಂತವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ರೈಲು ಎಲ್ಲಿ 90 ಸೆಕೆಂಡ್ ತಡವಾಗುವುದೋ ಎಂದು ಹೆದರಿ ಚಾಲಕ ವೇಗವಾಗಿ ಸಾಗಿದ ಪರಿಣಾಮ ರೈಲು ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ಒಂದಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News