ಮೂಗು ಕುಯ್ಯಲು ಹೊರಟ ಮೂಗಿಲ್ಲದವರು!

Update: 2017-11-17 18:48 GMT

ಭಾರತದ ಇತಿಹಾಸ ಸಂಗ್ರಹ ರೂಪ ಪಡೆದುದು ಬ್ರಿಟಿಷರ ಮೂಲಕ. ಭಾರತದ ಇತಿಹಾಸವನ್ನು ಸಂಗ್ರಹಿಸುವ ನೇರ ಕಾರ್ಯದಲ್ಲಿ ಅವರ ಪಾತ್ರ ಹಿರಿದಾಗಿದ್ದುದರಿಂದ, ಕೆಲವೊಮ್ಮೆ ಅದು ಬ್ರಿಟಿಷರ ಮೂಗಿನ ನೇರಕ್ಕೆ ರೂಪುಗೊಂಡಿರಬಹುದು. ಹಲವೆಡೆ ವಿರೂಪಗೊಂಡಿರಲೂ ಬಹುದು. ಆದರೆ ಅಲ್ಲಿಯವರೆಗೆ ತನ್ನ ಇತಿಹಾಸವನ್ನು ಪುರಾಣಗಳ ರೂಪಕಗಳನ್ನು ಒಡೆಯುತ್ತಾ ಹುಡುಕಬೇಕಾದಂತಹ ಸ್ಥಿತಿ ಭಾರತದ್ದಾಗಿತ್ತು. ಇತಿಹಾಸ ಮತ್ತು ಪುರಾಣ ಒಂದರೊಳಗೊಂದು ಸೇರಿಕೊಂಡು ಈ ಸಮಾಜವನ್ನು ಪುರೋಹಿತ ಶಾಹಿ ವ್ಯವಸ್ಥೆ ಅಂಧಕಾರದಲ್ಲಿಟ್ಟಿತು.

ಇಲ್ಲಿಯ ತಳಸ್ತರದ ಜನರಿಗೆ ತಮ್ಮ ನಿಜವಾದ ಇತಿಹಾಸ ಯಾವುದು ಎನ್ನುವುದು ಆ ಕಾಲದಲ್ಲಿ ಮಾತ್ರವಲ್ಲ, ಈ ಕಾಲದಲ್ಲೂ ಸ್ಪಷ್ಟವಿಲ್ಲ. ಯಾರು ತನ್ನವರು, ಯಾರು ತನ್ನ ಶತ್ರುಗಳು ಎನ್ನುವುದನ್ನು ತೀರ್ಮಾನ ಮಾಡುವ ಹಕ್ಕುಗಳನ್ನೇ ಕಳೆದುಕೊಂಡು ಭ್ರಮೆ ವಾಸ್ತವಗಳ ನಡುವಿನ ಇತಿಹಾಸದ ತ್ರಿಶಂಕು ಸ್ಥಿತಿಯಲ್ಲಿ ಇನ್ನೂ ನೇತಾಡುತ್ತಿದ್ದಾರೆ. ಬ್ರಿಟಿಷರ ವಿರುದ್ಧ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಎರಡು ರೀತಿಯ ಇತಿಹಾಸ ಸೃಷ್ಟಿಯಾಗುತ್ತಾ ಹೋಯಿತು. ಒಂದು, ಬ್ರಿಟಿಷರು ಇಡೀ ಭಾರತವನ್ನು ಸಂಘಟಿಸಿ ಅದರ ಇತಿಹಾಸದ ಬೇರುಗಳನ್ನು ತಡಕಾಡಿ, ತಮ್ಮ ಮೂಗಿನ ನೇರಕ್ಕೆ ಬರೆದ ಇತಿಹಾಸ. ಹಾಗೆಯೇ ಸ್ವಾತಂತ್ರ ಹೋರಾಟದ ಹೊತ್ತಿನಲ್ಲೇ ಹುಟ್ಟಿಕೊಂಡ ತಿಲಕರಂತಹ ರಾಷ್ಟ್ರೀಯವಾದಿಗಳು ತಮಗೆ ಬೇಕಾದ ಒಂದು ಇತಿಹಾಸವನ್ನು ಸೃಷ್ಟಿಸಿದರು. ಬಂಗಾಳಿ ಮತ್ತು ಮರಾಠಿ ಕಾದಂಬರಿಗಳು ಆ ಇತಿಹಾಸಕ್ಕೆ ಕೊಟ್ಟ ಕೊಡುಗೆ ಬಹುದೊಡ್ಡದು.

ಪುರಾಣದಿಂದ ಬಿಡಿಸಿಕೊಂಡ ಇತಿಹಾಸದ ನಗ್ನತೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ಈ ರಾಷ್ಟ್ರೀಯವಾದಿಗಳು ಅದಕ್ಕೆ ರಮ್ಯ, ರೋಚಕತೆಯನ್ನು ತುಂಬಿದರು. ಇತಿಹಾಸಕಾರರ ಜೊತೆಗೆ ಬಂಕಿಮಚಂದ್ರರಂತಹ ಕಾದಂಬರಿಕಾರರೂ ಇದರಲ್ಲಿ ಸೇರಿಕೊಂಡರು. ಇವುಗಳ ನಡುವೆ ಅಂಬೇಡ್ಕರ್ ಸಹಿತ ವಾಸ್ತವವಾದಿ ಬರಹಗಾರರು ಈ ದೇಶದ ತಳಸ್ತರದ ಜನರ ಕಣ್ಣಲ್ಲಿ ಇತಿಹಾಸವನ್ನು ನೋಡಲು ಪ್ರಯತ್ನಿಸಿದರು. ಇಂತಹ ವಾಸ್ತವಕ್ಕೆ ಹತ್ತಿರವಾಗಿರುವ ಇತಿಹಾಸದ ತಳಹದಿಯಲ್ಲಿ ಪ್ರಜಾಸತ್ತಾತ್ಮಕವಾದ ಭವಿಷ್ಯವೊಂದನ್ನು ಕಟ್ಟುವ ಪ್ರಯತ್ನವನ್ನು ನೆಹರೂ ಸೇರಿದಂತೆ ಎಲ್ಲ ನಾಯಕರು ಮಾಡುತ್ತಾ ಬಂದಿದ್ದಾರೆ. ಆದರೆ ಇದೀಗ ಮತ್ತೆ ‘ಹಿಂದುತ್ವ’ದ ಹೆಸರಲ್ಲಿ ಹುಸಿ ರಾಷ್ಟ್ರೀಯವಾದವೊಂದನ್ನು ಜಾಗೃತಗೊಳಿಸುವ ಜನರು ಮತ್ತೆ ವಿಜೃಂಭಿಸತೊಡಗಿದ್ದಾರೆ. ವಾಸ್ತವದ ಕಡೆಗೆ ಜನರ ಕಣ್ಣು ಹೊರಳದಂತೆ ಅವರನ್ನು ಇತಿಹಾಸದ ವಿಸ್ಮತಿಗೆ ತಳ್ಳುವುದು ಇವರ ಗುರಿಯಾಗಿದೆ. ಈ ಮೂಲಕ ಹಳೆಯದನ್ನೆಲ್ಲ ವೈಭವೀಕರಣಗೊಳಿಸಿ, ಮತ್ತೆ ಹಳೆಯ ಗುಲಾಮಗಿರಿಗೆ ದೇಶವನ್ನು ತಳ್ಳುವುದು ಇವರ ಗುರಿ. ಆದುದರಿಂದಲೇ, ಬಾಹುಬಲಿಯಂತಹ ಕಾಲ್ಪನಿಕ ಚಿತ್ರಗಳನ್ನು ವೈಭವೀಕರಿಸುತ್ತಾ ಜನರ ನಡುವಿಗೆ ತರಲಾಗುತ್ತಿದೆ.

ಶಿವಾಜಿಯ ನಿಜವಾದ ಚರಿತ್ರೆಯನ್ನು ಮರೆ ಮಾಡಿ, ಈ ನಾಡನ್ನು ಲೂಟಿ ಮಾಡಿದ ಪೇಶ್ವೆಗಳನ್ನು ವೈಭವೀಕರಿಸುವ ಸಿನೆಮಾಗಳು ಬರುತ್ತಿವೆ. ಈ ದೇಶವನ್ನು ಶೋಷಿಸಿದ ಪ್ರಬಲ ಮೇಲ್ಜಾತಿ ರಾಜರಾಗಿರುವ ರಜಪೂತ, ಠಾಕೂರ್, ಪೇಶ್ವೆ ಮೊದಲಾದವರನ್ನು ವೈಭವೀಕರಿಸುತ್ತಾ ದೇಶದ ಅಮಾಯಕ ಜನರನ್ನು ವಂಚಿಸುವುದಕ್ಕೆ ತೊಡಗಿದ್ದಾರೆ. ಜನರು ಇಂದು ಇತಿಹಾಸವನ್ನು ರಮ್ಯ ಕಾದಂಬರಿಗಳಲ್ಲಿ, ಟಿವಿ ಸೀರಿಯಲ್‌ಗಳಲ್ಲಿ, ಕಮರ್ಶಿಯಲ್ ಸಿನೆಮಾಗಳಲ್ಲಿ ನೋಡಿ ಆನಂದಿಸುತ್ತಿದ್ದಾರೆ. ಅದರ ಪರಿಣಾಮವಾಗಿಯೇ ಇತಿಹಾಸ ಕತೆಗಳಾಧಾರಿತ ಚಿತ್ರಗಳು ವಿವಾದಗಳಾಗತೊಡಗಿವೆ. ‘ರಾಣಿ ಪದ್ಮಾವತಿ’ ಚಿತ್ರದ ವಿವಾದದ ಹಿಂದೆಯೂ ಈ ಹುಸಿ ರಾಷ್ಟ್ರೀಯವಾದಿಗಳ ಸಾಂಸ್ಕೃತಿಕ ರಾಜಕಾರಣ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ.

ಅಲ್ಲಾವುದ್ದೀನ್ ಖಿಲ್ಜಿಯು ರಾಣಿ ಪದ್ಮಿನಿಯನ್ನು ಇಷ್ಟಪಡುವುದು, ಅವಳ ಮೇಲಿನ ಪ್ರೀತಿಗಾಗಿ ಆಕೆಯ ರಾಜ್ಯದ ಮೇಲೆ ದಾಳಿ ಮಾಡಿ ರಜಪೂತ ರಾಜನನ್ನು ಸೋಲಿಸುವುದು ಮತ್ತು ಖಿಲ್ಜಿಯಿಂದ ಪಾರಾಗಲು ಇಡೀ ಅಂತಃಪುರದ ಮಹಿಳೆಯರು ಬೆಂಕಿಗೆ ಹಾರುವುದು ನಾವೆಲ್ಲ ಅಮರ ಚಿತ್ರ ಕತೆಯಲ್ಲಿ ಓದಿಕೊಂಡು ಬಂದ ಇತಿಹಾಸ. ಈ ಕತೆಯಲ್ಲಿ ಅರ್ಧ ಇತಿಹಾಸವಿದೆ. ಇನ್ನರ್ಧ ಕಲ್ಪನೆಯಿದೆ. ಹುಸಿ ರಾಷ್ಟ್ರೀಯವಾದಿಗಳ ಇತಿಹಾಸ ಇಲ್ಲಿ ಖಿಲ್ಜಿಯನ್ನು ರಾಕ್ಷಸರೂಪದಲ್ಲಿಯೂ, ರಜಪೂತರನ್ನು ಹಿಂದುತ್ವದ ಪುನರುತ್ಥಾನಕನ ರೂಪದಲ್ಲೂ ನೋಡಲು ಬಯಸುತ್ತಿದೆ. ರಾಣಿ ಪದ್ಮಿನಿ ಎನ್ನುವ ಮಹಿಳೆ ಭಾರತೀಯ ನಾರಿಯ ಪ್ರತಿನಿಧಿಯೆಂದು ಬಿಂಬಿಸುತ್ತದೆ. ಹುಸಿ ರಾಷ್ಟ್ರೀಯತೆಯ ಪ್ರಧಾನ ಲಕ್ಷಣವಾಗಿರುವ ಕ್ಷಾತ್ರಗುಣಗಳನ್ನು ಆವಾಹಿಸಿಕೊಂಡಿರುವ ರಮ್ಯ, ರೋಚಕ ಹಾಗೂ ಉದಾತ್ತ ಪಾತ್ರಗಳು ಇವು. ಇತಿಹಾಸ ಇಷ್ಟು ಕಪ್ಪು ಬಿಳುಪಾಗಿ ಇರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಾಸ್ತವ.

ರಜಪೂತರು ಪದೇ ಪದೇ ಯುದ್ಧಗಳಲ್ಲಿ ಯಾಕೆ ಸೋಲುತ್ತಿದ್ದರು ಎನ್ನುವುದಕ್ಕೆ ಅವರ ಲೋಲುಪ ಬದುಕೇ ಮುಖ್ಯ ಕಾರಣ ಎಂದು ಇತಿಹಾಸತಜ್ಞನೊಬ್ಬರು ಬಣ್ಣಿಸುತ್ತಾರೆ. ಆ ಕಾರಣಕ್ಕಾಗಿಯೇ ಸಹಸ್ರ ಮೈಲು ದೂರದಿಂದ ಬಂದ ರಾಜರುಗಳ ಕೈಯಲ್ಲಿ ಇವರೆಲ್ಲ ಪದೇ ಪದೇ ಸೋಲಬೇಕಾಗುತ್ತದೆ. ಪೇಶ್ವೆಗಳು ಕರ್ನಾಟಕ, ಬಂಗಾಳ ಸೇರಿದಂತೆ ನಾಡಿನ ವಿವಿಧೆಡೆ ನಡೆಸಿದ ಲೂಟಿ, ಅವರು ನಾಶ ಮಾಡಿದ ದೇವಸ್ಥಾನಗಳ ಪಟ್ಟಿಗಳ ಕಡೆಗೊಮ್ಮೆ ಕಣ್ಣಾಯಿಸಿದರೆ ಈ ಹುಸಿ ರಾಷ್ಟ್ರೀಯವಾದಿಗಳ ಇತಿಹಾಸದ ನಿಜ ಬಣ್ಣ ಬಯಲಾಗುತ್ತದೆ. ‘ರಾಣಿ ಪದ್ಮಾವತಿ’ ಸಂಪೂರ್ಣ ಇತಿಹಾಸ ಆಧಾರಿತವಾದ ಚಿತ್ರವಲ್ಲ. ಪದ್ಮಾವತಿಯೇ ಸಂಪೂರ್ಣ ಇತಿಹಾಸದ ಭಾಗವಲ್ಲ ಎಂದ ಮೇಲೆ, ಈ ಚಿತ್ರ ಇತಿಹಾಸದ ಭಾಗವಾಗುವುದು ಸಾಧ್ಯವೂ ಇಲ್ಲ.

ಒಂದು ಕಮರ್ಶಿಯಲ್ ಮನರಂಜನಾ ಚಿತ್ರಕ್ಕೆ ಬೇಕಾದ ರಮ್ಯ, ರೋಚಕತೆಯನ್ನು ತುಂಬಿ ಈ ಚಿತ್ರವನ್ನು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮಾಡಿದ್ದಾರೆ. ಬಿಜೆಪಿಯ ನಾಯಕರೊಬ್ಬರು ಹೇಳುವಂತೆ ‘ಇದನ್ನು ಸಿನೆಮಾ ಆಗಿ ನೋಡಬೇಕೇ ಹೊರತು ಇತಿಹಾಸವಾಗಿ ಅಲ್ಲ’ ಎನ್ನುವುದು ಇಂದಿನ ವಿವಾದಕ್ಕೆ ಇರುವ ಅತ್ಯುತ್ತಮ ಪರಿಹಾರವಾಗಿದೆ. ಈ ಹಿಂದೆ ಕಮಲ್ ಹಾಸನ್ ಅವರು ‘ವಿಶ್ವರೂಪಂ’ ಚಿತ್ರ ಮಾಡಿದಾಗ, ಭಯೋತ್ಪಾದನೆಯನ್ನು ಬ್ಲಾಕ್ ಆ್ಯಂಡ್ ವೈಟ್ ಆಗಿ ನೋಡಲಾಗಿದೆ ಎಂದು ಕೆಲವು ವಾಸ್ತವವಾದಿಗಳು ಟೀಕೆ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ಜಯಲಲಿತಾ ನೇತೃತ್ವದ ಸರಕಾರ ಕೆಲವು ರಾಜಕೀಯ ಕಾರಣಗಳಿಗಾಗಿ ಒಂದಿಷ್ಟು ಮುಸ್ಲಿಮರನ್ನು ಬಳಸಿಕೊಂಡು ಚಿತ್ರವನ್ನು ತಡೆಯುವ ಪ್ರಯತ್ನ ಕೂಡ ಮಾಡಿತ್ತು. ಆದರೆ ಅದು ವಿಫಲವಾಯಿತು.

ಆದರೆ ಇದೀಗ ‘ಪದ್ಮಾವತಿ’ ಚಿತ್ರದಲ್ಲಿ ಅದು ಇನ್ನೊಂದು ರೂಪ ಪಡೆದಿದೆ. ಮತ್ತು ಅದಕ್ಕಿಂತಲೂ ಪ್ರಬಲವಾದ ಪ್ರತಿಭಟನೆ ವ್ಯಕ್ತವಾಗಿದೆ. ರಜಪೂತರು ಮಾತ್ರವಲ್ಲದೆ, ಹುಸಿ ರಾಷ್ಟ್ರೀಯವಾದ ಪ್ರತಿಪಾದನೆಯ ಹಿಂದಿರುವ ರಾಜಕೀಯ ಶಕ್ತಿಗಳು ಇವರ ಜೊತೆ ಸೇರಿಕೊಂಡಿವೆ. ಚಿತ್ರವನ್ನು ನೋಡದೆಯೇ ಚಿತ್ರದಲ್ಲಿ ಪದ್ಮಾವತಿಯನ್ನು ಅವಮಾನಿಸಲಾಗಿದೆ ಎಂದು ತಕರಾರು ತೆಗೆದಿದೆ. ಅಷ್ಟೇ ಅಲ್ಲ, ಶೂರ್ಪನಖಿಯ ಮೂಗು ಕತ್ತರಿಸಿದಂತೆ ನಟಿ ದೀಪಿಕಾ ಅವರ ಮೂಗು ಕತ್ತರಿಸುತ್ತೇವೆ ಎಂದು ಹೇಳುತ್ತಿರುವ ಹುಸಿ ರಾಷ್ಟ್ರೀಯವಾದಿಗಳು ತಮಗೆ ಮೂಗಿಲ್ಲ ಎನ್ನುವುದನ್ನು ದೇಶಕ್ಕೆ ಜಾಹೀರು ಪಡಿಸಿದ್ದಾರೆ. ಹಾಗೆಯೇ ಚಿತ್ರದ ನಿರ್ಮಾಪಕನ ತಲೆಕತ್ತರಿಸುವ ಫತ್ವಾಗಳೂ ಹೊರಟಿವೆ. ಇತಿಹಾಸ, ಸಿನೆಮಾ ಎರಡರ ಕುರಿತೂ ಅರಿವಿಲ್ಲದ, ಕೇವಲ ರಾಜಕೀಯ ಉದ್ದೇಶವನ್ನಷ್ಟೇ ಇಟ್ಟುಕೊಂಡು ನಡೆಸುತ್ತಿರುವ ಈ ಪ್ರತಿಭಟನೆ ಹೀಗೆ ಮುಂದುವರಿದರೆ, ಬೀದಿ ಪುಂಡರಿಂದ ನಿರ್ಮಾಣಗೊಳ್ಳುವ ಹೊಸ ಇತಿಹಾಸ ಓದಬೇಕಾದಂತಹ ಸನ್ನಿವೇಶ ಭವಿಷ್ಯದ ಭಾರತಕ್ಕೆ ಒದಗಬಹುದು.

ಇತಿಹಾಸವನ್ನು ಓದಿದವರು ಮೊದಲು ಸಿನೆಮಾ ನೋಡಲಿ. ಸರಿ ತಪ್ಪುಗಳನ್ನು ಅವರು ತೀರ್ಮಾನಿಸಲಿ. ಜೊತೆಗೆ ಸಿನಿಮಾದಲ್ಲಿ ಏನಿರಬೇಕು, ಏನಿರಬಾರದು ಎನ್ನುವುದನ್ನು ತೀರ್ಮಾನಿಸುವುದಕ್ಕಾಗಿಯೇ ಸೆನ್ಸಾರ್ ಮಂಡಳಿಯಿದೆ. ತಜ್ಞರಿದ್ದಾರೆ. ಕಾನೂನಿದೆ. ನ್ಯಾಯಾಲಯವಿದೆ. ಈ ವ್ಯವಸ್ಥೆಯೇ ಅವುಗಳನ್ನು ತೀರ್ಮಾನಿಸಬೇಕು. ಇತಿಹಾಸವಾಗಲಿ, ಸಿನೆಮಾ ಆಗಲಿ, ಅದರೊಳಗೆ ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ತೀರ್ಮಾನಿಸುವ ಹೊಣೆಗಾರಿಕೆಯನ್ನು ಬೀದಿ ಬದಿಯ ಪುಂಡರು, ಕ್ರಿಮಿನಲ್‌ಗಳ ಕೈಗೆ ಒಪ್ಪಿಸಿದ್ದೇ ಆದರೆ, ಈ ದೇಶದ ಪ್ರಜಾಸತ್ತೆಗೆ ಏನು ಅರ್ಥ ಉಳಿಯಿತು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News