ರಾಜೇ ಸರಕಾರದ ಸುಗ್ರೀವಾಜ್ಞೆಗೆ ವಿರೋಧ: ರಾಜಸ್ಥಾನದ ಪ್ರಮುಖ ಪತ್ರಿಕೆ ಪ್ರತಿಭಟಿಸಿದ್ದು ಹೀಗೆ...

Update: 2017-11-18 04:55 GMT
ಸಿಎಂ ವಸುಂಧರರಾಜೆ

ಜೈಪುರ, ನ. 18: ಸಾರ್ವಜನಿಕ ಸೇವಕರು ಮತ್ತು ನ್ಯಾಯಮೂರ್ತಿಗಳನ್ನು ರಕ್ಷಿಸುವ ಹಾಗೂ ಮಾಧ್ಯಮ ಕವರೇಜ್ ಮೇಲೆ ನಿರ್ಬಂಧ ಹೇರುವ ಸಂಬಂಧ ರಾಜಸ್ಥಾನ ಸರ್ಕಾರ ಇತ್ತೀಚೆಗೆ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ವಿರೋಧಿಸಿ ಪ್ರಮುಖ ಹಿಂದಿ ದೈನಿಕವಾದ ರಾಜಸ್ಥಾನ್ ಪತ್ರಿಕಾ, ರಾಷ್ಟ್ರೀಯ ಪತ್ರಿಕಾ ದಿನದಂದು ಖಾಲಿ ಸಂಪಾದಕೀಯವನ್ನು ಪ್ರಕಟಿಸಿದೆ.

ಸಂಪಾದಕೀಯ ಜಾಗದ ಮೇಲೆ ಟಿಪ್ಪಣಿ ಪ್ರಕಟಿಸಿ, "ಇಂದು ರಾಷ್ಟ್ರೀಯ ಪತ್ರಿಕಾ ದಿನ. ಸ್ವತಂತ್ರ ಹಾಗೂ ಜವಾಬ್ದಾರಿಯುತ ಪತ್ರಿಕೆಗಳ ದಿನ ಇದು. ಆದರೆ ರಾಜಸ್ಥಾನದಲ್ಲಿ ರಾಜ್ಯ ಸರ್ಕಾರದ ಕರಾಳ ಕಾನೂನಿನಿಂದಾಗಿ ಇದಕ್ಕೆ ಅಪಾಯ ಒದಗಿದೆ. ಸಂಪಾದಕೀಯ ಸ್ಥಳವನ್ನು ಖಾಲಿ ಬಿಡುವ ಮೂಲಕ ಈ ಕರಾಳ ಕಾನೂನನ್ನು ನಾವು ವಿರೋಧಿಸುತ್ತಿದ್ದೇವೆ" ಎಂದು ಸ್ಪಷ್ಟಪಡಿಸಿದೆ.

ಈ ಮಧ್ಯೆ ರಾಜಸ್ಥಾನ ಹೈಕೋರ್ಟ್ ಶುಕ್ರವಾರ ಈ ವಿವಾದಾತ್ಮಕ ಸುಗ್ರೀವಾಜ್ಞೆಯನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಬಣ್ಣಿಸಿದ್ದು, ಈ ಕಾನೂನು ಅನುಷ್ಟಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ರಾಜ್ಯ ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸರ್ಕಾರದ ಪ್ರತಿಕ್ರಿಯೆ ಸಲ್ಲಿಸುವವರೆಗೆ, ಈ ಸುಗ್ರೀವಾಜ್ಞೆಯಡಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಮುಚ್ಚಳಿಕೆ ನೀಡುವಂತೆ ಮುಖ್ಯಮಂತ್ರಿ ವಸುಂಧರರಾಜೆ ಸರ್ಕಾರಕ್ಕೆ ಸೂಚಿಸಿದೆ. ನವೆಂಬರ್ 22ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ಈ ಸುಗ್ರೀವಾಜ್ಞೆ ವಿರುದ್ಧ 9 ಅರ್ಜಿಗಳು ಸಲ್ಲಿಕೆಯಾಗಿವೆ.

ಈ ವಿವಾದಾಸ್ಪದ ಸುಗ್ರೀವಾಜ್ಞೆಯ ಅನ್ವಯ, ಹಾಲಿ ಹಾಗೂ ನಿವೃತ್ತ ಸಾರ್ವಜನಿಕ ಸೇವಕರು ಮತ್ತು ನ್ಯಾಯಮೂರ್ತಿಗಳ ವಿಚಾರಣೆ ನಡೆಸುವಂತಿಲ್ಲ. ಇಂಥ ವಿಚಾರಣೆಗೆ ಆದೇಶ ನೀಡುವ ಮುನ್ನ ಮ್ಯಾಜಿಸ್ಟ್ರೇಟ್ ರಾಜ್ಯ ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಇಂಥ ಪ್ರಕರಣಗಳ ಬಗ್ಗೆ ಸುದ್ದಿಗಳನ್ನು ಪ್ರಕಟಿಸುವ ಪತ್ರಕರ್ತರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲೂ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News