ಅನಾರೋಗ್ಯ ಪೀಡಿತ ದನ ಸಾಗಾಟಕ್ಕೆ ಮೋದಿ, ಅಮಿತ್ ಶಾ ಸಹಾಯ ಯಾಚಿಸಿದ ಯುವತಿ

Update: 2017-11-18 07:58 GMT

ಲಕ್ನೋ,ನ.18 : ಇಪ್ಪತ್ನಾಲ್ಕು ವರ್ಷದ ಜ್ಯೋತಿ ಠಾಕುರ್ ಎಂಬಿಎ ಪದವೀಧರೆ. ಮೀರತ್ ಜಿಲ್ಲೆಯ ಲಾಲಾ ಮುಹಮ್ಮದ್ ಪುರ್ ಗ್ರಾಮದವಳಾಗಿರುವ  ಈಕೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ ಹಲವು ದಿನಗಳಿಂದ ಆಕೆ ಕೆಲಸಕ್ಕೆ ಹಾಜರಾಗಿಲ್ಲ, ತನ್ನ ಊರಾದ ಮೀರತ್ ನಲ್ಲಿಯೇ ಇರುವ ಜ್ಯೋತಿ  ಒಂದು ವಿಚಿತ್ರ ಸಮಸ್ಯೆಯಲ್ಲಿದ್ದಾರೆ. ಆಕೆಯ ಏಳು ವರ್ಷದ ದನವೊಂದು ಪಾಶ್ರ್ವವಾಯುವಿಗೆ ತುತ್ತಾಗಿದೆ. ಅದನ್ನು ತುರ್ತಾಗಿ ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ  ಕರೆದೊಯ್ಯಬೇಕಿದೆ. ಆದರೆ ದನವನ್ನು ತಮ್ಮ ವಾಹನದಲ್ಲಿ ಕರೆದೊಯ್ಯಲು ಯಾರೂ ಸಿದ್ಧರಿಲ್ಲ. ಕಾರಣ- ಗೋರಕ್ಷಕರ ದಾಳಿಯ ಭಯ. ಎಲ್ಲಿ ಗೋರಕ್ಷಕರ ದಾಳಿಗೆ ತುತ್ತಾಗಿ ಸಮಸ್ಯೆಗೀಡಾಗಬಹುದೋ ಎಂಬ ಭಯದಲ್ಲಿ ಯಾರೂ  ತಮ್ಮ ವಾಹನದಲ್ಲಿ ದನವನ್ನು ಸಾಗಿಸಲು ಒಪ್ಪುತ್ತಿಲ್ಲ.

ನವೆಂಬರ್ 13ರಿಂದ ಸಹಾಯ ಯಾಚಿಸಿ ಜ್ಯೋತಿ ಪ್ರಧಾನಿ ಮೋದಿಯಿಂದ ಹಿಡಿದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಗೃಹ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ, ಜವುಳಿ ಸಚಿವೆ ಸ್ಮೃತಿ ಇರಾನಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಹೀಗೆ ಹಲವರಿಗೆ  ಟ್ವೀಟ್  ಮಾಡಿದರೂ ಪ್ರಯೋಜನವಾಗಿಲ್ಲ.

ಆಕೆಯ ಪ್ರೀತಿಯ ದನದ ಹೆಸರು ಮೋನಿ. ಅಕ್ಟೋಬರ್ 28ರಂದು ಮೊದಲು ಅನಾರೋಗ್ಯಕ್ಕೀಡಾದ ಅದಕ್ಕೆ ಸ್ಥಳೀಯ ಖಾಸಗಿ ಪಶುವೈದ್ಯರೊಬ್ಬರು ಚಿಕಿತ್ಸೆ ನೀಡಿದ ನಂತರ ಸ್ವಲ್ಪ ಗುಣಮುಖಳಾಗಿದ್ದರೂ ಮತ್ತೆ ಅನಾರೋಗ್ಯಕ್ಕೀಡಾಗಿತ್ತು. ನಂತರ ವೈದ್ಯರು ಆಧುನಿಕ ಚಿಕಿತ್ಸಾ ಸೌಲಭ್ಯವಿರುವ ಬರೇಲಿಯ ಸಂಸ್ಥೆಗೆ ಕರೆದೊಯ್ಯಲು ಹೇಳಿದರೂ ಅದು ಆಕೆಗೆ ವಾಹನ ದೊರೆಯದೆ ಸಾಧ್ಯವಾಗುತ್ತಿಲ್ಲ.

"ಜ್ಯೋತಿಯ ದೂರಿನ ಹಿನ್ನೆಲೆಯಲ್ಲಿ ವೈದ್ಯರ ತಂಡವೊಂದನ್ನು ಆಕೆಯ ಮನೆಗೆ ನವೆಂಬರ್ 5ರಂದು ಕಳುಹಿಸಲಾಯಿತು. ದನದ ಹಿಂಬದಿ ಭಾಗ ಪಾಶ್ರ್ವವಾಯು ಪೀಡಿತವಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ, ಆದರೆ ಬೇರೆಡೆಗೆ ಸಾಗಿಸಲು ವಾಹನ ಒದಗಿಸುವ ವ್ಯವಸ್ಥೆ ನಮ್ಮಲ್ಲಿಲ್ಲ,'' ಎಂದು ಮುಖ್ಯ ಪಪಶುವೈದ್ಯಕೀಯ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News